ಬಡತನ, ಹಸಿವು, ಶಿಕ್ಷಣದ ಮಹತ್ವ ಸಾರಿದ ಸಿದ್ಧಗಂಗಾ ಶ್ರೀ

ಬೀದರ್:ಎ.3:ನಾಡಿನ ಜನರಿಗೆ ಬಡತನ, ಹಸಿವು, ಶಿಕ್ಷಣದ ಮಹತ್ವ ಸಾರಿ ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಆಸರೆಯಾದವರು ಸಿದ್ಧಗಂಗಾದ ಶಿವಕುಮಾರ ಸ್ವಾಮೀಜಿ ಎಂದು ಶಿಕ್ಷಕ ಗಣಪತಿ ಬಿರಾದರ ಹೇಳಿದರು.
ಭಾಲ್ಕಿ ತಾಲ್ಲೂಕಿನ ತೇಗಂಪೂರ ಗ್ರಾಮದ ಸಿದ್ಧಗಂಗಾ ಸ್ಮಾರಕದಲ್ಲಿ ಶ್ರೀ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಮತ್ತು ಹಿತೈಷಿಗಳ ಸಂಘ, ಸಿದ್ಧಗಂಗಾ ಶ್ರೀ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಶಿವಕುಮಾರ ಸ್ವಾಮೀಜಿ ಅವರ 116 ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿವಕುಮಾರ ಸ್ವಾಮೀಜಿ ದೇಶ, ಭಾಷೆ, ಸೀಮೆಯನ್ನು ಮೀರಿ ಮಾನವೀಯತೆಯ ಮೌಲ್ಯವನ್ನು ವಿಶ್ವಕ್ಕೆ ಸಾರಿದ ಮಹಾನ್ ಸಂತ ಆಗಿದ್ದರು. ಅವರ ಆಶಯದಂತೆ ಜೀವನ ನಡೆಸುವುದು ನಮ್ಮೆಲ್ಲರ ಗುರಿಯಾಗಬೇಕು ಎಂದು ತಿಳಿಸಿದರು.
ಶ್ರೀ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಮತ್ತು ಹಿತೈಷಿಗಳ ಸಂಘ, ಸಿದ್ಧಗಂಗಾ ಶ್ರೀ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಶಿವಕುಮಾರ ಪಾಟೀಲ ತೇಗಂಪೂರ ಮಾತನಾಡಿ, 111 ವರ್ಷಗಳ ತಮ್ಮ ಜೀವಿತಾವಧಿಯಲ್ಲಿ ಶಿವಕುಮಾರ ಶ್ರೀ ನಡೆಸಿದ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಬದಲಾವಣೆಯ ಕ್ರಾಂತಿ ಅನುಮಪವಾದದ್ದು. ಸ್ವಾಮೀಜಿ ಎಂದರೆ ಹೇಗಿರಬೇಕು ಎಂದು ಬದುಕಿ ತೋರಿಸಿದ ಶ್ರೀಗಳು ಕಾವಿಯ ಘನತೆಯನ್ನು ಹೆಚ್ಚಿಸಿದ್ದರು. ಪೂಜ್ಯರ ದೂರದೃಷ್ಟಿತ್ವದ ಚಿಂತನೆ, ಕಾಯಕದ ಅನುಷ್ಠಾನ ಪದಗಳಿಗೆ ನಿಲುಕದ ಸಾಧನೆ ಆಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಸಾವಿರಾರೂ ಸಂಖ್ಯೆಯಲ್ಲಿ ಸಿದ್ಧಗಂಗಾ ಮಠದ ಹಳೇ ವಿದ್ಯಾರ್ಥಿಗಳಿದ್ದು, ಸರ್ವರೂ ಸಿದ್ಧಗಂಗಾ ಶ್ರೀಗಳ ತತ್ವ, ಆದರ್ಶಗಳಂತೆ ಜೀವನ ನಡೆಸಿ ಪೂಜ್ಯರ ಕಾರ್ಯಗಳನ್ನು ಜನಮನಕ್ಕೆ ತಲುಪಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಂಗೀತ, ಭಜನೆ, ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ನಂತರ ಭಕ್ತಾದಿಗಳಿಗೆ ದಾಸೋಹ ನಡೆಯಿತು.
ಶ್ರೀಮಠದ ಹಳೆಯ ವಿದ್ಯಾರ್ಥಿಗಳಾದ ಸುಭಾಷ ಪಾಟೀಲ, ಪುಂಡಲೀಕ ಪಾಟೀಲ ಗುಮ್ಮಾ, ಸಂಜು ಸ್ವಾಮಿ ಉಜನಿ, ರೇವಣಪ್ಪ ಪಾಟೀಲ, ಪ್ರೇಮ ಪ್ರಭಾ, ಜಗನ್ನಾಥ ಬಿರಾದಾರ, ಜಾಲಿಂದರನಾಥ ಪಾಟೀಲ, ಹಣಮಂತ ಬಳತೆ, ತುಳಸಿರಾಮ ಮೀರಕಲೆ, ಅಮಿತ್ ಪಾಟೀಲ ಇದ್ದರು.ರವಿ ನಿರೂಪಿಸಿ, ವಂದಿಸಿದರು.