ಬಕ್ರೀದ್: ಗೋವುಗಳ ಅಕ್ರಮ ಸಾಗಣೆ, ಹತ್ಯೆ ತಡೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ:ಜೂ.10:ಇದೇ ಜೂನ್ 17ರಂದು ಬಕ್ರೀದ್ ಹಬ್ಬವಿದ್ದು, ಆ ನಿಮಿತ್ಯ ಗೋವುಗಳನ್ನು ಅಕ್ರಮವಾಗಿ ಸಾಗಿಸಿ ಹತ್ಯೆ ಮಾಡಲಾಗುತ್ತಿದ್ದು, ಕೂಡಲೇ ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸೋಮವಾರ ಹಿಂದೂ ಜಾಗೃತಿ ಸೇನೆ ಜಿಲ್ಲಾ ಸಮಿತಿಯ ಕಾರ್ಯಕರ್ತರು ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಬಕ್ರೀದ್ ಹಬ್ಬದಲ್ಲಿ ಗೋವುಗಳನ್ನು ಹತ್ಯೆ ಮಾಡುತ್ತಿರುವುದು ಖಂಡನೀಯ. ಗೋವುಗಳು ಹಿಂದೂಗಳು ದೇವರೆಂದು ಪೂಜಿಸುತ್ತಾರೆ. ಸರ್ಕಾರದಿಂದ ಗೋಹತ್ಯೆ ನಿಷೇಧದ ಆದೇಶವಿದ್ದರೂ ಜಿಲ್ಲೆಯಲ್ಲಿ ಹಾಗೂ ನಗರದಲ್ಲಿ ಇನ್ನೂ ಕೂಡ ಅಕ್ರಮ ಕಸಾಯಿಖಾನೆಗಳು, ಅಕ್ರಮ ಗೋಸಾಗಣೆಗಳು ನಡೆಯುತ್ತಿವೆ ಎಂದು ಅಸಮಾಧಾನ ಹೊರಹಾಕಿದರು.
ಬಕ್ರೀದ್ ಹಬ್ಬದ ನಿಮಿತ್ಯ ಬೇರೆ, ಬೇರೆ ಜಿಲ್ಲೆಗಳಿಂದ ಹಾಗೂ ಬೇರೆ, ಬೇರೆ ರಾಜ್ಯಗಳಿಂದ, ಗ್ರಾಮೀಣ ಪ್ರದೇಶಗಳಿಂದ ಸಾವಿರಾರು ಗೋವುಗಳನ್ನು ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದೆ. ಇದನ್ನು ತಡೆಯಲು ಪ್ರತಿ ವರ್ಷವೂ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಈ ವರ್ಷವೂ ವರ್ತುಲ ರಸ್ತೆಯಲ್ಲಿನ ರಾಮ ಮಂದಿರ, ನಾಗನಹಳ್ಳಿ ಕ್ರಾಸ್, ಶಹಾಬಾದ್ ಕ್ರಾಸ್, ಸೇಡಂ ರಸ್ತೆ, ಹುಮ್ನಾಬಾದ್ ರಸ್ತೆ, ಆಳಂದ್ ಚೆಕ್ ಪೋಸ್ಟ್, ಅಫಜಲಪುರ ರಸ್ತೆ, ಸುಲ್ತಾನಪುರ ರಸ್ತೆಗಳಲ್ಲಿ ಪೋಲಿಸ್ ಬಂದೋಬಸ್ತ್ ಹಾಕಿ ಚೆಕ್‍ಬಂದಿಯ ಮೂಲಕ ಅಕ್ರಮ ಗೋವುಗಳನ್ನು ತಡೆದು ರಕ್ಷಿಸಬೇಕು ಎಂದು ಅವರು ಒತ್ತಾಯಿಸಿದರು.
ಹಿಂದೂ ಕಾರ್ಯಕರ್ತರಿಗೆ, ಗೋ ರಕ್ಷಕರಿಗೆ ರಾತ್ರಿ ಅಕ್ರಮವಾಗಿ ಸಾಗಿಸುತ್ತಿರುವ ಗೋವುಗಳನ್ನು ತಡೆಯಲು ಪೋಲಿಸರ ಸಹಾಯ ಒದಗಿಸಬೇಕು ಎಂದು ಆಗ್ರಹಿಸಿದ ಅವರು, ಅಕ್ರಮವಾಗಿ ಗೋವು ಸಾಗಣೆ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ್ ಸ್ವಾದಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸುನೀಲ್ ಸಿರ್ಕೆ, ಸಂತೋಷ್ ಸೊನಾವಣೆ, ಸಿದ್ದು ಕಂದಗಲ್, ದಶರಥ್ ಪಿ. ಇಂಗೋಳೆ, ಸಂಗಮೇಶ್ ಎಸ್. ಕಾಳಗನೂರ್, ಮಹಾದೇವ್ ಕೋಟನೂರ್, ಚೇತನ್ ಪಾಟೀಲ್, ಪ್ರಕಾಶ್ ವಾಘಮಾರೆ, ರಾಜು ಕಮಲಾಪುರೆ, ರಾಜು ಸ್ವಾಮಿ, ಚಿದಾನಂದ್ ಸ್ವಾಮಿ, ಉದಯ್ ಸುಲ್ತಾನಪುರ, ಹಣಮಂತ್ ಪೂಜಾರಿ, ಶಿವು ರಜಪೂತ್ ಮುಂತಾದವರು ಪಾಲ್ಗೊಂಡಿದ್ದರು.