ಹುಬ್ಬಳ್ಳಿ, ಮೇ.೩- ಬಜರಂಗದಳ ನಿಷೇಧ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜರಂಗದಳ ನಿಷೇಧಿಸುವ ಕುರಿತಾದ ಕಾಂಗ್ರೆಸ್‌ನ ಭರವಸೆಗೆ ಪ್ರತಿಕ್ರಿಯಿಸಿದರು. ಕಾಂಗ್ರೆಸ್‌ಗೆ ದೇಶದಲ್ಲಿ ಅಧಿಕಾರವೇ ಇಲ್ಲ ಅದನ್ನು ಹೇಗೆ ನಿಷೇಧಿಸಲು ಸಾಧ್ಯ ಎಂದು ಪ್ರಶ್ನಿಸಿದರು.
ಸಮಾಜದಲ್ಲಿ ಗಲಭೆ ಉಂಟು ಮಾಡುವ ಉದ್ದೇಶದಿಂದ ಕಾಂಗ್ರೆಸ್ ಈ ರೀತಿ ಮಾತನಾಡಿದೆ ಎಂದ ಅವರು, ಜರಂಗದಳ ಇಡೀ ದೇಶದಲ್ಲಿ ಇರುವ ಸಂಘಟನೆ, ಅದನ್ನು ನಿಷೇಧಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಬಿಡುಗಡೆ ಮಾಡಿರುವುದು ಮೋಸದ ಪ್ರಣಾಳಿಕೆ, ಜನರನ್ನು ಮರಳು ಮಾಡುವ ಪ್ರಣಾಳಿಕೆ, ಜನ ಇದನ್ನು ಧಿಕ್ಕರಿಸಲಿದ್ದಾರೆ ಎಂದು ಅವರು ನುಡಿದರು.
ಈಗಾಗಲೇ ಬಿಜೆಪಿ ಜಾರಿಗೆ ತಂದ ಯೋಜನೆಗಳನ್ನು ಪುನಃ ಜಾರಿ ಮಾಡುವುದಾಗಿ ಕಾಂಗ್ರೆಸ್ ಹೇಳಿದೆಯಷ್ಟೆ. ಜನಜೀವನ್ ಮಿಷನ್ ಮೂಲಕ ಮನೆ ಮನೆಗೆ ನೀರು ಕೊಡುವ ಕೆಲಸ ಆರಂಭಿಸಲಾಗಿದೆ, ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪಾಸ್ ಕೊಡುವುದನ್ನು ಬಜೆಟ್ ನಲ್ಲಿ ಘೋಷಣೆ ಮಾಡಿದ್ದೇವೆ. ಹಿಂದುಳಿದ ಜನಾಂಗ, ನಿಗಮಗಳನ್ನು ಸ್ಥಾಪಿಸುವುದಾಗಿ ಹೇಳಿದೆ. ನಾನು ಈಗಾಗಲೇ ಘೋಷಣೆ ಮಾಡಿ ಆದೇಶ ಮಾಡಿದ್ದೇವೆ ಎಂದು ಅವರು ನುಡಿದರು.
ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ಬರೀ ಸುಳ್ಳು ಹೇಳಲಾಗಿದೆ ಎಂದು ಸಿಎಂ ಟೀಕಿಸಿದರು.