
ಶಿರಹಟ್ಟಿ,ಮಾ.15: ಮಂಗಳವಾರ ಶಿರಹಟ್ಟಿಯ ಪಟ್ಟಣ ಪಂಚಾಯತ ಕಚೇರಿಯಲ್ಲಿ 2023-24ನೇ ಸಾಲಿನ ಬಜೆಟ್ ತಯಾರಿಸಲು ಸಾರ್ವಜನಿಕರ ಸಲಹೆ ಸೂಚನೆಗಳನ್ನು ಪಡೆಯುವುದಕ್ಕಾಗಿ ಅಧ್ಯಕ್ಷೆ ಗಂಗಮ್ಮ ಆಲೂರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಜರುಗಿತು.
ಈ ಸಂದರ್ಭದಲ್ಲಿ ಮಾತನಾಡಿದ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ, ಪಟ್ಟಣದ ಅಭಿವೃದ್ದಿ ಕೆಲಸಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ತಯಾರಿಸುವುದಕ್ಕೆ ಸಾರ್ವಜನಿಕರು ಮುಕ್ತವಾಗಿ ಸಲಹೆ ಸೂಚನೆಗಳನ್ನು ನೀಡಿ, ಅವುಗಳನ್ನು ಕಮೀಟಿಯ ಗಮನಕ್ಕೆ ತಂದು ಆದ್ಯತೆಯ ಮೇರೆಗೆ ಬಜೆಟ್ ತಯಾರು ಮಾಡಲಾಗುವುದು. ಕಚೇರಿಯ ಆದಾಯ ಮೂಲಗಳಾದ ಆಸ್ತಿ ತೆರಿಗೆ, ನೀರಿನ ಕರ, ಟ್ರೇಡ್ ಲೈಸನ್ಸ್, ವಾಣಿಜ್ಯ ಮಳಿಗೆ ಹಾಗೂ ತೆರಿಗೆಯೇತರ ಆದಾಯ ಮೂಲಗಳಾದ ಕಟ್ಟಡ ಪರವಾನಿಗೆ, ಅಭಿವೃದ್ದಿ, ಖಾತಾ ಉತಾರ ಫೀಗಳನ್ನು ಕ್ರೋಢಿಕರಿಸಿ ಅಂದಾಜು ಬಜೆಟ್ ತಯಾರಿಸಲಾಗುವುದು. ಪಟ್ಟಣದಲ್ಲಿ ಲೇಔಟ್ ನಿರ್ಮಾಣ ಮಾಡಿದ ಜಾಗಗಳಲ್ಲಿ ಸಾರ್ವಜನಿಕರಿಗೆ ಮೂಲಸೌಲಭ್ಯ ಕಲ್ಪಿಸಬೇಕು. ಸರಕಾರಿ ನಿಯಮಗಳನ್ನು ಉಲ್ಲಂಘಿಸಿದವರಿಗೆ ನೋಟೀಸ್ ನೀಡಲಾಗುವುದು. ಮಾರ್ಚ-ಎಪ್ರೀಲ್ ತಿಂಗಳುಗಳಲ್ಲಿ ಶೇ.5 ರಿಯಾಯಿತಿ ಇದ್ದು, ಈ ಸಮಯದಲ್ಲಿ ಸಾರ್ವಜನಿಕರು ತಮ್ಮ ಆಸ್ತಿ ತೆರಿಗೆಯನ್ನು ಪಾವತಿಸಬೇಕು ಎಂದರು.
ಸ್ಥಾಯಿ ಸಮೀತಿ ಅಧ್ಯಕ್ಷ ಮುಸ್ತಾಕ ಚೋರಗಸ್ತಿ, ಆರೋಗ್ಯ ನಿರೀಕ್ಷಕ ನಿಲೇಶ ಹಾದಿಮನಿ, ಕಂದಾಯ ನಿರೀಕ್ಷಕ ಎಸ್.ಎಚ್.ನಾಶಿಪುಡಿ, ಗುರು ಪಾತಾಳಿ, ವಿನೋದ ಕಪ್ಪತ್ತನವರ ಮುಂತಾದವರು ಉಪಸ್ಥಿತರಿದ್ದರು.