ಬಜೆಟ್‍ನಲ್ಲಿ ನೇಕಾರ ಸಮುದಾಯಕ್ಕೆ ಅನ್ಯಾಯ: ಪ್ರತಿಭಟನೆ

ಕಲಬುರಗಿ,ಫೆ.23-ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಚೆಗೆ ಮಂಡಿಸಿರುವ 2024-25ನೇ ಬಜೆಟ್‍ನಲ್ಲಿ ನೇಕಾರ ಸಮುದಾಯಕ್ಕೆ ಅನ್ಯಾಯವಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ನೇತೃತ್ವದಲ್ಲಿ ನಗರದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.
ರಾಜ್ಯದಲ್ಲಿ ನೇಕಾರ ಸಮುದಾಯವು 60 ಲಕ್ಷ ಜನಸಂಖ್ಯೆ ಹೊಂದಿದ್ದು, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿದೆ. ಹೀಗಾಗಿ ಹಿಂದಿನ ಸರ್ಕಾರ ನೇಕಾರ ಸಮುದಾಯದ ಏಳಿಗೆಗಾಗಿ ನೇಕಾರ ಅಭಿವೃದ್ಧಿ ನಿಗಮ ಘೋಷಣೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ನೇಕಾರ ಸಮುದಾಯಗಳ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ನೇಕಾರ ಅಭಿವೃದ್ಧಿ ನಿಗಮಕ್ಕೆ ಬಜೆಟ್‍ನಲ್ಲಿ 100 ಕೋಟಿ ರೂ.ಅನುದಾನ ನೀಡಿ ಚಾಲನೆ ನೀಡುವಂತೆ ಮನವಿ ಮಾಡಿತ್ತು. ಮುಖ್ಯಮಂತ್ರಿಗಳು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಆದರೆ ಬಜೆಟ್‍ನಲ್ಲಿ ಸಮುದಾಯದ ಅಭಿವೃದ್ಧಿಗೆ ಯಾವುದೇ ಅನುಕೂಲ ಮತ್ತು ನಿಗಮ ಮಂಡಳಿಗೆ ಅನುದಾನ ನೀಡದೆ ಅನ್ಯಾಯ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನಂತರ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಲಾಯಿತು.
ಸರ್ಕಾರ ನೇಕಾರ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ರೂ.ಅನುದಾನ ನೀಡಿ ಚಾಲನೆ ನೀಡಬೇಕು, ನೇಕಾರ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಕಾರ ಸಮುದಾಯದವರನ್ನೇ ನೇಮಕ ಮಾಡಬೇಕು, ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕುಗಳಲ್ಲಿ ನೇಕಾರ ಭವನ ನಿರ್ಮಿಸಬೇಕು, ವಿಶ್ವಕ್ಕೆ ಮೊದಲ ವಚನ ಸಾಹಿತ್ಯ ಪರಿಚಯಿಸಿದ 11ನೇ ಶತಮಾನದ ಆದ್ಯ ವಚನಕಾರ ದೇವರ ದಾಸಿಮಯ್ಯನವರ ಜನ್ಮಸ್ಥಳವಾದ ಮುದನೂರ ಗ್ರಾಮದ ಜೀರ್ಣೋದ್ಧಾರ ಮಾಡಬೇಕು, ಕೈಮಗ್ಗ ಹಾಗೂ ವಿದ್ಯುತ್ ಮಗ್ಗದವರಿಗೆ ಆಧುನಿಕ ವಸ್ತ್ರೋದ್ಯಮ ತರಬೇತಿ ನೀಡಬೇಕು ಎಂಬ ಬೇಡಿಕೆಗಳು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿಪತ್ರದಲ್ಲಿ ಒತ್ತಾಯಿಸಲಾಗಿದೆ.