ಬಗೆದಷ್ಟು ಸಂಪತ್ತು ಶಾಂತ ಜೈಲುಪಾಲು

ಬೆಂಗಳೂರು,ನ.೨೫-ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ದಾಳಿ ವೇಳೆ ಪೈಪ್‌ನಲ್ಲೂ ಕಂತೆ ಕಂತೆ ಹಣ ಅಡಗಿಸಿ ಯಮಾರಿಸಿದ್ದ ಜೇವರ್ಗಿಯ ಲೋಕೋಪಯೋಗಿ ಕಿರಿಯ ಇಂಜಿನಿಯರ್ ಶಾಂತಗೌಡ ಬಿರಾದಾರನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.
ನೂರಾರು ಪಟ್ಟು ಅಕ್ರಮ ಸಂಪತ್ತು ಗಳಿಸಿ ಪೈಪ್‌ನಲ್ಲೂ ಹಣದ ಕಂತೆ ಅಡಗಿಸಿದ್ದ ಶಾಂತಗೌಡರನ್ನು ನಿನ್ನೆ ರಾತ್ರಿಯೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಕಿರಿಯ ಇಂಜಿನಿಯರ್ ಶಾಂತಗೌಡರಿಗೆ ೧೪ ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಲಾಗಿದ್ದು ಇದರಿಂದಾಗಿ ಶಾಂತಗೌಡರು ಜೈಲು ಪಾಲಾಗಿದ್ದಾರೆ.
ಶಾಂತಗೌಡರ ಮನೆ, ತೋಟದ ಮನೆ, ಜೇವರ್ಗಿಯಲ್ಲಿನ ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ, ರಾತ್ರಿ ೮ ಗಂಟೆವರೆಗೂ ಶೋಧ ಕಾರ್ಯ ನಡೆಸಿದಾಗ, ಡ್ರೈನೇಜ್ ಪೈಪ್‌ನಲ್ಲೂ ಕೂಡ ಹಣದ ಕಂತೆ, ವಾಲ್ ಸೀಲಿಂಗ್?ನಲ್ಲಿ ಬಚ್ಚಿಟ್ಟಿದ್ದ ಹಣದ ಕಂತೆ ಸೇರಿ ೫೪ ಲಕ್ಷ ರೂ. ನಗದು ಸೇರಿ ಅಪಾರ ಪ್ರಮಾಣದ ಆಸ್ತಿ ಪತ್ತೆಯಾಗಿತ್ತು.
ದಾಳಿಯ ವೇಳೆ ಹೆಚ್ಚಿನ ತನಿಖೆಗೆ ಸಹಕಾರ ನೀಡದ ಕಾರಣ ರಾತ್ರಿಯೇ ಶಾಂತಗೌಡ ಅವರನ್ನು ಬಂಧಿಸಿದ ಎಸಿಬಿ ಅಧಿಕಾರಿಗಳು ಸ್ಥಳೀಯ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು.
ಇದೀಗ ೧೪ ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಧೀಶರು ಆದೇಶ ನೀಡಿದ್ದಾರೆ. ಶಾಂತಗೌಡಗೆ ಸಂಬಂಧಿಸಿದ ಬ್ಯಾಂಕ್ ಲಾಕರ್ ಶೋಧ ಹಾಗೂ ಮತ್ತಷ್ಟು ಶೋಧಕಾರ್ಯಗಳು ಮುಂದುವರೆಯಲಿದೆ.
ಈ ನಡುವೆ ಆದಾಯ ಮೀರಿ ನೂರಾರು ಪಟ್ಟು ಆಕ್ರಮ ಆಸ್ತಿ ಗಳಿಸಿದ್ದ ಕೆಎಎಸ್ ಅಧಿಕಾರಿ ಸೇರಿ ೧೫ ಮಂದಿ ಭ್ರಷ್ಟ ಅಧಿಕಾರಿಗಳ ಕಚೇರಿ ಮನೆಗಳ ದಾಳಿ ಬಹುತೇಕ ಮುಗಿದಿದ್ದು ಭ್ರಷ್ಟರ ಬಳಿ ವಶಪಡಿಸಿಕೊಂಡ ಆಸ್ತಿಪಾಸ್ತಿಗಳ ಪರಿಶೀಲನೆ ಯನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ನಡೆಸಿದ್ದಾರೆ.
ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳ ಮನೆ ಕಚೇರಿ ಮೇಲೆ ನಡೆದ ದಾಳಿಯಲ್ಲಿ ೨ ಕೋಟಿ ೧೦ ಲಕ್ಷ ನಗದು, ೯ ಕೋಟಿ ಮೌಲ್ಯದ ೧೭ ಕೆಜಿ ೨೯೯ ಗ್ರಾಂ ಚಿನ್ನಾಭರಣವನ್ನು ಎಸಿಬಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಸರ್ಕಾರದ ವಿವಿಧ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ೧೫ ಮಂದಿ ನೌಕರರಿಗೆ ಸೇರಿದ ಒಟ್ಟು ೬೮ ಸ್ಥಳಗಳಲ್ಲಿ ೫೦೩ ಅಧಿಕಾರಿಗಳು ಹಾಗೂ ಸಿಬ್ಬಂದಿಯ ೬೮ ತಂಡಗಳು ದಾಳಿಯಲ್ಲಿ ಕೋಟ್ಯಂತರ ಮೌಲ್ಯದ ಚಿನ್ನಾಭರಣ ಹಾಗೂ ಆಸ್ತಿ ಪತ್ರ ಸೇರಿದಂತೆ ಇನ್ನಿತರ ಮಹತ್ವದ ದಾಖಲಾತಿ ಜಪ್ತಿ ಮಾಡಲಾಗಿದ್ದು ದಾಳಿ ಮುಕ್ತಾಯಗೊಂಡಿದೆ.
ದಾಳಿಯಲ್ಲಿ ಸಿಕ್ಕಿರುವ ಸ್ಥಿರಾಸ್ತಿ ಹಾಗೂ ಚರಾಸ್ತಿಯ ಮಾಹಿತಿಯನ್ನು ಎಸಿಬಿ ಅಧಿಕಾರಿಗಳು ನೀಡಿದ್ದು ಲೆಕ್ಕ ಹಾಕುವುದು ಪೂರ್ಣಗೊಂಡ ನಂತರ ಒಟ್ಟಾರೆ ಮೌಲ್ಯ ಲಭ್ಯವಾಗಲಿದೆ.
ಟಿ.ಎಸ್ ರುದ್ರೇಶಪ್ಪ:
ಗದಗ ಜಿಲ್ಲೆಯ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ ಅವರ ಬಳಿ ಶಿವಮೊಗ್ಗ ನಗರದಲ್ಲಿ ೨ ವಾಸದ ಮನೆಗಳು, ವಿವಿಧ ಕಡೆಗಳಲ್ಲಿ ೪ ನಿವೇಶನಗಳು, ೯ ಕೆ.ಜಿ ೪೦೦ ಗ್ರಾಂ ಚಿನ್ನದ ಬಿಸ್ಕೆಟ್ ಹಾಗೂ ಆಭರಣಗಳು, ೩ ಕೆ.ಜಿ ಬೆಳ್ಳಿ ವಸ್ತುಗಳು, ೨ ವಿವಿಧ ಕಂಪನಿಯ ಕಾರುಗಳು, ೩ ದ್ವಿಚಕ್ರ ವಾಹನ, ೨ ಎಕರೆ ಕೃಷಿ ಜಮೀನು, ೧೫.೯೪ ಲಕ್ಷ ನಗದು ಹಾಗೂ ೨೦ ಲಕ್ಷ ರೂ.ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
ಕೆ. ಶ್ರೀನಿವಾಸ್
ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯ ಹೆಚ್‌ಎಲ್‌ಐಸಿ-೩, ಶ್ರೀನಿವಾಸ್ ಬಳಿ
ಮೈಸೂರಿನಲ್ಲಿ ೧ ವಾಸದ ಮನೆ, ಮೈಸೂರು ನಗರದಲ್ಲಿ ೧ ಫ್ಲ್ಯಾಟ್, ೨ ನಿವೇಶನ, ಮೈಸೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ೪ ಎಕರೆ ೩೪ ಗುಂಟೆ ಕೃಷಿ ಜಮೀನು, ನಂಜನಗೂಡಿನಲ್ಲಿ ೧ ಫಾರ್ಮ್ ಹೌಸ್, ೨ ವಿವಿಧ ಕಂಪೆನಿಯ ಕಾರುಗಳು, ೨ ದ್ವಿಚಕ್ರ ವಾಹನ, ೧ ಕೆಜಿ ಚಿನ್ನ, ೮ ಕೆ.ಜಿ ೮೪೦ ಗ್ರಾಂ ಬೆಳ್ಳಿ ಸಾಮಾನುಗಳು, ನಗದು ಹಣ ೯.೮೫ ಲಕ್ಷ ನಗದು, ವಿವಿಧ ಬ್ಯಾಂಕ್‌ಗಳಲ್ಲಿ ೨೨ ಲಕ್ಷ ರೂಗಳ ಠೇವಣಿ ಹಾಗೂ ೮ ಲಕ್ಷ ರೂ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ದೊರೆತಿವೆ.
