ಬಡತನ ನಿರ್ಮೂಲನೆ ದಿನ


ಚೆನ್ನಾಗಿ ದುಡಿದು, ಹೊಟ್ಟೆ ಬಟ್ಟೆಗೆ ಸಾಕಾಗುವಷ್ಟು ಗಳಿಸಿ, ಮಿಗಿಸಿ ಆಶ್ರಯಕ್ಕೊಂದು ಮನೆ ಕಟ್ಟಿಕೊಂಡು, ಕಷ್ಟಕಾಲಕ್ಕಿರಲಿ ಎಂದು ಒಂದಿಷ್ಟು ದುಡ್ಡು ಕೂಡಿಟ್ಟುಕೊಳ್ಳುವ ಕನಸು ಎಲ್ಲರದ್ದು. ಆದರೆ ಎಷ್ಟು ಜನರಿಗೆ ಅದು ಸಾಧ್ಯದ ಮಾತು? ಎಷ್ಟು ಜನರಿಗೆ ಅದು ಬರಿಯ ಕನಸು?

ಬಡತನ ಎಂದರೆ ಅವಮಾನ, ಬಡತನ ಎಂದರೆ ಅಸಹಾಯಕತೆ, ಬಡತನ ಎಂದರೆ ಮಜಬೂರಿತನ, ಬಡತನ ಎಂದರೆ ಸಂಘರ್ಷ, ಬಡತನ ಎಂದರೆ ನೋವು, ಬಡತನ ಎಂದರೆ ಅಸಹನೀಯ ಹೊಂದಾಣಿಕೆ. ಸಮಾಜದಲ್ಲಿ ಬಡತನ ಒಂದು ಸಮಸ್ಯೆಯಷ್ಟೇ ಅಲ್ಲ, ಅದು ಹಲವು ಸಮಸ್ಯೆಗಳ ಫಲ ಮತ್ತು ಹಲವು ಸಮಸ್ಯೆಗಳಿಗೆ ಕಾರಣ. ಬಡತನ ಅನ್ನ ಮತ್ತು ಸ್ವಾಭಿಮಾನದ ಮಧ್ಯೆ ಒಂದನ್ನು ಆಯ್ದುಕೊಳ್ಳುವ ಅನಿವಾರ್ಯತೆ ಸೃಷ್ಟಿಸುತ್ತದೆ.

ಜಗತ್ತಿನಲ್ಲಿ ಶ್ರೀಮಂತರು ಇರುವಂತೆ ಬಡವರೂ ಇದ್ದಾರೆ. ಬಡತನ ಎಂಬುದು ಮನುಕುಲಕ್ಕೆ ಅಂಟಿದ ಶಾಪವೆಂದೇ ಹೇಳಬಹುದು. ಅದರಲ್ಲೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಮತ್ತು ಅಭಿವೃದ್ಧಿಯಲ್ಲಿ ಹಿಂದುಳಿದ ರಾಷ್ಟ್ರಗಳಲ್ಲಿ ಈ ಬಡತನದ ಪ್ರಮಾಣ ಇನ್ನೂ ಹೆಚ್ಚು. ಅದರಲ್ಲೂ ಭಾರತ ಸೇರಿದಂತೆ ಇನ್ನೂ ಕೆಲವು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಸರ್ವತೋಮುಖ ಅಭಿವೃದ್ಧಿಗೆ ಈ ಬಡತನವೇ ತೊಡಕಾಗಿ ಪರಿಣಾಮಿಸಿದೆ.

