ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಆಗ್ರಹ

ದೇವದುರ್ಗ,ಮಾ.೧೬- ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವುದು, ನಿವೇಶನ ರಹಿತರಿಗೆ ಭೂಮಿ ಮಂಜೂರು ಮಾಡುವುದು, ಸ್ಮಶಾನ ಭೂಮಿ ನೀಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ, ಪಟ್ಟಣದ ಮಿನಿವಿಧಾನಸೌಧ ಮುಂದೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು ಗುರುವಾರ ಪ್ರತಿಭಟನೆ ನಡೆಸಿದರು.
ಸುಮಾರು ನಾಲ್ಕೈದು ದಶಕಗಳಿಂದ ಬಗರ್‌ಹುಕುಂ ಸಾಗುವಳಿ ಮಾಡುವ ರೈತರಿಗೆ ಹಕ್ಕುಪತ್ರ ನೀಡದೆ ದಲಿತರು ಭೂ ಮಾಲೀಕರ ಹೊಲ-ಗದ್ದೆಗಳಲ್ಲಿ ದುಡಿದು ಜೀವನ ಸಾಗಿಸುವಂತಾಗಿದೆ.
ಸುವರ್ಣಗ್ರಾಮ, ಆಶ್ರಯ ನಿವೇಶನ ಸೇರಿ ವಿವಿಧ ವಸತಿ ಯೋಜನೆಯಡಿ ಸರ್ಕಾರ ಭೂಮಿಗುರುತಿಸಿ ದಶಕಗಳೆ ಕಳೆದರೂ ಅಧಿಕಾರಿಗಳು ಹಂಚಿಕೆ ಮಾಡಿ ಹಕ್ಕುಪತ್ರ ನೀಡುವಲ್ಲಿ ವಿಫಲರಾಗಿದ್ದಾರೆ. ನಿರಂತರ ಹೋರಾಟ ಮಾಡಿ ಅರ್ಜಿ ಸಲ್ಲಿಸಿದ್ದರೂ ಸರ್ಕಾರ ಹಾಗೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಗರ್‌ಹುಕುಂ ಸಾಗುವಳಿದಾರರು ೫೭ರಡಿ ಅರ್ಜಿ ಸಲ್ಲಿಸಿದವರಿಗೆ ಸಕ್ರಮಗೊಳಿಸಿ ಹಕ್ಕುಪತ್ರ ನೀಡಬೇಕು. ಬಡವರಿಗೆ ಸೂಕ್ತ ನಿವೇಶನ ನೀಡಿಮನೆ ಮಂಜೂರು ಮಾಡಬೇಕು. ಸುವರ್ಣಗ್ರಾಮ ಯೋಜನೆಯಡಿ ಆಯ್ಕೆಯಾದ ಕ್ಯಾದಿಗೇರಾ, ಶಾವಂತಗೇರಾ, ಲಿಂಗದಹಳ್ಳಿ, ತಿಪ್ಪಲದಿನ್ನಿ, ನಾಗೋಲಿ, ಚಿಂತಲಕುಂಟ ಬಡವರಿಗೆ ನಿವೇಶನ ನೀಡಬೇಕು. ಮಸರಕಲ್, ಗಬ್ಬೂರು, ಮಲ್ಲಾಪುರ ಫಲಾನುಭವಿಗಳಿಗೆ ಲೇಔಟ್ ನಿರ್ಮಿಸಿ ಸೌಲಭ್ಯ ಕಲ್ಪಿಸಬೇಕು. ಕೊರತೆಇರುವ ಕಡೆ ಸ್ಮಶಾನ ಭೂಮಿ ಮಂಜೂರು ಮಾಡಬೇಕು. ಮಸೀದಪುರ ಗ್ರಾಮಸ್ಥಳಾಂತರ ಮಾಡಬೇಕು. ಪಟ್ಟಣದ ಸರ್ವೇ ನಂ.೩/೧ ಜಾಗ ಒತ್ತುವರಿ ತಡೆಯಬೇಕು. ಹಿರೇರಾಯಕುಂಪಿ ಬಹುಕೋಟಿ ರೂ. ಯೋಜನೆ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ರೋಡಲಬಂಡ ಏತನೀರಾವರಿ ಯೋಜನೆ ಜಾರಿಗೊಳಿಸುವುದೂ ಸೇರಿ ಇನ್ನಿತರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ರಾಜ್ಯ ಸಂಚಾಲಕ ಹನುಮಂತಪ್ಪ ಕಾಕರಗಲ್, ತಾಲೂಕು ಸಂಚಾಲಕ ಶಿವಪ್ಪ ಪಲಕನಮರಡಿ, ಶಿವರಾಜ ರುದ್ರಾಕ್ಷಿ, ಬೂದೆಪ್ಪ ಮ್ಯಾತ್ರಿ, ಯೇಸು ಮಸರಕಲ್, ಬಸವರಾಜ ಹುಲಿಗುಡ್ಡ, ಶಿವರಾಜ ಗಣಜಲಿ, ಮಹೇಶ ಹಿರೇಬೂದೂರು, ಹುಲ್ಲೇಶಬಾವಿಮನಿ, ನಾಗರಾಜ ಭೇಟಿ, ಶಾಂತಪ್ಪ ಮ್ಯಾತ್ರಿ, ಕೃಷ್ಣಪ್ಪ ದೊರೆ, ರಂಗಣ್ಣ ಮಸೀದಿಪುರ, ರಾಘವೇಂದ್ರ ಅಂಜಳ, ಶಿವಪ್ಪ ಇತರರಿದ್ದರು.