ಬಜರಂಗ ದಳ ನಿಷೇಧ ಅಸಾಧ್ಯ:ಬಿಎಸ್‌ವೈ ಗುಡುಗು

ಮೈಸೂರು,ಮೇ.೩-ಬಜರಂಗ ದಳ ನಿಷೇಧ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಅದಕ್ಕೆ ಅವಕಾಶವೂ ಕೊಡುವುದಿಲ್ಲ ಈ ವಿಚಾರದಲ್ಲಿ ಕಾಂಗ್ರೆಸ್ ತಿರುಕನ ಕನಸು ಕಾಣುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುಡುಗಿದ್ದಾರೆ.
ಮೈಸೂರಿನಲ್ಲಿ ಬಿಜೆಪಿ ಪರ ಪ್ರಚಾರ ಕೈಗೊಂಡಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್ ಏನು ಬೇಕಾದರೂ ಭರವಸೆ ಕೊಡಬಹುದು ಅದಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗ ನಿಷೇಧ ಮಾಡುವುದಾಗಿ ಹೇಳಿರುವುದೇ ಆ ಪಕ್ಷಕ್ಕೆ ಹಿನ್ನಡೆಯಾಗಲಿದೆ. ಕಾಂಗ್ರೆಸ್‌ನ ಈ ಭರವಸೆ ವಿನಾಶ ಕಾಲೇ ವಿಪರೀತ ಬುದ್ಧಿ ಎಂಬಾತಾಗಿದೆ ಎಂದು ವ್ಯಂಗ್ಯವಾಡಿದರು.
ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಸೋಮಣ್ಣ ಅವರು, ಜಯಭೇರಿ ಬಾರಿಸಲಿದ್ದು, ಸಿದ್ದರಾಮಯ್ಯ ರವರು ಮನೆಗೆ ಹೋಗುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಾವು ಪ್ರಚಾರ ಕೈಗೊಂಡ ಸಂದರ್ಭದಲ್ಲಿ ವರುಣಾದಲ್ಲಿ ನಿರೀಕ್ಷೆಗೂ ಮೀರಿ ಜನರು ಸೇರಿದ್ದರು. ಜನರ ಉತ್ಸಾಹ, ಹುಮ್ಮಸ್ಸು ಗಮನಸಿದರೆ ಸಿದ್ದರಾಮಯ್ಯ ಸೋಲು ಖಚಿತ ಸೋಮಣ್ಣ ಗೆದ್ದು ವಿಧಾನಸೌಧಕ್ಕೆ ಹೋಗುವುದು ನಿಶ್ಚಿತ. ಈ ವಾತಾವರಣ ೨ ಕ್ಷೇತ್ರಗಳಲ್ಲೂ ಗಮನಿಸಿದ್ದೇನೆ ಎಂದರು.
ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಬಂದಿದ್ದೇನೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ೧೩೦ ರಿಂದ ೧೩೫ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಸರ್ಕಾರ ರಚನೆ ಮಾಡುವುದು ಖಚಿತ ಇದಕ್ಕಾಗಿ ಜನರ ಬೆಂಬಲ ಸಿಗಲಿದೆ ಎಂದರು.
ಸ್ವತಹ ಪ್ರಧಾನಿ ನರೇಂದ್ರ ಮೋದಿಯವರು ಅಮಿತ್ ಶಾ ರವರು ಹೆಚ್ಚು ಸಮಯ ನೀಡಿ ರಾಜ್ಯದಲ್ಲಿ ಮತಬೇಟೆ ನಡೆಸಿರುವುದರಿಂದ ಪಕ್ಷಕ್ಕೆ ಶಕ್ತಿ ಬಂದಾತಾಗಿದೆ. ಹೀಗಾಗಿ ರಾಜ್ಯದಲ್ಲಿ ಬಹುಮತ ಸರ್ಕಾರ ಬರಲಿದೆ. ಯಾವುದೇ ಪಕ್ಷದ ಬೆಂಬಲವಿಲ್ಲದೆ ಬಿಜೆಪಿ ತನ್ನ ಸ್ವಂತ ಬಲದ ಮೇಲೆ ಸರ್ಕಾರ ರಚಿಸಲಿದೆ. ಈ ಹಿಂದೆ ಜೆಡಿಎಸ್ ಜತೆ ಕೈ ಜೋಡಿಸಿ ಸಮ್ಮಿಶ್ರ ಸರ್ಕಾರದಿಂದ ಅನುಭವಿಸಿರುವ ಕಷ್ಟ ಎಲ್ಲರಿಗೂ ಗೊತ್ತಿದೆ. ಯಾವುದೇ ಕಾರಣಕ್ಕೂ ಇಂತಹ ಪರಿಸ್ಥಿಗೆ ಅವಕಾಶ ಮಾಡಿಕೊಡಬಾರದು ಎಂದು ಮನವಿ ಮಾಡಿದರು.
ಸಿದ್ದರಾಮಯ್ಯ ಅವರು ಪ್ರಚಾರಕ್ಕೆ ಬರುವುದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರಿಗೆ ಸೋಲು ನಿಶ್ಚಿತವಾಗಿರುವುದರಿಂದ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುವುದನ್ನು ಬಿಟ್ಟು ವರುಣಾದಲ್ಲೇ ಇರುತ್ತಾರೆ ಎಂದರೆ ಅವರಿಗೆ ಸೋಲಿನ ಅರಿವಾಗಿದೆ ಏನೇ ಆದರೂ ಸೋಮಣ್ಣ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು,.