ಈ ಬಡತನ ನಿರ್ಮೂಲನೆಗೆ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವಿಶ್ವಸಂಸ್ಥೆಯಂತೂ ಈ ಬಡತನ ನಿರ್ಮೂಲನೆಗಾಗಿ ಒಂದು ದಿನವನ್ನೇ ಮೀಸಲಾಗಿಟ್ಟಿದೆ. ಅದುವೇ ಅಕ್ಟೋಬರ್‌ 17. ಈ ದಿನವನ್ನು ವಿಶ್ವದೆಲ್ಲೆಡೆ ಬಡತನ ನಿರ್ಮೂಲನೆ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನಾಚರಣೆಯನ್ನು ಅಧಿಕೃತವಾಗಿ ಆರಂಭಿಸಿದ್ದು ವಿಶ್ವಸಂಸ್ಥೆಯಾದರೂ ಅದಕ್ಕಿಂತಲೂ ಮೊದಲು 1987 ರಲ್ಲಿ ಪ್ಯಾರಿಸ್‌ನಲ್ಲಿ ಸುಮಾರು ಒಂದು ಲಕ್ಷ ಕ್ಕೂ ಅಧಿಕ ಜನ ಭಾಗವಹಿಸಿದ್ದ ಸಭೆಯೊಂದು ಬಡತನ, ಹಸಿವು ಮತ್ತು ಹಿಂಸೆ ತಡೆಯುವ ಕುರಿತು ನಿರ್ಣಯವೊಂದನ್ನು ಕೈಗೊಂಡಿತ್ತು. ಇದರಲ್ಲಿ ಬಡನತವೆಂಬುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಎಲ್ಲರಿಗೂ ಉತ್ತಮ ಗುಣಮಟ್ಟದ ಜೀವನವನ್ನು ನಡೆಸುವ ಹಕ್ಕಿದೆ ಎಂದು ಪ್ರತಿಪಾದಿಸಿತ್ತು. ಈ ದಿನ ಬಡತನ ನಿರ್ಮೂಲನೆ ಕುರಿತು ವಿವಿಧ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತವೆ.

ಭಾರತ ಬಡ ದೇಶ ಎಂಬ ಟೀಕೆ, ಮೂದಲಿಕೆ ಹೊಸದಲ್ಲ. ಇದು ನಮ್ಮನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ ಹಾಗೂ ಶಾಪ. ಅಲ್ಲದೆ ಇದರಿಂದ ನಾವು ಜಾಗತಿಕ ಮಟ್ಟದಲ್ಲಿ ಮುಜುಗರ ಅನುಭವಿಸಿರುವುದೂ ಹೌದು. ಹೀಗಾಗಿಯೇ ನಮ್ಮ ಕೇಂದ್ರ ಮತ್ತು ರಾಜ್ಯ ಸರಕಾರಗಳು ಬಡತನದ ವಿರುದ್ಧ ಮೊದಲಿನಿಂದಲೂ ದೊಡ್ಡಮಟ್ಟದ ಸಮರ ನಡೆಸಿವೆ. ಬಡತನ ನಿರ್ಮೂಲನೆಗಾಗಿ ಹತ್ತು ಹಲವು ಕಾರ‍್ಯಕ್ರಮಗಳನ್ನು ಹಾಕಿಕೊಂಡಿವೆ. ದಶಕಗಳ ಹಿಂದೆ ಇಂದಿರಾ ಗಾಂಧಿ ಅವರು ಮಾಡಿದ್ದ ‘ಗರೀಬಿ ಹಟಾವೋ’ ಘೋಷಣೆಯು ಭಾರಿ ಸಂಚಲನ ಸೃಷ್ಟಿಸಿತ್ತು. ನಮ್ಮ ರಾಜ್ಯದ ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್‌ ಕೂಡ ಬಡವರಿಗೆ ನೆರವಾಗುವ ಕಾರ‍್ಯಕ್ರಮಗಳೇ. ಇದರ ನಡುವೆಯೇ ನಮಗೆ ಕೊಂಚ ನೆಮ್ಮದಿ, ಸಮಾಧಾನ ತರುವಂಥ ಸುದ್ದಿಯೊಂದು ಹೊರಬಿದ್ದಿದೆ. ಭಾರತವು ವಿಶ್ವದ ಅತಿಹೆಚ್ಚು ಬಡಜನರಿರುವ ರಾಷ್ಟ್ರ ಎಂಬ ಪಟ್ಟಿಯಿಂದ ಹೊರಬಂದಿರುವ ವಿಷಯವದು. ಮೇ 2018ರ ಅಂಕಿಅಂಶದ ಪ್ರಕಾರ ನೈಜೀರಿಯಾ ದೇಶವು ಆ ಸ್ಥಾನಕ್ಕೆ ಬಂದಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಈ ವರ್ಷಾಂತ್ಯದ ವೇಳೆ, ಆಫ್ರಿಕದ ಮತ್ತೊಂದು ದೇಶವಾದ ಡೆಮಾಕ್ರೆಟಿಕ್‌ ರಿಪಬ್ಲಿಕ್‌ ಆಫ್‌ ಕಾಂಗೊ ಎರಡನೇ ಸ್ಥಾನ ತಲುಪಲಿದ್ದು ಭಾರತವು ಮೂರಕ್ಕೆ ಇಳಿಯಲಿದೆ.

