ಬಜೆಟ್‌ನಲ್ಲಿ ಕೋ ವರ್ಕಿಂಗ್ ಸ್ಪೇಸ್ ಯೋಜನೆ

ಬೆಂಗಳೂರು,ಜ.೨೨-ಕೋ ವರ್ಕಿಂಗ್ ಸ್ಪೇಸ್ ಪರಿಕಲ್ಪನೆಯನ್ನು ಬೆಂಬಲಿಸಲು ಬಜೆಟ್‌ನಲ್ಲಿ ದೊಡ್ಡ ಮಟ್ಟದ ಯೋಜನೆ ರೂಪಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಅವರು ಇಂದು ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಹೊಸದಾಗಿ ಪ್ರಾರಂಭವಾಗಿರುವ ವಿಶ್ವದ ಅತಿ ದೊಡ್ಡ ಖಾಸಗೀ ಕೋ ವರ್ಕಿಂಗ್ ಸ್ಪೇಸ್ “ಬಿಹೈವ್” ಅನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಸ್ಥಳೀಯ ಹುಡುಗರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರು ಬಹಳ ದೊಡ್ಡ ಕೋ ವರ್ಕಿಂಗ್ ಸ್ಪೇಸ್ ಪ್ರಾರಂಭಿಸಿದ್ದಾರೆ. ಬಜೆಟ್ ಸಭೆಗಳ ಮಧ್ಯೆಯೂ ನಾನು ಇಲ್ಲಿಗೆ ಬಂದಿರುವುದು ಇವರನ್ನು ಪ್ರೋತ್ಸಾಹಿಸೋಕೆ. ಕೋ ವರ್ಕ್ ಸ್ಪೇಸ್‌ಗಳಿಂದ ಯುವಕರು ಮತ್ತು ಸ್ಟಾರ್ಟ್‌ಅಪ್‌ಗಳು ಹೆಚ್ಚಿನ ಬಂಡವಾಳ ಇಲ್ಲದೇ ತಮ್ಮ ಕಂಪನಿಯನ್ನು ಪ್ರಾರಂಭಿಸಬಹುದು. ಇದರಿಂದ ಹೆಚ್ಚಿನ ಉದ್ಯೋಗಗಳೂ ಸೃಷ್ಟಿ ಆಗುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಹಣ ಆರ್ಥಿಕತೆ ಅಲ್ಲ. ಕಠಿಣ ಕೆಲಸ ಮಾಡುವ ಸಮಾಜದಿಂದ ಆರ್ಥಿಕತೆ ಸೃಷ್ಟಿಯಾಗುತ್ತದೆ. ನಾನು ಈಗಿನ ಯುವಕ ಯುವತಿಯರ ಬೆಳವಣಿಗೆಯನ್ನು ಬೆಂಬಲಿಸುತ್ತೇನೆ. ನಮ್ಮ ದೇಶದ ಶೇ. ೪೬ರಷ್ಟು ಜನಸಂಖ್ಯೆ ಯುವಪಡೆ. ನಮ್ಮ ಪ್ರಧಾನಿಯವರ ಕನಸಿನಂತೆ ನಮ್ಮ ದೇಶ ಅಭಿವೃದ್ದಿಯಾಗುತ್ತಿದೆ. ಇಡೀ ವಿಶ್ವದ ಆರ್ಥಿಕ ಬೆಳವಣಿಗೆ ಶೇ ೧-೨ ಇದ್ದರೆ, ಭಾರತದ ಆರ್ಥಿಕತೆ ಶೇ ೭ ರಷ್ಟಿದೆ. ಮುಂದಿನ ೨೫ ವರ್ಷಗಳ ಅಮೃತ ಕಾಲದಲ್ಲಿ ಭಾರತ ವಿಶ್ವ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ನಮ್ಮ ಯುವಕರು ಭಾರತದಲ್ಲಿರುವುದು ಮುಖ್ಯ. ಭಾರತದಲ್ಲಿ ವಿದ್ಯಾಭ್ಯಾಸ ಪಡೆಯುವುದೂ ಮುಖ್ಯ. ಭಾರತದಲ್ಲೇ ಕೆಲಸ ಮಾಡುವುದು ಸಹ ಅತಿ ಮುಖ್ಯ. ಆದರೆ ಅದಕ್ಕಿಂತಲೂ ಮುಖ್ಯ ಅಂದರೆ ಭಾರತದಲ್ಲೇ ವಾಣಿಜ್ಯೋದ್ಯಮಿ ಆಗುವುದು. ಮುಂದಿನ ಒಂದೆರಡು ದಶಕಗಳಲ್ಲಿ ಇವರುಗಳು ವಿಶ್ವದಲ್ಲೇ ದೊಡ್ಡ ಮಟ್ಟಕ್ಕೆ ಬೆಳೆಯುತ್ತಾರೆ. ನಮ್ಮ ಯುವಕರು ಬಿಲ್ ಗೇಟ್ಸ್, ಸ್ಟೀವ್ ಜಾಬ್ಸ್ ಅವರನ್ನೂ ಸೋಲಿಸುವ ಮಟ್ಟಕ್ಕೆ ಬೆಳೆಯಬೇಕು. ನಮ್ಮ ಯುವಕರು ಆಕಾಶದೆತ್ತರಕ್ಕೆ ಬೆಳೆದು ವಿಶ್ವವನ್ನು ಗೆಲ್ಲಬೇಕು.
ಕೋ ವರ್ಕಿಂಗ್ ಸ್ಪೇಸ್‌ಗೆ ಬಿಹೈವ್ ಅನ್ನುವ ಹೆಸರು ಅತ್ಯಂತ ಸೂಕ್ತವಾಗಿದೆ. ಬೇರೆ ಬೇರೆ ಹೂಗಳಿಂದ ಸಂಗ್ರಹಿಸಿದ ಮಧುವನ್ನು ಒಂದೇ ಕಡೆ ಜೇನು ಉತ್ಪಾದಿಸುವ ಸ್ಥಳ. ಕಠಿಣ ಪರಿಶ್ರಮದಿಂದ ಜೇನು ತಯಾರಾಗುತ್ತದೆ. ಅದೇ ರೀತಿ ಇಲ್ಲಿ ಸ್ಥಳ ಪಡೆಯುವ ಪ್ರತಿಯೊಬ್ಬರೂ ದುಂಬಿಯಂತೆ ತಮ್ಮ ಜ್ಞಾನವೆಂಬ ಮಧುವನ್ನು ಸಂಗ್ರಹಿಸಿ ಇಲ್ಲಿ ಜೇನನ್ನು ಉತ್ಪಾದಿಸಬೇಕು ಎನ್ನುವುದು ನನ್ನ ಆಸೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಮುಖ್ಯ ಸಚೇತಕ ಸತೀಶ್ ರೆಡ್ಡಿ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.