ಬಜೆಟ್ ವೇಳೆ ವಿಧಾನಸಭೆಯಲ್ಲಿ ಶಾಸಕಿ ಸ್ಥಾನದಲ್ಲಿ ಕುಳಿತ ಖತರ್ನಾಕ್ ವಕೀಲ ಸೆರೆ

ಬೆಂಗಳೂರು,ಜು.7- ವಿಧಾನಸೌಧದಲ್ಲಿ ಬಜೆಟ್ ‌ಮಂಡನೆ ವೇಳೆ ವಿಧಾನಸಭೆ ಕಲಾಪದಲ್ಲಿ ಶಾಸಕಿಯ ಸ್ಥಾನದಲ್ಲಿ ಕುಳಿತ ಖತರ್ನಾಕ್ ವಕೀಲನನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ. ಮೊಳಕಾಲ್ಮೂರು ಮೂಲದ‌ ವಕೀಲ ತಿಪ್ಪೇರುದ್ರಪ್ಪ ಅಲಿಯಾಸ್ ಕರಿಯಪ್ಪ ಬಂಧಿತ ಆರೋಪಿಗಳಾಗಿದ್ದಾನೆ ಎಂದು ಜಂಟಿ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.
ಆರೋಪಿ ತಿಪ್ಪೇರುದ್ರಪ್ಪಗೆ ಬಜೆಟ್ ದಿನ ಎಲ್ಲರನ್ನು ಬಜೆಟ್ ಅಧಿವೇಶನ ನೋಡಲು ಒಳಗೆ ಬಿಡುತ್ತಾರೆ ಎಂಬ ಮಾಹಿತಿಯಿದ್ದ ಹಿನ್ನಲೆಯಲ್ಲಿ ವಿಧಾನಸೌಧ ಬಳಿ ಬಂದು ಪ್ರೇಕ್ಷಕರ ಗ್ಯಾಲರಿ ಪಾಸ್ ಪಡೆದುಕೊಂಡಿದ್ದಾನೆ.
ಬಳಿಕ ಪೂರ್ವ ಗೇಟ್ ನಿಂದ ವಿಧಾನಸೌಧ ಒಳಗೆ ಹೋಗಿ ಮಧ್ಯಾಹ್ನ ಸದನಕ್ಕೆ ಹೋಗುವ ಮುನ್ನ ಮಾರ್ಷಲ್ ಗಳ ಜೊತೆ ಗಲಾಟೆ ಮಾಡಿದ್ದಾ‌ನೆ. ನಾನು ಚಿತ್ರದುರ್ಗ ಶಾಸಕ ಬಿಡಯ್ಯ ಎಂದು ಜಗಳ ಮಾಡಿ ವಿಧಾನಸಭೆ ಒಳಗೆ ಹೋಗಿ ಶಾಸಕರ ಜಾಗದಲ್ಲಿ ಕುಳಿತಿದ್ದಾನೆ.
ವಿಧಾನಸೌಧ ಬಜೆಟ್‌ ಅಧಿವೇಶನ ಆರಂಭಗೊಂಡ ಕೂಡಲೇ ಶಾಸಕಿ ಸ್ಥಾನದಲ್ಲಿ ಕುಳಿತುಕೊಂಡಿದ್ದಾನೆ.
ಆತ ಕುಳಿತು 15 ನಿಮಿಷಗಳ ಬಳಿಕ ಎಮ್ ಎಲ್ ಎಗಳ ಪಟ್ಟಿ ನೋಡಿದ ಮಾರ್ಷಲ್ ಗಳಿಗೆ ಅನುಮಾನ ಬಂದಿದೆ. ಸೀಟ್ ನಲ್ಲಿ ನೋಡಿದಾಗ ಮಹಿಳಾ ಶಾಸಕಿ ಸ್ಥಾನದಲ್ಲಿ ಕುಳಿತಿದ್ದು, ಗಮನಕ್ಕೆ ಬಂದಿದೆ.
ಕೂಡಲೇ ಆರೋಪಿ ತಿಪ್ಪೇರುದ್ರಪ್ಪನನ್ನು ವಿಧಾನಸಭೆಯಿಂದ ಹೊರಗೆ ಕರೆದುಕೊಂಡು ಬಂದ ಮಾರ್ಷಲ್ ಗಳು ಅವರನ್ನು ವಶಕ್ಕೆ ಪಡೆದು ವಿಧಾನಸೌಧ ಪೊಲೀಸ್‌ಠಾಣೆಗೆ ಕರೆತಂದಿದ್ದಾರೆ.
