ಬಗರ್ ಹುಕುಂ ಸಮಿತಿಗೆ ಮಲ್ಲಿಕಾರ್ಜುನ್ ನೇಮಕ

ಅರಸೀಕೆರೆ, ನ. ೬- ರಾಜ್ಯ ಬಿಜೆಪಿ ಸರ್ಕಾರ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಸೂಕ್ತ ಸ್ಥಾನಮಾನ ನೀಡಿ ಗೌರವಿಸುತ್ತಿದೆ. ಗಿಜಿಹಳ್ಳಿ ಮಲ್ಲಿಕಾರ್ಜುನ ಸ್ವಾಮಿಯವರನ್ನು ಬಗರುಕುಂ ಸಮಿತಿಗೆ ಸದಸ್ಯರನ್ನಾಗಿ ನೇಮಿಸಿರುವುದು ಸಂತಸದ ಸಂಗತಿ ಎಂದು ಗ್ರಾಮಾಂತರ ಬಿಜೆಪಿ ಘಟಕದ ಉಪಾಧ್ಯಕ್ಷ ಅಣ್ಣನಾಯಕನಹಳ್ಳಿ ವಿಜಯಕುಮಾರ್ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಮಲ್ಲಿಕಾರ್ಜುನ ಸ್ವಾಮಿ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ಅನೇಕ ವರ್ಷಗಳಿಂದ ಸಾಮಾನ್ಯ ಕಾರ್ಯಕರ್ತರಾಗಿ ಪಕ್ಷದ ಸಂಘಟನೆಗೆ ಶ್ರಮಿಸಿದ ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕ್ಷೇತ್ರದ ಶಾಸಕ ಕೆ. ಎಂ. ಶಿವಲಿಂಗೇಗೌಡ ಅಧ್ಯಕ್ಷರಾಗಿರುವ ಬಕರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಗೆ ಸದಸ್ಯರನ್ನಾಗಿ ನೇಮಿಸಿದೆ ಎಂದರು.
ಕಸಬಾ ಹೋಬಳಿಯ ಸೂಳೆಕೆರೆ ಗ್ರಾಮದ ಭಾರತಿ ಕಾಂತರಾಜು ಹಾಗೂ ಪರಿಶಿಷ್ಟ ಜಾತಿಯಿಂದ ಕಣಕಟ್ಟೆ ಹೋಬಳಿಯ ಮಾಡಾಳು ರಮೇಶ್ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡುವ ಮೂಲಕ ತಾಲ್ಲೂಕಿನ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಪಡೆಯಲ್ಲಿ ಹುಮ್ಮಸ್ಸು ಮೂಡಲು ಪ್ರೇರಣೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಗರ ಬಿಜೆಪಿ ಘಟಕದ ಅಧ್ಯಕ್ಷ ಪುರುಷೋತ್ತಮ, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಅವಿನಾಶ್ ನಾಯ್ಡು, ಪ್ರಧಾನ ಕಾರ್ಯದರ್ಶಿ ಶಾಬಾದ್ ಮಂಜುನಾಥ್, ವಿನೋದ್ ಕುಟ್ಟಿ, ಗಿಜಿಹಳ್ಳಿ ಪ್ರವೀಣ್, ಸಿದ್ದೇಶ್, ಛಾಯಾ ಹೊಸಳ್ಳಿ ಬಸವಲಿಂಗಪ್ಪ ಹಾರನಹಳ್ಳಿ ಶ್ರೀನಿವಾಸ್ ಮತ್ತಿತರರು ನೂತನ ಸದಸ್ಯರನ್ನು ಅಭಿನಂದಿಸಿದರು.