ಕೆ.ಎಸ್. ಲಿಂಗೇಗೌಡ:
ಮಂಗಳೂರಿನ ಸ್ಮಾರ್ಟ್ ಸಿಟಿ ಕಾರ್ಯಪಾಲಕ ಅಭಿಯಂತರ ಲಿಂಗೇಗೌಡರ ಬಳಿ ಮಂಗಳೂರಿನ ವಾಸದ ಮನೆ, ಚಾಮರಾಜನಗರ ಮತ್ತು ಮಂಗಳೂರಿನಲ್ಲಿ ೩ ನಿವೇಶನ, ೨ ವಿವಿಧ ಕಂಪನಿಯ ಕಾರುಗಳು, ೧ ದ್ವಿ ಚಕ್ರ ವಾಹನ, ೧ ಕೆ.ಜಿ.ಬೆಳ್ಳಿ ಆಭರಣ ಹಾಗೂ ೧೦ ಲಕ್ಷ ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ದೊರೆತಿವೆ.
ಲ್. ಸಿ. ನಾಗರಾಜ್:
ಸಕಾಲ ಮಿಷನ್ ನ ಆಡಳಿತಾಧಿಕಾರಿ ನಾಗರಾಜ್ ಬಳಿ ಬೆಂಗಳೂರಿನಲ್ಲಿ ೧ ವಾಸದ ಮನೆ ಹಾಗೂ ನಿವೇಶನ, ನೆಲಮಂಗಲದ ೧ ವಾಸದ ಮನೆ ನೆಲಮಂಗಲ ತಾಲೂಕಿನಲ್ಲಿ ಸುಮಾರು ೧೧ ಎಕರೆ ೨೫ ಗುಂಟೆ ಜಮೀನು, ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶದ ಒಂದು ಕಟ್ಟಡ, ೩ ವಿವಿಧ ಕಂಪನಿಯ ಕಾರುಗಳು, ೧,೭೬ ಕೆ.ಜಿ.ಗ್ರಾಂ ಚಿನ್ನಾಭರಣ, ೭ ಕೆಜಿ ೨೮೪ ಗ್ರಾಂ ಬೆಳ್ಳಿ, ನಗದು ಹಣ ೪೩ ಲಕ್ಷ ನಗದು ಹಾಗೂ ಸುಮಾರು ೧೪ ಲಕ್ಷ ರೂ.ಗಳ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ
ಜಿ.ವಿ.ಗಿರಿ:
ಬಿಬಿಎಂಪಿಯ ಗ್ರೂಪ್-ಡಿ ನೌಕರ ಗಿರಿ ಬಳಿ ಯಶವಂತಪುರಬೆಂಗಳೂರು ನಗರದಲ್ಲಿ ೬ ವಾಸದ ಮನೆಗಳು, ೪ ವಿವಿಧ ಕಂಪನಿಯ ಕಾರುಗಳು, ೪ ದ್ವಿಚಕ್ರ ವಾಹನಗಳು, ೮ ಕೆಜಿ ಬೆಳ್ಳಿ ಸಾಮಾನು, ೧.೧೮ ಲಕ್ಷ ನಗದು ಹಣ ಹಾಗೂ ಸುಮಾರು ೧೫ ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ
ಎಸ್. ಎಸ್.ರಾಜಶೇಖರ್:
ಯಲಹಂಕದ ಸರ್ಕಾರಿ ಆಸ್ಪತ್ರೆಯ ಪಿಸಿಯೋಥೆರಪಿಸ್ಟ್ ಎಸ್.ರಾಜಶೇಖರ್ ಬಳಿ ಮಾರಸಂದ್ರದಲ್ಲಿ ೧ ಫ್ಲ್ಯಾಟ್, ಯಲಹಂಕದಲ್ಲಿನ ಶಿವನಹಳ್ಳಿಯಲ್ಲಿ ೨ ಅಂತಸ್ತಿನ ಒಂದು ಫ್ಲ್ಯಾಟ್ ಮತ್ತು ತಳಮಹಡಿಯಲ್ಲಿ ಖಾಸಗಿ ಆಸ್ಪತ್ರೆ, ಯಲಹಂಕದ ಮೈಲನಹಳ್ಳಿಯಲ್ಲಿ ಒಂದು ನಿವೇಶನ, ೧ ಕಾರ್, ೧ ದ್ವಿ ಚಕ್ರ ವಾಹನ ಹಾಗೂ ಸುಮಾರು ೪ ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿದೆ.
