ಬಡಜನರಿಗೆ ನಿವೇಶನ ಒದಗಿಸಿ
ಪ್ರಗತಿಪರ ಸಂಘಟನೆಗಳ ಜೊತೆಗೂಡಿ ನಗರಸಭೆ ಎದುರು ಸಿಪಿಐಎಂ ಪ್ರತಿಭಟನೆ


ಸಂಜೆವಾಣಿ ವಾರ್ತೆ
ಹೊಸಪೇಟೆ ಜ5: ನಗರದ ಬಡಜನರಿಗೆ ನಿವೇಶನ ಮತ್ತು ಮನೆ ಕಲ್ಪಿಸಲು ವಿಳಂಬ ನೀತಿಯನ್ನು ಅನುಸರಿಸುತ್ತಿರುವ ನಗರಸಭೆ ಕ್ರಮ ಖಂಡಿಸಿ, ಸಿಪಿಐ(ಎಂ) ನೇತೃತ್ವದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ನಗರಸಭೆ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ನಗರಸಭೆ ವ್ಯಾಪ್ತಿಯಲ್ಲಿ ಮನೆ ಮತ್ತು ನಿವೇಶನ ಇಲ್ಲದ ಸುಮಾರು 8315 ಅರ್ಜಿಗಳನ್ನು ಈ ಹಿಂದೆ 2015 ಆ.08ರಂದು ಅಂದಿನ ಪೌರಾಯುಕ್ತರಿಗೆ ಹಾಗೂ ಸಚಿವ ಆನಂದ್‍ಸಿಂಗ್ ಇವರಿಗೆ ಸಲ್ಲಿಸಲಾಗಿತ್ತು. ಆರ್ಹ ಫಲಾನುಭವಿಗಳಿಗೆ ಮನೆ, ನಿವೇಶನ ಕಲ್ಪಿಸುವಂತೆ ಒತ್ತಾಯಿಸಲಾಗಿತ್ತು. ಈವರೆಗೂ ಬಡಜನರಿಗೆ ಮನೆ, ನಿವೇಶನ ಒದಗಿಸಲು ನಗರಸಭೆ ಮೇನಮೇಷ ಎಣೆಸುತ್ತಿದೆ ಎಂದು ಆರೋಪಿಸಿದರು.
ಹೊಸಪೇಟೆ ಜಿಲ್ಲಾ ಕೇಂದ್ರವಾದ ದಿನದಿಂದ ಶರವೇಗದಲ್ಲಿ ಬೆಳೆಯುತ್ತಿದೆ. ನಿವೇಶನಗಳ ಬೆಲೆ ಗಗನಕ್ಕೆ ಏರಿವೆ. ಇಂತಹ ಪರಿಸ್ಥಿತಿಯಲ್ಲಿ ಬಡ ಜನರು, ನಿವೇಶನ, ಮನೆ ನಿರ್ಮಿಸಿಕೊಳ್ಳುವುದು ಕನಸಿನ ಮಾತಾಗಿದೆ. ಬಡಜನರ ಬಗ್ಗೆ ತಾತ್ಸರ ಮಾಡದೇ ಎಸ್ಸಿ-ಎಸ್ಟಿ ಮತ್ತು ಇತರೆ ಹಿಂದುಳಿದ ವರ್ಗಗಳ ಬಡವರಿಗೆ ನಗರದ 210 ಎಕರೆ ಸರಕಾರಿ ಭೂಮಿಯನ್ನು ಮನೆ ನಿವೇಶನಕ್ಕಾಗಿ ಮೀಸಲಿಡುವಂತೆ ಆಗ್ರಹಿಸಿದರು.
ಭೂಮಾಫೀಯಾ:
ನಗರದಲ್ಲಿ ಅಂದಾಜು 3.40 ಲಕ್ಷ ಜನ ಸಂಖ್ಯೆ ದಾಟಿದೆ. ಸ್ವಂತ ಮನೆ, ಸ್ವಂತ ಜಾಗ ಇಲ್ಲದ 30 ಸಾವಿರಕ್ಕೂ ಆಧಿಕ ಕುಟುಂಬಗಳಿವೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಕಪ್ಪು ಹಣವುಳ್ಳ  ಶ್ರೀಮಂತರು ಸುತ್ತಮುತ್ತಲಿನ ಕೃಷಿ ಭೂಮಿಯನ್ನು ಕಡಿಮೆ ಬೆಲೆಗೆ ಖರೀದಿಸಿ ನೂರಾರು ಕೋಟಿ ರೂಪಾಯಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಇದರ ಜೊತೆಯಲ್ಲಿ ಭೂಗಳ್ಳರು ಕೆಲವು ರಿಯಲ್ ಎಸ್ಟೇಟ್ ಭೂಮಾಫೀಯಾಗಳೊಂದಿಗೆ ಕೆಲವು ಸ್ವಾರ್ಥ ರಾಜಕಾರಣಿಗಳು ಕೈ ಜೋಡಿಸಿರುವುದರಿಂದ ಭೂಮಿಯ ಬೆಲೆ ಹತ್ತುಪಟ್ಟು ಹೆಚ್ಚಾಗಿದೆ. ಕೃಷಿ ಭೂಮಿಗಳು ವಸತಿ ನಿವೇಶನಕ್ಕಾಗಿ ಬದಲಾಗಿವೆ. ಸಾಮಾನ್ಯ ನಾಗರಿಕರು ಒಂದು ನಿವೇಶನ ಖರೀದಿಗೆ ತಮ್ಮ ಇಡೀ ಜೀವನವನ್ನೇ ಮುಡುಪಾಗಿಡುವ ಪರಿಸ್ಥಿತಿ ಎದುರಾಗಿದೆ ಎಂದು ಅಳಲು ತೋಡಿಕೊಂಡರು.
ಮುಖಂಡರಾದ ಎಂ.ಜಂಬಯ್ಯನಾಯಕ, ಆರ್.ಭಾಸ್ಕರ್‍ರೆಡ್ಡಿ, ಎನಗ. ಯಲ್ಲಾಲಿಂಗ, ಬಿಸಾಟಿ ತಾಯಪ್ಪ, ಕೆ.ನಾಗರತ್ನಮ್ಮ, ಎಂ.ಗೋಪಾಲ್, ಸ್ವಪ್ನ, ಬಿಸಾಟಿ ಮಹೇಶ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.