ಬಡತನದಲ್ಲೇ ಅರಳುವ ಪ್ರತಿಭೆಗಳು

ಬೀದರ್: ಜು.23:ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಬೆಳೆದ ಅನೇಕರು ಅಸಾಮಾನ್ಯ, ಅಸಾಧಾರಣ ವ್ಯಕ್ತಿಗಳಾಗಿ ರೂಪುಗೊಂಡಿರುವ ಅನೇಕ ಉದಾಹರಣೆಗಳು ಕಾಣಸಿಗುತ್ತವೆ. ಕಷ್ಟ ಹಾಗೂ ಬಡತನ ಇರುವಲ್ಲೇ ಪ್ರತಿಭೆಗಳು ಅರಳುತ್ತವೆ ಎಂದು ರಾಜ್ಯ ಶಿಲ್ಪಕಲಾ ಅಕಾಡೆಮಿ ಮಾಜಿ ಸದಸ್ಯ, ಯೋಗೇಶ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಬಿ.ಕೆ.ಬಡಿಗೇರ ಹೇಳಿದರು.
ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಧನ ಸಹಾಯದೊಂದಿಗೆ ಆಯೋಜಿಸಿದ್ದ ಕಲಾವಿದ ಹಣಮಂತ ಮಲ್ಕಾಪೂರೆ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಬಡತನದಲ್ಲಿ ಅರಳುವ ಪ್ರತಿಭೆಗಳು ನಂತರ ಶ್ರೀಮಂತಿಕೆಯಲ್ಲಿ ನೆಲೆಯೂರುತ್ತವೆ. ಹಲವು ಸಾಧಕರ ಹಾಗೂ ಮಹಾ ಪುರುಷರ ಚರಿತ್ರೆಯ ಮೇಲೆ ಬೆಳಕು ಚೆಲ್ಲಿದಾಗ ಇದು ಗೊತ್ತಾಗುತ್ತದೆ. ಆದಿ ಮಾನವನ ಅವಧಿಯಲ್ಲಿ ಚಿತ್ರಕಲೆ ಹುಟ್ಟಿಕೊಂಡಿದೆ. ಅಕ್ಷರಕ್ಕೆ ಚಿತ್ರಕಲೆಯೇ ಮೂಲವಾಗಿದೆ. ಇಂದು ಚಿತ್ರ ಅಕ್ಷರಗಳನ್ನೂ ಮೀರಿ ಪ್ರಭಾವ ಬೀರುವ ಶಕ್ತಿಯನ್ನು ಹೊಂದಿದೆ ಎಂದು ತಿಳಿಸಿದರು.
ಕಲಾವಿದನ ಒಂದು ಒಳ್ಳೆಯ ಚಿತ್ರಕಲೆಯ ಹಿಂದೆ ಸಾಕಷ್ಟು ಪರಿಶ್ರಮ ಇರುತ್ತದೆ. ಕಲಾವಿದ ಹಣಮಂತ ಮಲ್ಕಾಪೂರೆ ಅವರು 21ನೇ ವಯಸ್ಸಿನಲ್ಲೇ ಅದ್ಭುತ ಕಲಾವಿದರಾಗಿ ಹೊರ ಹೊಮ್ಮಿದ್ದಾರೆ. ಕಲಾವಿದರ ಕಲೆಗೆ ಬೆಲೆ ಕಟ್ಟಲಾಗದು. ಆದರೆ, ಪರಿಶ್ರಮಕ್ಕೆ ಬೆಲೆ ಕೊಡಬೇಕಾಗುತ್ತದೆ ಎಂದರು.
ಕುಗ್ರಾಮ ಹಾಗೂ ಬಡತನದಲ್ಲಿ ಬೆಳೆದರೂ ಕಲೆಯನ್ನು ಕರಗತ ಮಾಡಿಕೊಂಡು ಇಂದು ದೊಡ್ಡ ಮಟ್ಟದಲ್ಲಿ ಪ್ರದರ್ಶನ ಏರ್ಪಡಿಸಿರುವುದು ಅಭಿನಂದನಾರ್ಹವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಮಾತನಾಡಿ, ಪ್ರತಿಭಾವಂತ ಕಲಾವಿದರಿಗೆ ಪ್ರೋತ್ಸಾಹ ನೀಡಲು ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಪ್ರದರ್ಶನಕ್ಕಾಗಿ ಧನ ಸಹಾಯ ನೀಡುತ್ತಿದೆ. ಈ ಮೂಲಕ ಕಲೆ ಹಾಗೂ ಸಂಸ್ಕøತಿಯನ್ನು ಉಳಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯೆ ವಿನಿತಾ ಪಾಟೀಲ ಮಾತನಾಡಿ, ಕಲಾವಿದ ಹಣಮಂತ ಮಲ್ಕಾಪೂರೆ ಅವರು ಕಲಾಕುಂಚದ ಮೂಲಕ ವನ್ಯಜೀವಿಗಳ ಚಿತ್ರ ಬಿಡಿಸಿ ಜೀವ ತುಂಬಿದ್ದಾರೆ. ಕಲಾವಿದರ ಪ್ರತಿಭೆ ಇಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ ಎಂದು ಬಣ್ಣಿಸಿದರು.
ಮುಖ್ಯ ಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಚಂದ್ರಕಾಂತ ಮಸಾನಿ ಮಾತನಾಡಿದರು. ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ವಿಜಾನಂದ ಕಪ್ಟೆ ನಿರೂಪಿಸಿದರು. ರೇವಣಸಿದ್ದಪ್ಪ ಡೊಂಗರಗಾಂವ್ ಹಾಗೂ ಉಪನ್ಯಾಸಕರು ಇದ್ದರು.