ಮಾಯಣ್ಣ:
ಬಿಬಿಎಂಪಿ ಕೇಂದ್ರ ಕಚೇರಿಯ ಪ್ರಥಮ ದರ್ಜೆ ಸಹಾಯಕ ಮಾಯಣ್ಣ ಬಳಿ ಬೆಂಗಳೂರಿನಲ್ಲಿ ೪ ವಾಸದ ಮನೆಗಳು, ವಿವಿಧ ಕಡೆಗಳಲ್ಲಿ ೬ ನಿವೇಶನಗಳು, ೨ ಎಕರೆ ಕೃಷಿ ಜಮೀನು, ೨ ದ್ವಿಚಕ್ರ ವಾಹನಗಳು, ೧ ಕಾರು, ನಗದು ಹಣ ೫೯ ಸಾವಿರ ೧೦ ಲಕ್ಷ ರೂ. ನಿಶ್ಚಿತ ಠೇವಣಿ(ಎಫ್.ಡಿ), ಉಳಿತಾಯ ಖಾತೆ(ಎಸ್ಟಿ)ಯಲ್ಲಿ ೧.೫೦ ಲಕ್ಷ ಹಣ, ೬೦೦ಗ್ರಾಂ ಚಿನ್ನಾಭರಣ, ೩ ಸ್ಥಳಗಳಲ್ಲಿ ಬೇನಾಮಿ ಆಸ್ತಿ ಹಾಗೂ ಸುಮಾರು ೧೨ ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗಿದೆ.
೯) ಕೆ. ಎಸ್. ಶಿವಾನಂದ್,
ಬಳ್ಳಾರಿ ಜಿಲ್ಲೆಯ ಸಬ್ ರಿಜಿಸ್ಟ್ರಾರ್ (ನಿವೃತ್ತ),ಶಿವಾನಂದ್ ಬಳಿ ಮಂಡ್ಯದಲ್ಲಿ ೧ ವಾಸದ ಮನೆ, ಬೆಂಗಳೂರಿನಲ್ಲಿ ೧ ನಿವೇಶನ, ೧ ಕಾರು, ೨ ದ್ವಿ ಚಕ್ರ ವಾಹನ, ಶಕ್ರಪುರ ಗ್ರಾಮದಲ್ಲಿ ೧ ಅಪಾರ್ಟ್ ಮೆಂಟ್, ಬಳ್ಳಾರಿ ಜಿಲ್ಲೆಯ ಮೋಕಾ ಗ್ರಾಮದಲ್ಲಿ ಸುಮಾರು ೭ ಎಕರೆ ಕೃಷಿ ಜಮೀನು, ಹಾಗೂ ಸುಮಾರು ೮ ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
ಸದಾಶಿವ ರಾಯಪ್ಪ:
ಗೋಕಾಕ್ ನ ಹಿರಿಯ ಮೋಟಾರು ನಿರೀಕ್ಷಕ ಸದಾಶಿವ ರಾಯಪ್ಪ ಮರಲಿಂಗಣ್ಣನವರ್ ಬಳಿ ಬೆಳಗಾವಿಯಲ್ಲಿ ೧ ವಾಸದ ಮನೆ, ೨೨ ಎಕರೆ ಕೃಷಿ ಜಮೀನು, ೧ ಕೆ.ಜಿ ೧೩೫ ಗ್ರಾಂ ಚಿನ್ನ, ೨೨ ಸಾವಿರ ನಗದು ಹಾಗೂ ಸುಮಾರು ೫ ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.೧೧. ಅಡವಿ ಸಿದ್ದೇಶ್ವರ ಕಾರೆಪ್ಪ ಮಸ್ತಿ, ಅಭಿವೃದ್ಧಿ ಅಧಿಕಾರಿ, ಸಹಕಾರ ಇಲಾಖೆ, ರಾಯಬಾಗ್ ತಾಲೂಕು, ಬೆಳಗಾವಿಬೈಲಹೊಂಗಲದಲ್ಲಿ ೨ ವಾಸದ ಮನೆ, ೪ ನಿವೇಶನಗಳು, ೪ ವಿವಿಧ ಕಂಪನಿಯ ಕಾರುಗಳು, ೬ ದ್ವಿಚಕ್ರ ವಾಹನ, ೨೬೩ ಗ್ರಾಂ ಚಿನ್ನಾಭರಣಗಳು, ೯೪೫ ಗ್ರಾಂ ಬೆಳ್ಳಿ ಸಾಮಾನು, ೧,೫೦ ಲಕ್ಷ ರೂ ಮೌಲ್ಯದ ಬ್ಯಾಂಕ್ ಡೆಪಾಸಿಟ್ ಮತ್ತು ಷೇರ್‌ಗಳು, ನಗದು ಹಣ ೧.೧೦ ಲಕ್ಷ ಹಾಗೂ ಸುಮಾರು ೫ ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಸಿಕ್ಕಿವೆ.
