ಬಗರ್‌ಹುಕುಂ ಸಾಗುವಳಿ- ಮನೆಗಳಿಗೆ ಹಕ್ಕುಪತ್ರ ನೀಡಿಕೆಗೆ ಕ್ರಮ : ಡಿಸಿ

ದಾವಣಗೆರೆ.ಮಾ.೨೧; ಬಹುದಿನಗಳಿಂದ ಸಿಗದ ಸರ್ಕಾರಿ ಸೌಲಭ್ಯ ಮತ್ತು ಸಮಸ್ಯೆಗಳ ಪರಿಹಾರಕ್ಕಾಗಿ ಕಾದು ಕುಳಿತಿದ್ದ ಗ್ರಾಮಸ್ಥರಲ್ಲಿ ಪರಿಹಾರದ ನಿರೀಕ್ಷೆ ಮತ್ತು ಭರವಸೆಯ ಭಾವ ಮೂಡಿತ್ತು. ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯಕ್ಕೆ ಸಕಲ ರೀತಿಯಲ್ಲೂ ಸಜ್ಜುಗೊಂಡು ಶೋಭಿತವಾಗಿದ್ದ ಗ್ರಾಮಗಳಲ್ಲಿ ಹಬ್ಬದ ವಾತಾವರಣವಿತ್ತು.     ಚನ್ನಗಿರಿ ತಾಲ್ಲೂಕಿನ ತಿಪ್ಪಗೊಂಡನಹಳ್ಳಿ ಮತ್ತು ರಾಜಗೊಂಡನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ನೇತೃತ್ವದ ಅಧಿಕಾರಿಗಳ ತಂಡದೊಂದಿಗೆ ಶಾಸಕರಾದ ಕೆ.ಮಾಡಾಳ್ ವಿರೂಪಾಕ್ದಪ್ಪನವರು ಸಹ ಸಾಥ್ ನೀಡಿ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಸಂಪನ್ನಗೊಳಿಸಿದರು.   ಮೊದಲಿಗೆ ಮಲ್ಲಿಗೆರೆಯಲ್ಲಿ ಗ್ರಾಮ ವಾಸ್ತವ್ಯದ ಉದ್ಘಾಟನೆಯನ್ನು ಚನ್ನಗಿರಿ ಕ್ಷೇತ್ರದ ಶಾಸಕರು ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷರಾದ ಮಾಡಾಳ್ ವಿರೂಪಾಕ್ಷಪ್ಪ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿ.ಪಂ ಸಿಇಓ ಡಾ.ವಿಜಯ ಮಹಾಂತೇಶ ದಾನಮ್ಮನವರ್, ಜಿ.ಪಂ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ ನಾಯ್ಕ ಸೇರಿದಂತೆ ಮತ್ತಿತರ ಗಣ್ಯರು ನೆರವೇರಿಸಿದರು.      ಈ ವೇಳೆ ಶಾಸಕರು ಮಾತನಾಡಿ, ತಿಪ್ಪಗೊಂಡನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಮಲ್ಲಿಗೆರೆಯ ಅನೇಕ ಗ್ರಾಮಸ್ಥರು ಸುಮಾರು ವರ್ಷಗಳಿಂದ ಬಗರ್‌ಹುಕುಂ ಸಾಗುವಳಿ ಮಾಡುತ್ತಿದ್ದು, ಇವರಿಗೆ ಹಕ್ಕು ಪತ್ರ ನೀಡಿಲ್ಲ. ಯಾವಾಗ ತಮ್ಮನ್ನು ಅರಣ್ಯ ಇಲಾಖೆಯವರು, ಪೊಲೀಸರು ಒಕ್ಕಲೆಬ್ಬಿಸುತ್ತಾರೋ ಎಂಬ ಭಯದಲ್ಲಿ ಜನರು ಇದ್ದಾರೆ. ಇವರಿಗೆ ಹಕ್ಕು ಪತ್ರ ನೀಡಿದಲ್ಲಿ ನೆಮ್ಮದಿಯಿಂದ ಬದುಕುತ್ತಾರೆ.      ಲಂಬಾಣಿ, ಕುರುಬ, ಲಿಂಗಾಯತ, ಪ್ರವರ್ಗ-1 ಮತ್ತು ಮುಸ್ಲಿಂ ಸಮುದಾಯಕ್ಕೆ ಸೇರಿದ ಒಟ್ಟು 149 ಜನರು ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ಇದು ಗೋಮಾಳವಾಗಿದ್ದು ಅರಣ್ಯ ಇಲಾಖೆಯವರು ಇಲ್ಲಿ ಅಕೇಶಿಯಾ ಇನ್ನಿತರೆ ಗಿಡ ಮರ ಬೆಳೆದು ತಮ್ಮ ಇಲಾಖೆಗೆ ಸೇರಿಸಿಕೊಂಡಿದ್ದು ಈಗ ಇದು ಮೈನರ್ ಅರಣ್ಯ ಇಲಾಖೆಗೆ ಸೇರಿದೆ. ಇವರಿಗೆ ಹಕ್ಕು ಪತ್ರ ನೀಡಲು ಕೇಂದ್ರದ ನೀತಿಯನ್ವಯ ದಾಖಲಾತಿಗಳನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಕೇಳುತ್ತಿದ್ದಾರೆ ಎಂದರು.    ಸುಮಾರು 112 ವಯೋಮಾನದ ರಾಮಾನಾಯ್ಕ ಎಂಬ ವಯೋವೃದ್ದರು ಮೊದಲು ಇಲ್ಲಿ ಊರು ಇತ್ತು ಎಂದು ದಾಖಲೆ ನೀಡಿದ್ದಾರೆ. ಇದರ ಆಧಾರದ ಮೇಲೆ ಹಕ್ಕು ಪತ್ರ ನೀಡಬೇಕೆಂದರು.    