ಬಂಧಿತ ಕರವೇ ಕಾರ್ಯಕರ್ತರ ಬಿಡುಗಡೆಗೆ ಸ್ಥಳೀಯ ಶಾಸಕರಿಗೆ ಮನವಿ, ಸಿಎಂಗೆ ಒತ್ತಾಯ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜ.2 :- ಆಂಗ್ಲ ಭಾಷೆಯ ನಾಮಫಲಕ ತೆರವುಗೊಳಿಸಿ ಎಂದು ಪ್ರತಿಭಟಿಸಿದ ಕನ್ನಡ ನಾಡು, ಭಾಷೆ ಉಳಿವಿಗಾಗಿ ಹಗಲಿರುಳು ಶ್ರಮಿಸುವ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯ ರಾಜ್ಯಾಧ್ಯಕ್ಷ ನಾರಾಯಣ ಗೌಡ ಹಾಗೂ ಇತರೆ  ಕಾರ್ಯಕರ್ತರನ್ನು ಬಂಧಿಸಿರುವುದನ್ನು ಖಂಡಿಸಿ ರಾಜ್ಯದಲ್ಲಿ ಕರವೇ ಕಾರ್ಯಕರ್ತರಿಂದ ಆಯಾ ಸ್ಥಳೀಯ ಶಾಸಕರ ಮೂಲಕ ಮನವಿ ಸಲ್ಲಿಸಿ ಸಿಎಂರನ್ನು ಬಂಧಿತರ ಬಿಡುಗಡೆಗೆ ಒತ್ತಾಯಿಸಿದ್ದಾರೆ.
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಹೀಗಾಗಿ, ಕನ್ನಡ ನಾಮಫಲಕಗಳನ್ನು ಹಾಕುವಂತೆ ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಸೇರಿ ಇತರೆ ಕಾರ್ಯಕರ್ತರ ಬಂಧನ ಖಂಡನೀಯವಾಗಿದ್ದು, ಬಂಧಿತರನ್ನು ಶೀಘ್ರವೇ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಕೂಡ್ಲಿಗಿ  ಕರವೇ ಕಾರ್ಯಕರ್ತರು ಸೋಮವಾರ ಮನವಿ ಸಲ್ಲಿಸಿದರು.
ಕೂಡ್ಲಿಗಿ ಕರವೇ ತಾಲೂಕು ಅಧ್ಯಕ್ಷ ಕಾಟೇರ್ ಹಾಲೇಶ್ ಮಾತನಾಡಿ, ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಂಪನಿ, ಮಳಿಗೆ, ವ್ಯಾಪಾರ ಕೇಂದ್ರಗಳ ಬಳಿ ಕನ್ನಡ ನಾಮಫಲಕಗಳನ್ನು ಅಳವಡಿಸುವಂತೆ ಒತ್ತಾಯಿಸಿ, ಆಂಗ್ಲ ಭಾಷೆಯ ನಾಮಫಲಕ ತೆರವು ಮಾಡಲು ಮುಂದಾದ ಕರವೇ ರಾಜ್ಯಾಧ್ಯಕ್ಷರು ಸೇರಿ ಕಾರ್ಯಕರ್ತರನ್ನು ಬಂಧಿಸಿದ್ದು ಸರಿಯಾದ ಕ್ರಮವಲ್ಲ. ಕನ್ನಡವೇ ಉಸಿರು ಎಂದು ಹೋರಾಡುವ ಟಿ.ಎ.ನಾರಾಯಣಗೌಡ ಸೇರಿ ಎಲ್ಲಾ ಕಾರ್ಯಕರ್ತರನ್ನು ಶೀಘ್ರವೇ ಬಿಡುಗಡೆ ಮಾಡಬೇಕು. ಇಲ್ಲವಾದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು. ಈ ಕುರಿತು ಸಿಎಂ ಅವರಿಗೆ ಒತ್ತಡ ಹಾಕುವಂತೆ ಶಾಸಕರಿಗೆ ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮಾತನಾಡಿ, ಈ ಕುರಿತು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಬಳಿ ಚರ್ಚಿಸುತ್ತೇನೆ. ಕನ್ನಡಪರ ಹೋರಾಟಗಾರರ ಬಿಡುಗಡೆ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರವೇ ತಾಲೂಕು ಪ್ರಧಾನ ಕಾರ್ಯದರ್ಶಿ ಸಾಲುಮನೆ ರಾಘವೇಂದ್ರ, ಯುವ ಘಟಕದ ಅಧ್ಯಕ್ಷ ಎಂ.ಓಬಳೇಶ್, ಗುಡೇಕೋಟೆ ಶಿವಕುಮಾರ್, ಕಾಶೀನಾಥ, ಅಜ್ಜಯ್ಯ, ಜಿ.ರಾಜು, ಗೌಡ್ರು ಶರಣಪ್ಪ, ಕೆ.ನಾಗರಾಜ ಸೇರಿ ಇತರರಿದ್ದರು.