ನಾಥಾಚಿ ಪೀರಾಜಿ ಪಾಟೀಲ:
ಬೆಳಗಾವಿ ಜಿಲ್ಲೆಯ ಲೈನ್ ಮೆಕಾನಿಕ್ ಗ್ರೇಡ್-೨ ನಾಥಾಚಿ ಪೀರಾಜಿ ಪಾಟೀಲ ಬಳಿ ಬೆಳಗಾವಿಯಲ್ಲಿ ೧ ವಾಸದ ಮನೆ, ೨ ನಿವೇಶನ, ೧ ಕಾರು, ೧ ದ್ವಿ ಚಕ್ರ ವಾಹನ, ೨೩೯ ಗ್ರಾಂ ಚಿನ್ನಾಭರಣಗಳು, ೧ ಕೆ.ಜಿ ೮೦೩ ಗ್ರಾಂ ಬೆಳ್ಳಿ ಸಾಮಾನು, ೩೮ ಸಾವಿರ ನಗದು ಹಣ ಹಾಗೂ ಸುಮಾರು ೨೦ ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.
ಲಕ್ಷ್ಮೀನರಸಿಂಹಯ್ಯ:
ದೊಡ್ಡಬಳ್ಳಾಪುರದ ರಾಜಸ್ವ ನಿರೀಕ್ಷಕ ಲಕ್ಷ್ಮೀನರಸಿಂಹಯ್ಯ ಬಳಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ ಕಡೆಗಳಲ್ಲಿ ೫ ವಾಸದ ಮನೆಗಳು, ೬ ನಿವೇಶನ, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ೨೫ ಗುಂಟೆ ಜಮೀನು, ೭೬೫ ಗ್ರಾಂ ಚಿನ್ನಾಭರಣಗಳು, ೧೫ ಕೆ.ಜಿ. ಬೆಳ್ಳಿ ಸಾಮಾನುಗಳು, ೧ ಕಾರು, ೨ ದ್ವಿ ಚಕ್ರ ವಾಹನಗಳು, ನಗದು ಹಣ ೧.೧೩ ಲಕ್ಷ ಸಿಕ್ಕಿದೆ.