ಬ್ರೂಕ್‌ಲಿಂಗ್ಸ್‌ ಎಂಬ ಸಂಸ್ಥೆ ನಡೆಸಿದ ಅಧ್ಯಯನದ ವರದಿಯಲ್ಲಿ ಈ ಅಂಶಗಳನ್ನು ತಿಳಿಸಲಾಗಿದೆ. ಸಂಸ್ಥೆಯ ಪ್ಯೂಚರ್‌ ಡೆವಲಪ್‌ಮೆಂಟ್‌ ಬ್ಲಾಗ್‌ನಲ್ಲಿ ಪ್ರಕಟಿಸಿರುವ ವರದಿಯ ಪ್ರಕಾರ 2022ರ ವೇಳೆಗೆ ಭಾರತದಲ್ಲಿ ಬಡ ಹಾಗೂ ಅತಿ ಬಡಜನರ ಸಂಖ್ಯೆ ಕೇವಲ ಶೇ.3ರಷ್ಟಿರಲಿದೆ. ಮತ್ತೊಂದು ಗಮನಾರ್ಹ ವಿಷಯವೆಂದರೆ 2030ರ ಹೊತ್ತಿಗೆ ಬಡತನ ಸಂಪೂರ್ಣವಾಗಿ ನಿರ್ಮೂಲನವಾಗಲಿದೆ. ದಿನವೊಂದಕ್ಕೆ 1.9 ಡಾಲರ್‌ಗಿಂತ ಕಡಿಮೆ ಆದಾಯ ಹೊಂದಿದವರನ್ನು ಅತಿಬಡವರು ಎಂದು ಪರಿಗಣಿಸಲಾಗಿದೆ.

ವಿಶ್ವಬ್ಯಾಂಕ್‌ ವರದಿಯ ಪ್ರಕಾರ 2004ರಿಂದ 2011ರ ನಡುವಿನ ಅವಧಿಯಲ್ಲಿ ಭಾರತದಲ್ಲಿ ಬಡತನದ ಪ್ರಮಾಣವು ಶೇ.38.9ರಿಂದ ಶೇ.21.2ಕ್ಕೆ ಇಳಿದಿದೆ. ಇದೇನೂ ಕಡಿಮೆ ಸಾಧನೆಯಲ್ಲ. ಇದಕ್ಕೆ ಬಡತನ ನಿರ್ಮೂಲನ ಕಾರ‍್ಯಕ್ರಮಗಳ ಜತೆ ನಾವು 1991ರಲ್ಲಿ ಆರಂಭಿಸಿದ ಆರ್ಥಿಕ ಉದಾರೀಕರಣ ಪ್ರಕ್ರಿಯೆಯ ಪಾತ್ರವೂ ದೊಡ್ಡದು. ಇತ್ತೀಚಿನ ದಿನಗಳಲ್ಲಿ ದೇಶದ ಆರ್ಥಿಕ ಪ್ರಗತಿದರವೂ ಸತತ ಏರುಗತಿಯಲ್ಲಿ ಸಾಗುತ್ತಿರುವುದೂ ಇದಕ್ಕೆ ಪೂರಕವಾಗಿದೆ.