ಬಟ್ಟೆ ತೊಳೆಯಲು ಹೋಗಿ ಕಾಲು ಜಾರಿ ನೀರಲ್ಲಿ ಮುಳುಗಿ ಯುವತಿಯರಿಬ್ಬರ ಸಾವು

ಶ್ರೀರಂಗಪಟ್ಟಣ : ಬಟ್ಟೆ ತೊಳೆಯಲು ತೆರಳಿದ್ದ ಇಬ್ಬರು ಯುವತಿಯರು ಕಾಲು ಜಾರಿ ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ಕಾಳೇನಹಳ್ಳಿ ಶೆಡ್ಡುಗ್ರಾಮದ ಬಳಿ ನಡೆದಿದೆ.
ಗ್ರಾಮದ ಲೀನಾಮತಿ (19) ಹಾಗೂ ಮೀನಾ (17) ಮೃತ ಯುವತಿಯರು. ಗ್ರಾಮದ ಸಮೀಪದಲ್ಲಿನ ಕಲ್ಲುಕೋರೆ ಹಳ್ಳದಲ್ಲಿ ತುಂಬಿದ್ದ ನೀರಿನಲ್ಲಿ ಅಕ್ಕ ಪಕ್ಕದ ಕುಟುಂಬಗಳು ಈ ಸ್ಥಳದಲ್ಲೇ ಬಟ್ಟೆ ತೊಳೆಯುತ್ತಿದ್ದರು ಎಂದು ತಿಳಿದು ಬಂದಿದೆ.
ಎಂದಿನಂತೆ ಶುಕ್ರವಾರ 4 ಮಂದಿ ಬಟ್ಟೆ ತೊಳೆಯಲು ತೆರಳಿದ್ದ ವೇಳೆ 6 ವರ್ಷದ ಮಗು ಕಾಲು ಜಾರಿ ನೀರಿಗೆ ಬಿದ್ದಿದೆ. ಈ ವೇಳೆ ಮಗುವನ್ನು ರಕ್ಷಣೆ ಮಾಡಲು ಮುಂದಾಗಿ ಗಾಬರಿಗೊಂಡು ಒಬ್ಬರಿಗೊಬ್ಬರು ಹಿಡಿದುಕೊಂಡು 4 ಮಂದಿಯು ಸಹ ನೀರಲ್ಲಿ ಬಿದ್ದಿದ್ದಾರೆ. ಪಕ್ಕದಲ್ಲೆ ಕಲ್ಲು ಕುಳಿ ಮಾಡುವ ಕಾರ್ಮಿಕರು ಸ್ಥಳಕ್ಕೆ ದಾವಿಸಿ, ಇಬ್ಬರನ್ನು ರಕ್ಷಣೆ ಮಾಡಿದ್ದಾರೆ. ಆದರೆ ಮತ್ತಿಬ್ಬರು ನೀರಲ್ಲೇ ಮುಳುಗಿ ಪ್ರಾಣ ಬಿಟ್ಟಿದ್ದಾರೆ. ಇವರೆಲ್ಲರೂ ಕೋರೆಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕ ಕುಟುಂಬದ ಮಕ್ಕಳು.
ಸ್ಥಳಿಯ ಮಾಹಿತಿ ಮೇರೆಗೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯ ಸಿಪಿಐ ಬಿ.ಜಿ. ಕುಮಾರ್ ಆಗಮಿಸಿ ಸ್ಥಳ ಪರಿಶೀಲಿಸಿ, ಶವಗಳನ್ನು ನೀರಿನಿಂದ ಮೇಲೆತ್ತಿ ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿರಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.