ಬಳಿಕ ಸಿಸಿಬಿ ಜಂಟಿ ಆಯುಕ್ತ ಶರಣಪ್ಪ ಅವರು ಖುದ್ದಾಗಿ ವಿಧಾನಸೌಧ ಠಾಣೆಗೆ ಆಗಮಿಸಿ ವಿಚಾರಣೆ ನಡೆಸಿದ್ದಾರೆ. ಯಾವ ಉದ್ದೇಶಕ್ಕೆ ವಿಧಾನ ಸಭೆ ಒಳಗೆ ಹೋಗಿದ್ದ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಶಾಸಕರೆಂದು ಸುತ್ತಾಟ: 
ಇನ್ನು ಆರೋಪಿ ತಿಪ್ಪೇರುದ್ರಪ್ಪ ತನ್ನ ಊರಿನಲ್ಲಿ ಕೂಡಾ ಹೀಗೇ ನಾನು ಶಾಸಕ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಎನ್ನಲಾಗಿದೆ. ಪೋಲೀಸರು ಆತನ ಕುಟುಂಬಸ್ಥರಿಗೆ ಕರೆ ಮಾಡಿ ವಿವರ ಪಡೆದಿದ್ದಾರೆ.
ಇನ್ನು ವಿಧಾನಸೌಧ ಠಾಣೆಗೆ ಬಂದ ಕೇಂದ್ರ‌ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ಕೂಡ ವಿಚಾರಣೆ ಮಾಡಿದ್ದಾರೆ. ವಿಧಾನಸಭೆ ಹಾಗೂ ‌ವಿಧಾನ ಪರಿಷತ್ ಮಾರ್ಷಲ್ಸ್ ತಂಡದ ಮುಖ್ಯಸ್ಥರನ್ನು ಕರೆಸಿಕೊಂಡಿದ್ದಾರೆ. ಮಾರ್ಷಲ್ ಗಳ ಜೊತೆ ಡಿಸಿಪಿ ಚನ್ನಬಸಪ್ಪ ಕೂಡ ಆಗಮಿಸಿದ್ದಾರೆ.
ಭದ್ರತಾ ವೈಪಲ್ಯದ ವಿಚಾರವಾಗಿ ಮಾರ್ಷಲ್ಸ್ ಮುಖ್ಯಸ್ಥರಿಗೆ ಜಂಟಿ ಆಯುಕ್ತ ಶರಣಪ್ಪ ಕ್ಲಾಸ್ ತೆಗೆದುಕೊಂಡಿದ್ದಾರೆ.
ಭದ್ರತಾ ವೈಫಲ್ಯ: 
ವಿಧಾನಸೌಧದಲ್ಲಿ ಇದೇ ಮೊದಲ ಬಾರಿಗೆ ಭದ್ರತಾ ವೈಫಲ್ಯ ಆಗಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್ ವರದಿ ಕೇಳಿದ್ದಾರೆ. ಕೂಡಲೇ ಸಂಪೂರ್ಣ ವರದಿ ಕೊಡುವಂತೆ ಸೂಚನೆ ನೀಡಿದ್ದಾರೆ.
ಇನ್ನು ತಿಪ್ಪೇರುದ್ರಪ್ಪ ವಿರುದ್ಧ ಟ್ರೆಸ್ ಪಾಸ್ ಹಾಗೂ ಇಂಪರ್ಸನೇಷಲ್ ಅಪರಾಧದ ಅಡಿ ಕೇಸ್ ದಾಖಲಾಗಿದೆ. ಬಜೆಟ್ ಮಂಡನೆ ನೋಡಲು ವಿಧಾನಸೌಧ ಪಾಸ್ ಪಡೆದು ತಿಪ್ಪೆರುದ್ರಪ್ಪ ಬಂದಿದ್ದರು. ಇನ್ನು ತಿಪ್ಪೇರುದ್ರಪ್ಪ ವಕೀಲ ವೃತ್ತಿ ಮಾಡಿಕೊಂಡಿದ್ದಾರೆ. ಮಾರ್ಷನಲ್ಸ್ ಕೊಟ್ಟ ದೂರಿನ‌ ಅನ್ವಯ ವಿಧಾನ ಸೌಧ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕೇಸ್‌ ದಾಖಲು: 
ನಾನು ಎಮ್‌ಎಲ್‌ಎ ಎಂಬ ಪದ ಬಳಸಿ ವಿಧಾನಸೌಧದ ಒಳಗೆ ಹೋಗಿದ್ದಾರೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಅತಿಕ್ರಮ ಪ್ರವೇಶ, ತನ್ನ ಐಡೆಂಟಿಟಿ ಮರೆಮಾಚುವ ಉದ್ದೇಶದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ಹೇಳಿದ್ದಾರೆ.