
ವಾಷಿಂಗ್ಟನ್, ಸೆ.೧೯- ಇರಾನ್‌ನಲ್ಲಿ ಹಲವು ವರ್ಷಗಳ ಕಾಲ ಸೆರೆವಾಸದಲ್ಲಿದ್ದ ಐವರು ಅಮೆರಿಕನ್ನರಿಗೆ ಇದೀಗ ಕೊನೆಗೂ ಬಿಡುಗಡೆ ಭಾಗ್ಯ ಲಭಿಸಿದೆ. ಕತಾರ್ ಮಧ್ಯಸ್ಥಿಕೆಯಲ್ಲಿ ಈ ಒಪ್ಪಂದ ನಡೆದಿದ್ದು, ಅಲ್ಲದೆ ಇರಾನ್‌ಗೆ ತಲುಪಬೇಕಿದ್ದ ಸುಮಾರು ೬ ಶತಕೋಟಿ ಡಾಲರ್ ಮೊತ್ತವನ್ನು ಇದೀಗ ಅಮೆರಿಕಾ ಬಿಡುಗಡೆ ಮಾಡಿದೆ. ಬಿಡುಗಡೆಯ ಬಗ್ಗೆ ಸ್ವತಃ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ಪ್ರತಿಕ್ರಿಯೆ ನೀಡಿ, ಸಂತಸ ವ್ಯಕ್ತಪಡಿಸಿದ್ದಾರೆ.
ಬಿಡುಗಡೆ ಮಾಡಲಾದವರಲ್ಲಿ ಇರಾನ್‌ನ ತೆಹ್ರಾನ್‌ನ ಕುಖ್ಯಾತ ಎವಿನ್ ಜೈಲಿನಲ್ಲಿ ಸಿಮಾಮಕ್ ನಮಾಜಿ (೫೧), ಉದ್ಯಮಿ ಎಮದ್ ಶಾರ್ಗಿ (೫೯), ಪರಿಸರವಾದಿ ಮೊರಾಡ್ ತಹಬಾಜ್ (೬೭) ಮುಂತಾದವರು ಬ್ರಿಟಿಷ್ ರಾಷ್ಟ್ರೀಯತೆಯನ್ನು ಹೊಂದಿದ್ದಾರೆ. ಅತ್ತ ಅಮೆರಿಕಾದ ನಿರ್ಬಂಧಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಅಮೆರಿಕಾದ ಜೈಲಿನಲ್ಲಿ ಬಂಧಿತರಾಗಿರುವ ಐವರು ಇರಾನಿಯನ್ನರಿಗೆ ಈ ವಿನಿಮಯದ ಭಾಗವಾಗಿ ಕ್ಷಮಾದಾನ ನೀಡಲಾಗುತ್ತಿದೆ. ಆದರೆ ಅವರೆಲ್ಲರೂ ಇರಾನ್‌ಗೆ ಹಿಂದಿರುಗುವ ನಿರೀಕ್ಷೆಯಿಲ್ಲ ಎನ್ನಲಾಗಿದೆ. ಇವರನ್ನು ರೆಜಾ ಸರ್ಹಂಗ್‌ಪುರ್, ಕಂಬಿಜ್ ಅತ್ತರ್ ಕಶಾನಿ, ಕವೆಹ್ ಲೋಟ್‌ಫೊಲಾಹ್ ಅಫ್ರಾಸಿಯಾಬಿ, ಮೆಹರ್ದಾದ್ ಮೊಯಿನ್ ಅನ್ಸಾರಿ ಮತ್ತು ಅಮೀನ್ ಹಸಂಜಾದೆ ಎಂದು ಹೆಸರಿಸಲಾಗಿದೆ. ಇನ್ನು
ಇರಾನ್ ಮೂಲದ ನಾಲ್ವರು ಪುರುಷರು ಹಾಗೂ ಓರ್ವ ಮಹಿಳೆ ಚಾರ್ಟಡ್ ವಿಮಾನದ ಮೂಲಕ ಕತಾರ್‌ನ ರಾಜಧಾನಿಗೆ ಆಗಮಿಸಿದ್ದಾರೆ. ಸದ್ಯ ಐವರನ್ನು ಅಮೆರಿಕಾ ಉನ್ನತ ರಾಜತಾಂತ್ರಿಕ ಅಧಿಕಾರಿಯೊಬ್ಬರು ಭೇಟಿ ಮಾಡಿದ್ದು, ಅಲ್ಲಿಂದ ನೇರವಾಗಿ ವಾಷಿಂಗ್ಟನ್‌ಗೆ ತೆರಳುತ್ತಿದ್ದಾರೆ ಎನ್ನಲಾಗಿದೆ.
ಅತ್ತ ದಕ್ಷಿಣ ಕೊರಿಯಾದಲ್ಲಿ ತಡೆಹಿಡಿಯಲಾಗಿದ್ದ ಇರಾನ್‌ನ ೬ ಶತಕೋಟಿ ಡಾಲರ್ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ. ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಬೈಡೆನ್, ಇಂದು ಐವರು ಅಮಾಯಕ ಅಮೆರಿಕನ್ನರು ಕೊನೆಗೂ ಮನೆಗೆ ಮರಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.