ಈ ಭಾಗದಲ್ಲಿ ಸುಮಾರು 68 ಜನರು ಮನೆ ಕಟ್ಟಿಕೊಂಡು ಹಲವಾರು ವರ್ಷಗಳಿಂದ ವಾಸಿಸುತ್ತಿದ್ದಾರೆ. ಈ ಮನೆಗಳು ಕೂಡ ಅರಣ್ಯ ವ್ಯಾಪ್ತಿಯಲ್ಲಿ ಬರಲಿವೆ ಎಂಬ ಕಾರಣಕ್ಕೆ ಈ ಮನೆಗಳಿಗೆ ಇದುವರೆಗೆ ಖಾತೆ ನೀಡಿಲ್ಲ. ಜಿಲ್ಲಾಧಿಕಾರಿಗಳಿಗೆ ಇದನ್ನು ಡಿನೋಟಿಫೈ ಮಾಡುವ ಅಧಿಕಾರ ಇದ್ದು, ಹಿರಿಯರ ದಾಖಲೆಗಳನ್ನು ಕೇಳಿಕೊಂಡು ಅರಣ್ಯ ಭೂಮಿಯನ್ನು ಡಿನೋಟಿಫೈ ಮಾಡಿ ಇವರಿಗೆ ಇ-ಸ್ವತ್ತು ಆಗುವಂತೆ ಸಹಕರಿಸಬೇಕೆಂದರು.   ಮನೆ ಮನೆಗೆ ಕುಡಿಯುವ ನೀರು ಒದಗಿಸುವ ಜಲ ಜೀವನ್ ಮಿಷನ್ ಯೋಜನೆಯಡಿ ನಲ್ಲಿಗೆ ಮೀಟರ್ ಹಾಕಲಾಗುತ್ತಿದೆ. ತೋಟಗಳಿಗೆ ಕಾಡಾನೆ ಮತ್ತು ಇತರೆ ಕಾಡು ಪ್ರಾಣಿಗಳು ನುಗ್ಗಿ ಬೆಳೆ ಹಾನಿಯಾಗದಂತೆ ಕಾಡು ಪ್ರಾಣಿ ತಡೆ ಯೋಜನೆಗೆ ಈಗಾಗಲೇ ಟೆಂಡರ್ ಆಗಿದೆ. ಹಾಗೂ ತಿಪ್ಪನಗೊಂಡನಹಳ್ಳಿ ಮತ್ತು ರಾಜಗೊಂಡನಹಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಅನೇಕ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಗ್ರಾಮಸ್ಥರು ಮನೆ ಬಾಗಿಲಿಗೆ ಸೌಲಭ್ಯ ಒದಗಿಸುವ ಈ ವಿನೂತನ ಕಾರ್ಯಕ್ರಮವಾದ ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.     ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಜನರಿಗೆ ಸರ್ಕಾರ ನೀಡಿರುವ ಸೌಲಭ್ಯಗಳು ಯಾವುದೇ ಮಧ್ಯವರ್ತಿಗಳು ಮತ್ತು ಏಜೆಂಟರ ಹಾವಳಿ ಇಲ್ಲದೇ ಹಾಗೂ ಯಾವುದೇ ಅಡೆತಡೆ ಇಲ್ಲದೇ ಸಿಗುವಂತಾಗಬೇಕು. ಅನಗತ್ಯವಾಗಿ ತಾಲ್ಲೂಕು ಮತ್ತು ಜಿಲ್ಲೆಯ ಕಚೇರಿಗಳಿಗೆ ಜನರು ಅಲೆದಾಡುವುದನ್ನು ತಪ್ಪಿಸಲು ಸರ್ಕಾರ ಜಿಲ್ಲಾಧಿಕಾರಿಗಳ ನಡೆ-ಹಳ್ಳಿಗಳ ಕಡೆಗೆ ಎಂಬ ವಿನೂತನ ಮತ್ತು ಅತ್ಯುತ್ತಮವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದರು
    ಜಿ.ಪಂ ಸಿಇಓ ವಿಜಯ ಮಹಾಂತೇಶ ದಾನಮ್ಮನವರ್ ಮಾತನಾಡಿ, ಆಡಳಿತ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಬಹಳಷ್ಟು ಸೌಲಭ್ಯಗಳು ಆನ್‌ಲೈನ್ ಆಗಿದ್ದರೂ ಸಹ ಜನರು ತಾಲ್ಲೂಕು ಮತ್ತು ಜಿಲ್ಲಾಡಳಿತದ ಕಚೇರಿಗಳಿಗೆ ಅಲೆಯುವುದು ತಪ್ಪಿಲ್ಲ. ಜನರು ಅನಾವಶ್ಯಕವಾಗಿ ಕಚೇರಿಗಳಿಗೆ ಅಲೆದಾಡುವುದು ಹಾಗೂ ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಉದ್ದೇಶದಿಂದ ಸರ್ಕಾರ, ಜಿಲ್ಲಾಧಿಕಾರಿಗಳ ತಂಡವೇ ಗ್ರಾಮಕ್ಕೆ ಬಂದಿದೆ ಎಂದರು.     ಕಾರ್ಯಕ್ರಮದಲ್ಲಿ ಜಿ.ಪಂ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ ನಾಯ್ಕ, ಜಿ.ಪಂ ಸದಸ್ಯರಾದ ಯಶೋಧಮ್ಮ ಮರುಳಪ್ಪ, ಚನ್ನಗಿರಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಕವಿತಾ, ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.