ಬಂಧಿತ ರೈತರ ಕರೆ ತರಲು ಕ್ರಮ

ಬೆಂಗಳೂರು, ಫೆ. ೧೪- ದೆಹಲಿಯಲ್ಲಿ ನಡೆದಿರುವ ರೈತರ ಹೋರಾಟಕ್ಕೆ ರಾಜ್ಯದಿಂದ ತೆರಳುತ್ತಿದ್ದ ರೈತರನ್ನು ಮಧ್ಯಪ್ರದೇಶ ಸರ್ಕಾರ ಬಂಧಿಸಿದ್ದು ಅವರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ವಿಧಾನಸಭೆಯಲ್ಲಿಂದು ಹೇಳಿದರು.
ಶೂನ್ಯ ವೇಳೆಯಲ್ಲಿ ರೈತ ಸಂಘದ ದರ್ಶನ್ ಪುಟ್ಟಣ್ಣಯ್ಯ ಅವರ ಪ್ರಸ್ತಾಪಕ್ಕೆ ಸರ್ಕಾರದ ಪರವಾಗಿ ಉತ್ತರಿಸಿದ ಅವರು, ಮಧ್ಯ ಪ್ರದೇಶದಲ್ಲಿ ಬಂಧನಕ್ಕೆ ಒಳಗಾಗಿರುವ ರೈತರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲು ಏನೆಲ್ಲಾ ಕ್ರಮ ಕೈಗೊಳ್ಳಪಬೇಕು ಆ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತದೆ ಎಂದು ಭರವಸೆ ನೀಡಿದರು.
ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ್ದ ದರ್ಶನ್ ಪುಟ್ಟಣ್ಣಯ್ಯ ಅವರು, ದೆಹಲಿಯಲ್ಲಿ ತಮ್ಮ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ದೇಶದ ರೈತರು ಒಗ್ಗೂಡಿ ನಡೆಸಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ರಾಜ್ಯದ ೭೦ ರೈತರು ರೈಲಿನ ಮೂಲಕ ಪ್ರಯಾಣಿಸುತ್ತಿದ್ದರು. ಕಳೆದ ಸೋಮವಾರ ಮಧ್ಯಪ್ರದೇಶದ ಭೂಪಾಲ್‌ನಲ್ಲಿ ನಮ್ಮ ರಾಜ್ಯದ ರೈತರನ್ನು ಬಂಧಿಸಲಾಗಿದೆ. ಈಗ ಅವರನ್ನು ಉಜ್ಜಯಿನಿಗೆ ವರ್ಗಾಯಿಸಲಾಗಿದೆ ಎಂಬ ಮಾಹಿತಿ ಬಂದಿದೆ. ರೈತರ ಬಂಧನ ಖಂಡನಾರ್ಹ. ಬಂಧಿಸಿರುವ ರೈತರನ್ನು ಸುರಕ್ಷಿತವಾಗಿ ಕರೆತರಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ದ್ವನಿಗೂಡಿಸಿ ಮಾತನಾಡಿದ ಸಭಾಧ್ಯಕ್ಷ ಯು.ಟಿ. ಖಾದರ್, ರಾಜ್ಯದ ರೈತರನ್ನು ಮಧ್ಯಪ್ರದೇಶದಲ್ಲಿ ಬಂಧಿಸಲಾಗಿದೆ. ರಾಜ್ಯ ಸರ್ಕಾರ ಕೂಡಲೇ ಮಧ್ಯಪ್ರದೇಶ ಸರ್ಕಾರದ ಜತೆ ಮಾತನಾಡಿ ರೈತರನ್ನು ಬಿಡುಗಡೆಗೊಳಿಸಿ ರಾಜ್ಯಕ್ಕೆ ಕರೆತರಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.