ವಾಸುದೇವ್, ಆರ್.ಎನ್:
ನಿರ್ಮಿತಿ ಕೇಂದ್ರದ

ಮಾಜಿ ಪ್ರಾಜೆಕ್ಟ್ ಡೈರೆಕ್ಟರ್ (ಯೋಜನಾ ನಿರ್ದೇಶಕರು) ವಾಸುದೇವ್ ಬಳಿ ಬೆಂಗಳೂರಿನಲ್ಲಿ ೫ ವಾಸದ ಮನೆಗಳು,ನಿವೇಶನಗಳು, ನೆಲಮಂಗಲ ತಾಲೂಕಿನ ಸೋಂಪುರ ಗ್ರಾಮದಲ್ಲಿ ೪ ಮನೆಗಳು, ನೆಲಮಂಗಲ ಹಾಗೂ ಮಾಗಡಿ ತಾಲೂಕಿನಲ್ಲಿ ಒಟ್ಟು ೧೦ ಎಕರೆ ೨೦ ಗುಂಟೆ ಕೃಷಿ ಜಮೀನು, ೮೫೦ ಗ್ರಾಂ ಚಿನ್ನ, ೯.೫ ಕೆಜಿ ಬೆಳ್ಳಿ, ೧೫ ಲಕ್ಷ ನಗದು ಹಣ ರೂ. ಹಾಗೂ ಸುಮಾರು ೯ ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಎಂ.ಬಿರಾದರ್:
ಲೋಕೋಪಯೋಗಿ ಇಲಾಖೆಯ ಕಿರಿಯ ಇಂಜಿನಿಯರ್ ಎಂ.ಬಿರಾದರ್ ಬಳಿ ಕಲಬುರಗಿಯಲ್ಲಿ ೨ ವಾಸದ ಮನೆಗಳು, ಬೆಂಗಳೂರು ನಗರದಲ್ಲಿ ೧ ನಿವೇಶನ, ೩ ವಿವಿಧ ಕಂಪನಿಯ ಕಾರುಗಳು, ೧ ದ್ವಿಚಕ್ರ ವಾಹನ, ೧ ಸ್ಕೂಲ್ ಬಸ್, ೨ ಟ್ರ್ಯಾಕ್ಟರ್‌ಗಳು, ೫೪,೫೦ ಲಕ್ಷ ರೂ. ನಗದು ಹಣ, ಸುಮಾರು ೧೦೦ ಗ್ರಾಂ ಚಿನ್ನಾಭರಣ, ೩೬ ಎಕರೆ ಕೃಷಿ ಜಮೀನು, ೧೫ ಲಕ್ಷ ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿದ್ದು ತನಿಖೆ ಮುಂದುವರೆದಿದೆ.
ಕೃಷ್ಣಾರೆಡ್ಡಿ:
ನಂದಿನಿ ಹಾಲು ಉತ್ಪನ್ನಗಳ ಪ್ರಧಾನ ವ್ಯವಸ್ಥಾಪಕ ಕೃಷ್ಣಾರೆಡ್ಡಿ ಬಳಿ
ಬೆಂಗಳೂರಿನಲ್ಲಿ ೩ ವಾಸದ ಮನೆಗಳು, ವಿವಿಧ ಕಡೆಗಳಲ್ಲಿ ೯ ನಿವೇಶನಗಳು, ಚಿಂತಾಮಣಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಒಟ್ಟು ೫ ಎಕರೆ ೩೦ ಗುಂಟೆ ಕೃಷಿ ಜಮೀನು, ಹೊಸಕೋಟೆ ತಾಲೂಕಿನಲ್ಲಿ ೧ ಪೆಟ್ರೋಲ್ ಬಂಕ್, ೩೮೩ ಗ್ರಾಂ ಚಿನ್ನಾಭರಣಗಳು, ೩೩೯೫ ಗ್ರಾಂ ಬೆಳ್ಳಿ ವಸ್ತುಗಳು, ೩ ಲಕ್ಷ ನಗದು ಹಣ ಪತ್ತೆಯಾಗಿದ್ದು ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

ಆಸ್ಪತ್ರೆಗೆ ದಾಖಲು
ರಕ್ತದೊತ್ತಡ (ಬಿಪಿ) ಹೆಚ್ಚಾದ ಹಿನ್ನೆಲೆಯಲ್ಲಿ ಪಿಡಬ್ಲ್ಯೂಡಿ ಜೆ.ಇ.ಶಾಂತಗೌಡ ಬಿರಾದಾರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಕ್ರಮ ಆಸ್ತಿಗಳಿಕೆ ದೂರಿನ ಹಿನ್ನೆಲೆಯಲ್ಲಿ ಬುಧವಾರ ಎಸಿಬಿ ಅಧಿಕಾರಿಗಳು ಗುಬ್ಬಿ ಕಾಲೋನಿಯಲ್ಲಿರುವ ಶಾಂತಗೌಡ ಬಿರಾದಾರ ಅವರ ನಿವಾಸದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಶಾಂತಗೌಡ ಅವರ ಮನೆಯಲ್ಲಿ ಲಕ್ಷಾಂತರ ರೂಪಾಯಿ ನಗದು ಮತ್ತು ಚಿನ್ನಾಭರಣ ಪತ್ತೆಯಾಗಿತ್ತು. ಶಾಂತಗೌಡ ಅವರು ತನಿಖೆಗೆ ಸಹಕಾರ ನೀಡದೇ ಇರುವ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ಅವರನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು. ಇದಾದ ನಂತರ ಶಾಂತಗೌಡ ಅವರಿಗೆ ರಕ್ತದೊತ್ತಡ ಹೆಚ್ಚಾಗಿ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.