ಸಂಜೆವಾಣಿ ವಾರ್ತೆ
ಹೊಸಪೇಟೆ ಏ1: ಬಗರ್ ಹುಕುಂ ಸಾಗುವಳಿದಾರರ ಮೇಲೆ ಅರಣ್ಯ ಇಲಾಖೆಯ ಮಾರಣಾಂತಿಕ ದಾಳಿ ಖಂಡಿಸಿ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಮಿತಿ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.
ಸ್ಥಳೀಯ ತಹಶೀಲ್ದಾರ್ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿತು. ನಂತರ ಮಾತನಾಡಿದ ಸಮಿತಿಯ ಅಧ್ಯಕ್ಷ ಜಿ.ಸಿ ಬಯ್ಯಾರೆಡ್ಡಿ, ಬಗರ್ ಹುಕುಂ ಸಾಗುವಳಿ ಸಕ್ರಮ ಕೊರಿ ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇರುವಾಗ ಅರಣ್ಯ ಇಲಾಖೆ ಸೇರಿದಂತೆ ಯಾರು ಕೂಡ ರೈತರ ಸಾಗುವಳಿ ಸ್ವಾಧೀನಕ್ಕೆ ಅಡ್ಡಿ ಮಾಡದಂತೆ ರಕ್ಷಣೆ ನೀಡಬೇಕು. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರು ಹೋಬಳಿಯ ಮಂಚಲದೊರೆ ಹಾಗೂ ಅಂಕಸಂದ್ರ ಗ್ರಾಮ ಪಂಚಾಯಿತಿಯ 35 ಗ್ರಾಮಗಳ ಎರಡು ಸಾವಿರಕ್ಕಿಂತಲೂ ಅಧಿಕ ಬಡ ಸಾಗುವಳಿದಾರರನ್ನು ಅವರು ಹಕ್ಕುಪತ್ರಕ್ಕಾಗಿ ಸಲ್ಲಿಸಲಾದ ಅರ್ಜಿಗಳನ್ನು ವಿಲೇವಾರಿ ಮಾಡದೇ ಅವರನ್ನು, ಅರಣ್ಯ ಇಲಾಖೆಯ ಮೂಲಕ ದೌರ್ಜನ್ಯ ನಡೆಸಿ, ಬೆದರಿಸಿ ಒಕ್ಕಲೆಬ್ಬಿಸಿ, ಬೀದಿಗೆ ತಳ್ಳಲಾಗುತ್ತಿದ್ದು, ಇದು ಕೂಡಲೇ ನಿಲ್ಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಮೇಲೆ ದೌರ್ಜನ್ಯ ನಡೆಸಿರುವ ಗುಬ್ಬಿ ಎಸಿಎಫ್ ಮಹೇಶ್ , ರೇಂಜರ್ ದುಗ್ಗಯ್ಯ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಬೇಕು. ಬಡ ಸಾಗುವಳಿದಾರರನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ನಡೆಸಿರುವ ಮಾರಣಾಂತಿಕ ದಾಳಿಯಿಂದ ಗುಬ್ಬಿ ತಾಲೂಕು ರೈತ ಸಂಘದ ಅಧ್ಯಕ್ಷ ದೊಡ್ಡ ನಂಜಯ್ಯ ರವರ ತಲೆಗೆ ತೀವ್ರ ಪೆಟ್ಟಾಗಿದ್ದು 35 ಹೊಲಿಗೆಗಳನ್ನು ಹಾಕಲಾಗಿದೆ. ಜೀವನ್ಮರಣ ಪರಿಸ್ಥಿತಿಯಲ್ಲಿ ಇದ್ದಾರೆ ಎಂದರು.
ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯರು ಸೇರಿದಂತೆ ಹತ್ತಾರು ಮಹಿಳೆಯರು -ಪುರುಷರಿಗೆ ತೀವ್ರ ರಕ್ತಸ್ರಾವದ ಪೆಟ್ಟಾಗವಷ್ಟು ದೊಣ್ಣೆಯಿಂದ ಹೊಡೆಯಲಾಗಿದೆ ಎಂದು ಆರೋಪಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ ಯಶವಂತ ಹಾಗೂ ಪದಾಧಿಕಾರಿಗಳು ಹಾಜರಿದ್ದರು.