ಬಟ್ಟೆ ಮಳಿಗೆ, ಅಂಗಡಿ ಮಾಲಕರ ವಿರುದ್ಧ ಕೇಸ್


ಮಂಗಳೂರು, ಮೇ ೨೧- ರಾಜ್ಯ ಸರಕಾರದ ಕೋವಿಡ್ -೧೯ ಮಾರ್ಗಸೂಚಿ ಉಲ್ಲಂಘಿಸಿ ಗುರುವಾರ ವ್ಯವಹಾರ ನಡೆಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಬಟ್ಟೆ ಮಳಿಗೆ ಮತ್ತು ಅಂಗಡಿಯೊಂದರ ಮಾಲಕರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.
ನಗರದ ರಾವ್ ಆ?ಯಂಡ್ ರಾವ್ ಸರ್ಕಲ್ ಬಳಿಯ ಆರಿಯನ್ ಟವರ್ಸ್‌ನ ಒಂದನೇ ಮಹಡಿಯಲ್ಲಿನ ರೆಡಿಮೇಡ್ ಬಟ್ಟೆ ಅಂಗಡಿಯ ಮಾಲಕ ನೌಫಾಝ್ ಸರಕಾರದ ಮಾರ್ಗಸೂಚಿ ಉಲ್ಲಂಘಿಸಿ ಬಟ್ಟೆಗಳನ್ನು ಮಾರಾಟ ಮಾಡುತ್ತಿರುವ ಆರೋಪದ ಬಗ್ಗೆ ಮಾಹಿತಿ ಪಡೆದ ಬಂದರು ಪೊಲೀಸರು ದಾಳಿ ನಡೆಸಿ ಆರೋಪಿಯ ವಿರುದ್ಧ ಕಲಂ ೨೬೯ ಐಪಿಸಿ ಮತ್ತು ಕಲಂ. ೪,೫ ಕರ್ನಾಟಕ ಎಪಿಡೆಮಿಕ್- ೨೦೨೦ ಕಾಯ್ದೆಯಂತೆ ಪ್ರಕರಣ ದಾಖಲಿಸಿದ್ದಾರೆ. ಕಾವೂರಿನ ಕೋದ್ದರ್ಬು ದೈವಸ್ಥಾನದ ಬಳಿಯಿರುವ ಸ್ಟೋರ್ ಮಿಲ್ ಮತ್ತು ಸ್ವೀಟ್ ಅಂಗಡಿಯು ಬೆಳಗ್ಗೆ ೧೦:೧೫ರವರೆಗೂ ತೆರೆದುಕೊಂಡಿದ್ದು, ಈ ಬಗ್ಗೆ ಮಾಹಿತಿ ಪಡೆದ ಕಾವೂರು ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭ ಅಂಗಡಿಯ ಒಳಗಡೆ ಮುಸ್ತಫ ಎಂಬಾತ ನಿಗದಿತ ಸಮಯ ಮೀರಿ ಅಂಗಡಿಯನ್ನು ತೆರೆದು ವ್ಯಾಪಾರ ನಡೆಸುತ್ತಿದ್ದು ಅಲ್ಲದೆ ಮಾಸ್ಕ್ ಧರಿಸದೆ, ಸುರಕ್ಷಿತ ಅಂತರ ಕಾಪಾಡಿಕೊಳ್ಳದೆ ಗ್ರಾಹಕರೊಂದಿಗೆ ವ್ಯಾಪಾರದಲ್ಲಿ ತೊಡಗಿರುವುದು ಕಂಡು ಬಂದಿದೆ ಎಂಬ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.