ಬಚ್ಚಾರಿಂದ ರಾಜಕೀಯ ಕಲಿತ ಶಿವರಾಜ ಪಾಟೀಲ್ ಅವಕಾಶವಾದಿ

ರಾಯಚೂರು.ಮೇ.೩೧- ವಿಧಾನಸಭಾ ಕ್ಷೇತ್ರದಲ್ಲಿ ತಮಗೆ ಯಾರು ವಿರೋಧಿಗಳಿಲ್ಲ. ಬಚ್ಚಾ ಒಬ್ಬರೇ ಇದ್ದಾರೆಂದು ಹಗುರವಾಗಿ ಮಾತನಾಡುತ್ತಿರುವುದು ಶಾಸಕ ಡಾ.ಶಿವರಾಜ ಪಾಟೀಲ್ ಅವರಿಗೆ ಶೋಭೆ ತರುವುದಿಲ್ಲವೆಂದು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಪೋಗಲ್ ಚಂದ್ರಶೇಖರ ರೆಡ್ಡಿ ಅವರು ಹೇಳಿದ್ದಾರೆ.
ಯಾರನ್ನು ಬಚ್ಚಾ ಎಂದು ಸಂಭೋದಿಸಿದ್ದಿರೋ ಅವರ ಮನೆಯಲ್ಲಿಯೇ ಕುಳಿತು ರಾಜಕೀಯ ಕಲಿತಿರುವುದನ್ನು ಶಾಸಕರು ಮರೆತಿದ್ದಾರೆ. ರಾಜಕೀಯ ಗಂಧ, ಗಾಳಿ ಗೊತ್ತಿಲ್ಲದ ಸಂದರ್ಭದಲ್ಲಿ ಜಾದಳದಿಂದ ಆಯ್ಕೆಗೊಂಡ ಶಾಸಕರು ಅಂದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವಾಗ ಬಚ್ಚಾ ಎಂದು ಯಾರನ್ನು ಕರೆಯಲಾಗಿದೆಯೋ ಅವರ ಮನೆ ಕಾಯುತ್ತಿರುವುದು ನೆನಪಿಸುತ್ತೇನೆ. ನಿತ್ಯ ಜೀವನದ ರಾಜಕೀಯ ಕಲಿತಿದ್ದೇ ಈ ಬಚ್ಚಾ ಅವರಿಂದ ಎನ್ನುವುದು ನೆನಪಿಟ್ಟುಕೊಳ್ಳಬೇಕು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಶಾಸಕರಾಗಿದ್ದು, ಈ ಕ್ಷೇತ್ರದ ಕೆಲಸ ಕಾರ್ಯಗಳಿಗೆ ಐದು ವರ್ಷ ಇದೇ ಬಚ್ಚನ ಜೊತೆ ಇದ್ದು, ಈಗ ಬುದ್ಧಿವಂತರಂತೆ ನಡೆಸುತ್ತಿದ್ದಾರೆ ಎನ್ನುವುದು ಜನರಿಗೆ ಗೊತ್ತು. ನಗರದಲ್ಲಿ ಅಭಿವೃದ್ಧಿ ಹೆಸರಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದು ಎಲ್ಲಾರಿಗೂ ತಿಳಿದ ವಿಷಯವಾಗಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ಬಚ್ಚಾ ಎಂದು ಹೇಳುವ ಮೂಲಕ ಶಾಸಕರು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಮತ್ತೇ ಶಾಸಕರಾಗುವ ತಿರುಕನ ಕನಸು ಕಾಣುತ್ತಿರುವ ಡಾ.ಶಿವರಾಜ ಪಾಟೀಲ್‌ರಿಗೆ ಜನ ಉತ್ತರಿಸಲಿದ್ದಾರೆ.
ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆಂಬ ಮನವರಿಕೆಯಿಂದ ಸೋಲುವ ಭೀತಿ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರಶ್ನಿಸುವವರನ್ನು ಈ ರೀತಿ ಉಡಾಫೆ ಮಾಡುತ್ತಿದ್ದಾರೆ. ಶಾಸಕರು ಹತಾಶರಾಗಿ ಬುದ್ಧಿ ಭ್ರಮಣೆಗೆ ಗುರಿಯಾಗಿದ್ದಾರೆಯೇ? ಬಚ್ಚಾ ಯಾರೆನ್ನುವುದು ಎಲ್ಲಾರಿಗೂ ಗೊತ್ತಿರುವ ಸಂಗತಿ. ಶಾಸಕರು ಒಬ್ಬರು ವೈದ್ಯರಾಗಿ ಈ ರೀತಿಯ ಮಾತನಾಡುತ್ತಿರುವುದು ಅವರ ಬಗ್ಗೆ ಶಂಕೆ ವ್ಯಕ್ತಗೊಳ್ಳುವಂತೆ ಮಾಡುತ್ತದೆ. ನಗರದಲ್ಲಿ ೧೭೬ ಕೋಟಿ ಅಭಿವೃದ್ಧಿಯಾಗಿದೆಂದು ಹೇಳುತ್ತಿದ್ದಾರೆ. ಈ ೧೭೬ ಕೋಟಿ ಎಲ್ಲಿ ಹೋಗಿದೆ. ಎಲ್ಲಿ ಅಭಿವೃದ್ಧಿಯಾಗಿದೆ? ಈ ಭ್ರಷ್ಟಾಚಾರದ ಕರ್ಮಕಾಂಡ ತನಿಖೆಯಾಗಬೇಕು. ಮುಂಬರುವ ದಿನಗಳಲ್ಲಿ ನಾಲಿಗೆಯನ್ನು ಬಿಗಿಹಿಡಿದು ಮಾತನಾಡುವುದನ್ನು ಕಲಿಯಬೇಕೆಂದು ಎಚ್ಚರಿಸಿದ್ದಾರೆ.