ಬಜೆಟ್:ಎಐಡಿಎಸ್‍ಒ ಸ್ವಾಗತ

ಕಲಬುರಗಿ,ಜು 8: ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸಲು ಕಟ್ಟಡ ದುರಸ್ತಿ ಸೇರಿದಂತೆ ಇತರ ಸೌಲಭ್ಯಗಳ ಅಭಿವೃದ್ಧಿಗಾಗಿ ಬಜೆಟ್ ನಲ್ಲಿ ಅನುದಾನ ಘೋಷಿಸಲಾಗಿದೆ. ತಜ್ಞರ ಸಮಿತಿ ನೇಮಕ ಮಾಡಿ ಪಠ್ಯಪುಸ್ತಕ ಪರಿಷ್ಕರಣೆ ಮಾಡುವುದಾಗಿ ಹಾಗೂ ಹೊಸ ಶಿಕ್ಷಣ ನೀತಿ 2020ಯನ್ನು ಕೈಬಿಟ್ಟು ರಾಜ್ಯಕ್ಕೆ ಪ್ರತ್ಯೇಕ ನೀತಿಯೊಂದನ್ನು ಜಾರಿಗೊಳಿಸುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ, ಜೊತೆಗೆ, ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಅನುದಾನವನ್ನು ಹೆಚ್ಚಿಸಲಾಗಿದ್ದನ್ನು ಎಐಡಿಎಸ್ ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಸ್ವಾಗತಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದ್ದ ಲ್ಯಾಪ್ ಟಾಪ್, ಸೈಕಲ್ ವಿತರಣೆಯಂತಹ ಕಲ್ಯಾಣ ಯೋಜನೆಗಳಿಗೆ ಅನುದಾನ ಘೋಷಣೆ ಆಗಿಲ್ಲ ಮತ್ತು ಹಿಂದಿನ ಸರ್ಕಾರದ ಬಜೆಟ್ಟಿಗಿಂತ ಈ ಬಜೆಟ್ಟಿನಲ್ಲಿ ಶಿಕ್ಷಣಕ್ಕೆ ಶೇಕಡ ಒಂದರಷ್ಟು ಅನುದಾನ ಕಡಿತಗೊಳಿಸಿರುವುದರ ಬಗ್ಗೆ ಮುಂದಿನ ದಿನಗಳಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿ ಎಂದು ಆಶಿಸುತ್ತೇವೆ. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕೆಂಬುದು ವಿದ್ಯಾರ್ಥಿ ಸಮುದಾಯದ ಬಹುದಿನಗಳ ಅಪೇಕ್ಷಿಯಾಗಿತ್ತು. ಹಿಂದುಳಿದ ಮತ್ತು ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ವಿದ್ಯಾರ್ಥಿಗಳ ಸೌಲಭ್ಯಗಳಿಗೂ ಅನುದಾನದ ಕೊರತೆಯಿದೆ. ವಿದ್ಯಾರ್ಥಿಗಳ ಅವಶ್ಯಕತೆಗಳನ್ನು ಪೂರೈಸಲು ಬಜೆಟ್ಟಿನ ಹೊರತಾಗಿಯೂ ಸರ್ಕಾರವು ಅನುದಾನ ನೀಡುವದೆಂಬ ಆಶಯವಿದೆ ಎಂದು ಹೇಳಿದ್ದಾರೆ