ಬಟ್ಟೆ ಅಂಗಡಿಗೆ ಬೆಂಕಿ : ದಂಪತಿ ಸಜೀವ ದಹನ

ಸೈದಾಪುರ,ಮಾ.೨೭-ಬಟ್ಟೆ ಅಂಗಡಿಗೆ ಬೆಂಕಿ ಬಿದ್ದು ದಂಪತಿಗಳಿಬ್ಬರು ಸಜೀವ ದಹನವಾದ ಹೃದಯ ವಿದ್ರಾವಕ ಘಟನೆ ಯಾದಗಿರಿ ಜಿಲ್ಲೆಯ ಸೈದಾಪುರ ಗ್ರಾಮದಲ್ಲಿ ಇಂದು ಬೆಳಗಿನಜಾವ ೫ ಗಂಟೆ ಸುಮಾರಿಗೆ ನಡದಿದೆ.ಕೆ.ಬಿ.ರಾಘವೇಂದ್ರ (೩೯) ಮತ್ತು ಕೆ.ಬಿ.ಶಿಲ್ಪಾ ಮೃತಪಟ್ಟ ದುರ್ದೈವಿಗಳು.ದಂಪತಿ ಪಟ್ಟಣದಲ್ಲಿರುವ ಮೂರು ಅಂತಸ್ತಿನ ಮನೆಯಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದರು. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬಟ್ಟೆ ಅಂಗಡಿಗೆ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲಿಯೇ ಬೆಂಕಿಯ ಕೆನ್ನಾಲಿಗೆ ಎಲ್ಲೆಡೆ ಆವರಿಸಿದೆ. ಇದರಿಂದ ತಪ್ಪಿಸಿಕೊಳ್ಳಲು ದಂಪತಿ ಮನೆಯ ಶೌಚಾಲಯದಲ್ಲಿ ಹೋಗಿ ಕುಳಿತಿದ್ದಾರೆ. ಆದರೆ ಬೆಂಕಿ ಕೆನ್ನಾಲಿಗೆ ಇಡೀ ಶೌಚಾಲಯಕ್ಕೂ ಆವರಿಸಿದ್ದರಿಂದ ದಂಪತಿ ಉಸಿರುಗಟ್ಟಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.ಸುದ್ದಿ ತಿಳಿದು ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ನಂತರ ಪೊಲೀಸರು ಜೆಸಿಬಿ ಸಹಾಯದಿಂದ ಮನೆಯ ಗೋಡೆ ಒಡೆದು ಮೃತದೇಹಗಳನ್ನು ಹೊರತೆಗೆದಿದ್ದಾರೆ. ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೀವ ಉಳಿಸಿಕೊಳ್ಳಲು ಹರ ಸಾಹಸ
ಕೆ.ಬಿ.ರಾಘವೇಂದ್ರ ಮತ್ತು ಕೆ.ಬಿ.ಶಿಲ್ಪಾ ದಂಪತಿ ಸೈದಾಪುರ ಪಟ್ಟಣದಲ್ಲಿರುವ ಮೂರು ಅಂತಸ್ತಿನ ಕಟ್ಟಡದಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ಕೆಳ ಮಹಡಿಯಲ್ಲಿ ಇಬ್ಬರು ಮಕ್ಕಳು ಮತ್ತು ಪೋಷಕರು ವಾಸವಾಗಿದ್ದರು. ಮೇಲಿನ ಎರಡು ಮತ್ತು ಮೂರನೇ ಅಂತಸ್ತಿನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ಭಾನುವಾರ ರಾತ್ರಿ ದಂಪತಿ ಊಟ ಮಾಡಿ ಮೇಲಂಸ್ತಿನ ಕಟ್ಟಡದಲ್ಲಿ, ಮಕ್ಕಳು ಮತ್ತು ಪೋಷಕರು ಕೆಳ ಅಂತಸ್ತಿನ ಮನೆಯಲ್ಲಿ ಮಲಗಿದ್ದರು. ಬೆಳಗಿನಜಾವ ೫ ಗಂಟೆ ಸುಮಾರಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬಟ್ಟೆ ಅಂಗಡಿಗೆ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲಿಯೇ ಬೆಂಕಿ ಮನೆತುಂಬ ಆವರಿಸಿದೆ. ಈ ವೇಳೆ ದಂಪತಿ ಜೀವ ಉಳಿಸಿಕೊಳ್ಳಲು ಹರಸಾಹಸ ಮಾಡಿದ್ದಾರೆ. ಕೊನೆಗೆ ಮನೆಯ ಶೌಚಾಲಯದಲ್ಲಿ ಹೋಗಿ ಕುಳಿತರೂ ಬೆಂಕಿಯ ಕೆನ್ನಾಲಿಗೆ ಅಲ್ಲಿಗೂ ಆವರಿಸಿದ್ದರಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.ಕೆಳ ಅಂತಸ್ತಿನಲ್ಲಿದ್ದ ಕೆ.ಬಿ.ರಾಘವೇಂದ್ರ ಅವರ ಪೋಷಕರು ಮತ್ತು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆ.ಬಿ.ರಾಘವೇಂದ್ರ ಅವರು ಸೈದಾಪುರದಲ್ಲಿ ಹೆಸರಾಂತ ಉದ್ಯಮಿಯಾಗಿದ್ದರು ಎಂದು ತಿಳಿದುಬಂದಿದೆ. ೩ ಕೋಟಿ ರೂಪಾಯಿಗೂ ಅಧಿಕ ಬಟ್ಟೆ ಸುಟ್ಟು ಕರಕಲಾಗಿವೆ ಎಂದು ತಿಳಿದುಬಂದಿದೆ.