ಬಕ್ರೀದ್‍ನಲ್ಲಿ ಗೋಹತ್ಯೆ ತಡೆಗೆ ಆಗ್ರಹಿಸಿ ಪೋಲಿಸ್ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ

ಕಲಬುರಗಿ,ಜೂ.26: ಬಕ್ರೀದ್ ಹಿನ್ನೆಲೆಯಲ್ಲಿ ಗೋಹತ್ಯೆ ನಿಷೇಧಿಸುವಂತೆ ಒತ್ತಾಯಿಸಿ ಹಾಗೂ ಚೆಕ್ ಪೋಸ್ಟ್‍ಗಳನ್ನು ಹಾಕುವಂತೆ ಆಗ್ರಹಿಸಿ ಸೋಮವಾರ ನಗರ ಪೋಲಿಸ್ ಆಯುಕ್ತರ ಕಚೇರಿ ಮುಂದೆ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಪ್ರತಿಭಟನಾ ಪ್ರದರ್ಶನ ಮಾಡಿದರು.

ಪ್ರತಿಭಟನೆಕಾರರು ನಂತರ ನಗರ ಪೋಲಿಸ್ ಉಪ ಆಯುಕ್ತ ಅಡ್ಡೂರು ಶ್ರೀನಿವಾಸಲು ಅವರಿಗೆ ಮನವಿ ಪತ್ರ ಸಲ್ಲಿಸಿ, ಇದೇ ಜೂನ್ 29ರಂದು ಬಕ್ರೀದ್ ಹಬ್ಬದ ಆಚರಣೆ ಇದೆ. ಆ ಸಂದರ್ಭದಲ್ಲಿ ನಗರ ಹಾಗೂ ಜಿಲ್ಲೆಯ ವ್ಯಾಪ್ತಿಯಲ್ಲಿ ಸಾರ್ವಜನಿಕವಾಗಿ ಮತ್ತು ಸಾಮೂಹಿಕವಾಗಿ, ಸಾರ್ವಜನಿಕ ಸ್ಥಳಗಳಲ್ಲಿ ಗೋವುಗಳನ್ನು ಮತ್ತು ಪ್ರಾಣಿಗಳನ್ನು ಹತ್ಯೆ ಮಾಡುವುದು ಖಂಡನಾರ್ಹ ಎಂದು ಆಕ್ಷೇಪಿಸಿದರು.
ರಾಜ್ಯದಲ್ಲಿ ಸಂವಿಧಾನ ಮತ್ತು ಕಾನೂನು ಕುರಿತಾಗಿ ಪದೇ ಪದೇ ಹೇಳಿಕೆ ಕೊಡುವ ಸರ್ಕಾರವು, ರಾಜ್ಯದಲ್ಲಿ ಇನ್ನೂ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣ ಅಧಿನಿಯಮ 2020 ಕಾಯ್ದೆ ಜಾರಿಯಲ್ಲಿದೆ. ಇದಲ್ಲದೇ ಉಚ್ಛ ನ್ಯಾಯಾಲಯದ ಆದೇಶದಂತೆ ಕರ್ನಾಟಕ ಜಾನುವಾರು ಸಾಗಾಟ ಅಧಿನಿಯಮ-1ರಿಂದ 5 ಸಹ ಜಾರಿಯಲ್ಲಿದೆ ಎಂದು ಅವರು ಹೇಳಿದರು.
ವಿಶೇಷವಾಗಿ ಬಕ್ರೀದ್ ಕುರಿತಾಗಿ ಸರ್ವೋಚ್ಛ ನ್ಯಾಯಾಲಯ ಹಾಗೂ ನ್ಯಾಯಾಂಗ ನಿಂದನೆ ಆಗದಂತೆ ಸರ್ಕಾರವು ಎಚ್ಚರಿಕೆ ವಹಿಸಬೇಕು. ಪ್ರಾಣಿಗಳ ರಕ್ಷಣೆಗಾಗಿ ಇರುವ ಐಪಿಸಿ 448, 429, 153ಎ ಮತ್ತು 298, ಮೋಟಾರು ವಾಹನ ಕಾಯ್ದೆ 1988 ಅಧೀನ ಕಾಯ್ದೆ 125ಇ, ಕರ್ನಾಟಕ ಪ್ರಾಣಿ ಬಲಿ ತಡೆ ಕಾಯ್ದೆ-1959, ಕರ್ನಾಟಕ ಎಪಿಎಂಸಿ (ನಿಯಂತ್ರಣ) ಕಾಯ್ದೆ 1966, ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ ಕಾಯ್ದೆ 1976, ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ 1960 ಮತ್ತು ಕಾಲಕಾಲಕ್ಕೆ ರಚಿಸಲ್ಪಟ್ಟ ಸಂವಿಧಾನ ಅನುಚ್ಛೇಧ 48ರ ಅಡಿಯಲ್ಲಿನ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಕಾನೂನು ಮತ್ತು ನಿಯಮಗಳನ್ನು ಪಾಲನೆ ಮಾಡುವುದು ಜಿಲ್ಲಾಡಳಿತ ಮತ್ತು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಆದಾಗ್ಯೂ, ನಗರ ಪೋಲಿಸರು ದೇಶದ ಸಂವಿಧಾನ ಮತ್ತು ಕಾನೂನುಗಳನ್ನು ಗೌರವಿಸುವ ಆದ್ಯ ಕರ್ತವ್ಯವಾಗಿದ್ದರೂ ಸಹ ಅಕ್ರಮ ಗೋಸಾಗಣೆ, ಗೋ ವಧೆ ತಡೆಯುವಲ್ಲಿ ವಿಫಲವಾಗಿದ್ದಾರೆ. ಇಂತಹ ನಿರ್ಲಕ್ಷ್ಯ ಧೋರಣೆ ಖೇದಕರ ಸಂಗತಿ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕೇವಲ ಹೆಸರಿಗೆ ಮಾತ್ರ ಗೋಹತ್ಯೆ ತಡೆಯಲು ಎರಡು ಕಡೆಗಳಲ್ಲಿ ಮಾತ್ರ ಚೆಕ್ ಪೋಸ್ಟ್ ಹಾಕಲಾಗಿದೆ. ಇನ್ನೂ ಹಲವೆಡೆ ಆಯಕಟ್ಟಿನ ಸ್ಥಳಗಳಲ್ಲಿ ಚೆಕ್ ಪೋಸ್ಟ್‍ಗಳನ್ನು ಸ್ಥಾಪಿಸಬೇಕು ಎಂದು ಅವರು ಒತ್ತಾಯಿಸಿದರು. ಪ್ರತಿಭಟನೆಕಾರರು ಈ ಮೊದಲು ನಗರದ ಜಗತ್ ವೃತ್ತದಿಂದ ಮೆರವಣಿಗೆ ಮೂಲಕ ಪೋಲಿಸ್ ಆಯುಕ್ತರ ಕಚೇರಿಗೆ ಆಗಮಿಸಿ ಪ್ರತಿಭಟನೆ ಮಾಡಿದರು.
ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ನಾಗೇಂದ್ರ ಕಬಾಡೆ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅಂಬರೀಶ್ ಸೂಲೆಗಾಂವ್, ಗುರುಶಾಂತ್ ಟೆಂಗಳಿ, ಸತೀಶ್ ಮಾಹೂರ್, ಶ್ರೀಶೈಲ್ ಮೂಲಗೆ ಮುಂತಾದವರು ಪಾಲ್ಗೊಂಡಿದ್ದರು.