ಬಜೆಟ್ ಮಂಡನೆಗೆ ನಿರ್ಮಲಾ ಸಿದ್ಧತೆ

ನವದೆಹಲಿ,ಜೂ.೧೭- ೨೦೨೪-೨೫ನೇ ಸಾಲಿನ ಪೂರ್ಣ ಪ್ರಮಾಣದ ಮುಂಗಡ ಪತ್ರ ಮಂಡನೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಾಳೆಯಿಂದ ಪೂರ್ವಭಾವಿ ಸಭೆ ನಡೆಸಲಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ೩.೦ ಸರ್ಕಾರದ ಕಾರ್ಯಯೋಜನೆ ಪ್ರಕಟಿಸಲು ಸಿದ್ಧತೆ ನಡೆಸಿದ್ದಾರೆ.ಲೋಕಸಭೆ ಚುನಾವಣೆಗೂ ಮುನ್ನ ಫೆಬ್ರವರಿ ೧ ರಂದು ಮಧ್ಯಂತರ ಬಜೆಟ್ ಮಂಡಿಸಿದ್ದ ನಿರ್ಮಲಾ ಸೀತಾರಾಮನ್ ಅವರು ಮೂರನೇ ಬಾರಿಗೆ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿ ಒಪ್ಪಿಗೆ ಪಡೆಯಲು ಮುಂದಾಗಿದ್ದಾರೆ.ಜುಲೈ ತಿಂಗಳ ಮಧ್ಯಭಾಗದಲ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಆಗಲಿರುವ ಹಿನ್ನೆಲೆಯಲ್ಲಿ ನಿರ್ಮಲಾ ಸೀತಾರಾಮನ್ ಅವರು ನಾಳೆ ಇಲಾಖೆಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಅವರೊಂದಿಗೆ ಸಭೆ ನಡೆಸಲಿದ್ದಾರೆ ನಂತರ ವಿವಿಧ ಕೈಗಾರಿಕಾ ಚೇಂಬರ್ಸ್ ಜೊತೆಗೆ ಬಜೆಟ್ ಪೂರ್ವ ಭಾವಿ ಸಭೆ ಜೂನ್ ೨೦ ರಂದು ನಡೆಯಲಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.ಆರ್ಥಿಕ ಬೆಳವಣಿಗೆಯ ಜೊತೆಗೆ ಎನ್ ಡಿಎ ಸಮ್ಮಿಶ್ರ ಸರ್ಕಾರದ ಬೇಡಿಕೆಗಳನ್ನು ಪೂರೈಸಲು ಸಂಪನ್ಮೂಲಗಳನ್ನು ಹುಡುಕಬೇಕಾಗಿದೆ. ಜೊತೆಗೆ ಈ ಬಾರಿ ಬಜೆಟ್ ಮಂಡನೆ ಮತ್ತು ಸಿದ್ಧತೆಗೆ ಎರಡು ಪ್ರಮುಖ ಮಿತ್ರಪಕ್ಷಗಳಾದ ಜೆಡಿಯು ಮತ್ತು ಟಿಡಿಪಿ ಜೊತೆ ಸಮಾಲೋಚನೆ ನಡೆಸುವುದು ಅತಿ ಮುಖ್ಯವಾಗಿದೆ.ಆರ್ಥಿಕ ಕಾರ್ಯಸೂಚಿಯು ಮುಂದಿನ ದಿನಗಳಲ್ಲಿ ಭಾರತದ ಆರ್ಥಿಕತೆಯನ್ನು ೫ ಟ್ರಿಲಿಯನ್ ಡಾಲರ್ ತಲುಪಿಸುವ ಗುರಿ ಹೊಂದಲಾಗಿದೆ, ಇದರ ಜೊತೆಗೆ ೨೦೪೭ ರ ವೇಳೆಗೆ ದೇಶವನ್ನು ’ವಿಕಸಿತ ಭಾರತ್’ ಆಗಿ ಪರಿವರ್ತಿಸಲು ವೇಗದ ಸುಧಾರಣಾ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.ಆರ್‌ಬಿಐನಿಂದ ೨.೧೧ ಲಕ್ಷ ಕೋಟಿ ರೂ. ಡಿವಿಡೆಂಡ್: ಆರ್‌ಬಿಐ ಅಂದಾಜಿನ ಪ್ರಕಾರ, ಗ್ರಾಮೀಣ ಬೇಡಿಕೆಯನ್ನು ಸುಧಾರಿಸುವುದು ಮತ್ತು ಹಣದುಬ್ಬರ ಮಿತಗೊಳಿಸುವುದರ ಮೂಲಕ ಭಾರತದ ಆರ್ಥಿಕತೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡಾ ೭.೨ರಷ್ಟು ಬೆಳವಣಿಗೆ ಹೊಂದಿದೆ ಎಂದು ಅಂದಾಜಿಸಲಾಗಿದೆ.ಪ್ರಧಾನಿ ನರೇಂದ್ರ ಮೋದಿ ೩.೦ ಸರ್ಕಾರದ ಹಣಕಾಸಿನ ಹಿಡಿತ ಹೊಂದಿರುವ ಬಲವಾದ ಆರ್ಥಿಕತೆ ತನ್ನದಾಗಿಸಿಕೊಳ್ಳಲು ಯೋಜನೆಗಳನ್ನು ರೂಪಿಸುತ್ತದೆ. ಹಣಕಾಸು ವರ್ಷ ೨೦೨೪ರಲ್ಲಿ ಆರ್‍ಬಿಐನಿಂದ ೨.೧೧ ಲಕ್ಷ ಕೋಟಿ ರೂ. ಅತ್ಯಧಿಕ ಡಿವಿಡೆಂಡ್ ನೀಡಿರುವುದು ಕೂಡ ಸರ್ಕಾರಕ್ಕೆ ಆನೆ ಬಲಬಂದಂತಾಗಲಿದೆ,

ಪ್ರಮುಖ ನೀತಿ ಮುಂದುವರಿಕೆ
ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೈಗೆತ್ತಿಕೊಂಡಿದ್ದ ಪ್ರಮುಖ ನೀತಿಗಳನ್ನು ಮೂರನೇ ಅವಧಿಯ ಎನ್‌ಡಿಎ ಸರ್ಕಾರದಲ್ಲಿ ಮುಂದುವರಿಸುವ ಸಾಧ್ಯತೆ ಇದೆ
ಕೃಷಿ ವಲಯದಲ್ಲಿನ ಒತ್ತಡ ನಿಭಾಯಿಸುವುದು, ಉದ್ಯೋಗ ಸೃಷ್ಟಿ, ಕ್ಯಾಪೆಕ್ಸ್ ಆವೇಗವನ್ನು ಉಳಿಸಿಕೊಳ್ಳುವುದು ಮತ್ತು ಹಣಕಾಸಿನ ಬಲವರ್ಧನೆಯ ಹಾದಿಯಲ್ಲಿ ಉದ್ಯೋಗಿಗಳ ಆದಾಯದ ಬೆಳವಣಿಗೆ ಪ್ರಾರಂಭಿಸುವ ಆದ್ಯತೆ ಮತ್ತು ಗುರಿ ಹೊಂದಲಾಗಿದೆ.