ಬಟ್ಲರ್ ಅಬ್ಬರಕ್ಜೆ ಮಂಕಾದ ಎಸ್ ಆರ್ ಎಚ್ ಸಂಜು ಪಡೆಗೆ 55 ರನ್ ಭರ್ಜರಿ ಗೆಲುವು

ನವದೆಹಲಿ, ಮೇ 2- ರಾಜಸ್ಥಾನ ರಾಯಲ್ಸ್ ನ‌ ಜೋಸ್ ಬಟ್ಲರ್ ಸ್ಪೋಟಕ ಶತಕದ ನೆರವಿನಿಂದ ಇಂದು ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಎಸ್ ಅರ್ ಎಚ್ ವಿರುದ್ದ ಸಂಜು ಪಡೆ 55 ರನ್ ಗಳಿಂದ ಭರ್ಜರಿ ಜಯಗಳಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಆರ್ ಆರ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. ಆದರೆ ಬಟ್ಲರ್ ಸಂಜು ಸ್ಯಾಮ್ಸನ್ ಎಸ್ ಆರ್ ಎಚ್ ಬೌಲಿಂಗ್ ದಾಳಿಯನ್ನು ಲೀಲಾಜಾಲವಾಗಿ ಎದುರಿಸಿ ಶತಕದ ಜತೆಯಾಟವಾಡಿದರು.


ಅದರಲ್ಲೂ ಬಟ್ಲರ್ 64 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ ಎಂಟು ಸಿಕ್ಸರ್ ನೆರವಿನೊಂದಿಗೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ 124 ರನ್ ಬಾರಿಸಿದರು. ಈ ಮೂಲಕ ಚೊಚ್ಚಲ ಶತಕ ಸಿಡಿಸಿ ಸಂದೀಪ್ ಬೌಲಿಂಗ್ ನಲ್ಲಿ ಬಟ್ಲರ್ ನಿರ್ಗಮಿಸಿದರು.
ಸ್ಯಾಮ್ಸನ್ 33 ಎಸೆತಗಳಲ್ಲಿ 48 ರನ್ ಗಳಿಸಿದರು. ರಿಯಾನ್ ಪರಾಗ್ 15 ಹಾಗೂ ಮಿಲ್ಲರ್ 7 ರನ್ ಗಳಿಸಿದರು.‌ ಅಂತಿಮವಾಗಿ ಆರ್ ಆರ್ 20 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 220 ರನ್ ಬೃಹತ್ ಮೊತ್ತ ಪೇರಿಸಿತು.
221 ರನ್ ಗಳ ಗುರಿಯನ್ನು ಬೆನ್ನಹತ್ತಿದ ಎಸ್ ಆರ್ ಎಚ್ 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ165 ರನ್ ಗಳಿಸಿ ಸೋಲಿಗೆ ಶರಣಾಯಿತು.
ಮನೀಶ್ ಪಾಂಡೆ 31, ಬೈರ್ ಸ್ಟೋ 30, ಕೇನ್ ವಿಲಿಯಮ್ಸ್ ಸನ್ 20 ರನ್ ಗಳಿಸಿದರು. ತಂಡದ ಪರ ಯಾವುದೇ ಆಟಗಾರರು ಬೃಹತ್ ಇನ್ನಿಂಗ್ಸ್ ಕಟ್ಟಲಿಲ್ಲ.ಹೀಗಾಗಿ ವಿಲಿಯಮ್ಸ್ ಸನ್‌ ಗೆ ನಾಯಕ ಪಟ್ಟ ನೀಡಿದರೂ ಎಸ್ ಆರ್ ಎಚ್ ತಂಡದ ಸೋಲಿನ ಸರಮಾಲೆ ಮುಂದುವರಿದಿದೆ.
ಕ್ರಿಸ್ ಮೋರಿಸ್ ರಹಮಾನ್ ತಲಾ ಮೂರು ವಿಕೆಟ್ ಪಡೆದರೆ, ಕಾರ್ತಿಕ್ ತೆವಾಟಿಯಾ ತಲಾ ಒಂದು ವಿಕೆಟ್ ಪಡೆದರು.
ಈ ಭರ್ಜರಿ ಗೆಲುವಿನೊಂದಿಗೆ ಆರ್ ಆರ್ 7 ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋತು ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.