ಬಕ್ರೀದ್: ಶಾಂತಿ ಸಭೆ


ಅಣ್ಣಿಗೇರಿ,ಜೂ.19: ಇದೇ ಜೂ.29 ರಂದು ಆಚರಿಸಲ್ಪಡುವ ಬಕ್ರೀದ್ ಹಬ್ಬವನ್ನು ಸಮಾಜ ಬಾಂಧವರು ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಹಬ್ಬವನ್ನು ಶಾಂತಿ ಸುವ್ಯವಸ್ಥೆಯಿಂದ ಆಚರಿಸಿ ಯಶಸ್ವಿಗೊಳಿಸಿ ಎಂದು ಪಿಎಸ್‍ಐ ಸಿದ್ಧಾರೂಢ ಆಲದಕಟ್ಟಿ ಹೇಳಿದರು.
ಅವರು ಸ್ಥಳೀಯ ಪೊಲೀಸ್ ಠಾಣೆ ಆವರಣದಲ್ಲಿ ಹಮ್ಮಿಕೊಂಡ ಬಕ್ರೀದ ಹಬ್ಬದ ಶಾಂತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪಟ್ಟಣದಲ್ಲಿ ಇಲ್ಲಿಯತನಕ ಎಲ್ಲ ಸಮುದಾಯದವರು ಸೇರಿಕೊಂಡು ಜಾತಿ ಬೇಧ ಭಾವ ಮಾಡದೇ ಹಬ್ಬವನ್ನು ಆಚರಿಸಿಕೊಂಡು ಬಂದಿರುತ್ತಿರೋ ಅದೇ ರೀತಿ ಮುಂಬರುವ ದಿನಗಳಲ್ಲಿಯೂ ಕೂಡಾ ಹಬ್ಬವನ್ನು ಆಚರಿಸಿ, ಇದಕ್ಕೆ ಬೇಕಾಗುವ ಪೊಲೀಸ್ ಭದ್ರತೆಯನ್ನು ನೀಡಲು ಇಲಾಖೆ ನಿಮ್ಮೊಂದಿಗೆ ಇದೆ ಎಂದರು.
ಮುಖಂಡ ಷಣ್ಮುಖ ಗುರಿಕಾರ ಮಾತನಾಡಿ, ಪಟ್ಟಣದಲ್ಲಿ ಜರುಗುವ ಯಾವುದೇ ಹಬ್ಬವನ್ನು ಹಿಂದೂ ಮುಸ್ಲಿಂ ಸಮಾಜದವರು ಸೌಹಾರ್ಧತೆಯಿಂದ ಆಚರಿಸಿಕೊಂಡು ಬಂದಿದ್ದಾರೆ. ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗ್ರಾಮದ ಮುಖಂಡರ ನೇತೃತ್ವದಲ್ಲಿ ಹಬ್ಬವನ್ನು ಆಚರಿಸುತ್ತೇವೆ ಎಂದು ಭರವಸೆ ನೀಡಿದರು.
ಅಂಜುಮನ್ ಸಂಸ್ಥೆ ಸದಸ್ಯ ಆಶೀಫಲಿ ಗುಳೇದಗುಡ್ಡ ಮಾತನಾಡಿ, ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ ಹಬ್ಬಕ್ಕೆ ಬೇಕಾಗುವ ಸಕಲ ಸಿದ್ಧತೆಯನ್ನು ಅಂಜುಮನ್ ಸಂಸ್ಥೆಯಿಂದ ಮಾಡಿಕೊಳ್ಳಲಾಗುತ್ತಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ನಾಗಪ್ಪ ದಳವಾಯಿ, ರಮಜಾನಸಾಬ ಅಬ್ಬಿಗೇರಿ, ಫಕ್ರುವಲಿ ಲೋಕಾಪೂರಿ, ಮಹ್ಮದರಫೀಕ ಬಡಿಗೇರ, ಹಜರೇಸಾಬ ಸುಂಕದ ಧರ್ಮಣ್ಣ ಹರನಶಿಕಾರಿ,ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.