ಬಂಧನ: ಖಂಡನೆ

ಗುಳೇದಗುಡ್ಡ ಆ.7- ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲೆಯ ಗುಳೇದಗುಡ್ಡ ಮಹಾಲಿಂಗಪೂರ, ರಬಕವಿ, ಬನ್ನಹಟ್ಟಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ನೇಕಾರರ ಸಮುದಾಯದವರು ಬೆಂಗಳೂರಿನಲ್ಲಿ ಸರ್ಕಾರದ ವಿರುದ್ಧ ಪ್ರತಿಭಟಿಸುವ ಸಂದರ್ಭದಲ್ಲಿ ವಿನಾಕಾರಣ ನೇಕಾರರನ್ನು ಬಂಧಿಸಿರುವ ಕ್ರಮವನ್ನು ಖಂಡಿಸುತ್ತೇನೆ ಎಂದು ಪಟ್ಟಣದ ಮಾಜಿ ಶಾಸಕ ರಾಜಶೇಖರ ಶೀಲವಂತ ಖಾರವಾಗಿ ಹೇಳಿದ್ದಾರೆ.
ಅವರು ಈ ಕುರಿತು ಮಾತನಾಡಿ, ನೇಕಾರರು ತಮ್ಮ ಬೇಡಿಕೆಗಳಿಗೆ ಸರ್ಕಾರದ ವಿರುದ್ದ ದಿಕ್ಕಾರ ಕೂಗುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಅಲ್ಲದೇ ಸರ್ಕಾರದ ವಿದ್ಯುತ್ ದರ ಏರಿಕೆಯಿಂದ ನೇಕಾರರು ಸಂಕಷ್ಟಕ್ಕಿಡಾಗಿದ್ದಾರೆ. ಅವರಿಗೆ ಈ ಮೊದಲು ನೀಡುತ್ತಿದ್ದ ಸಹಾಯಧನ ಮರಳಿ ನೀಡಬೇಕು. ನೇಕಾರರನ್ನು ಕೂಲಿ ಕಾರ್ಮಿಕರೆಂದು ಪರಿಗಣಿಸಬೇಕು. ಈ ಹಿಂದೆ ಬಿಜೆಪಿ ಸರ್ಕಾರ ನೇಕಾರರ ಮಕ್ಕಳಿಗೆ ನೀಡುತ್ತಿದ್ದ ಸಹಾಯಧನ ಹಾಗೂ ನೇಕಾರ ಸಮ್ಮಾನ್ ಯೋಜನೆಗಳನ್ನು ಮುಂದುವರೆಸಬೇಕು. ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‍ಗಳಲ್ಲಿನ ನೇಕಾರರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಸಾಲದ ಹೊರೆಯಿಂದ ಆತ್ಮಹತ್ಯೆ ಮಾಡಿಕೊಂಡ 42ಕ್ಕೂ ಹೆಚ್ಚು ನೇಕಾರರಿಗೆ ಸರ್ಕಾರ ಸಹಾಯ ಹಸ್ತ ನೀಡಬೇಕು. ಈ ರೀತಿಯ ಬೇಡಿಕೆಗಳನ್ನು ಮುಂದಿಟ್ಟು ಹೋರಾಟ ಮಾಡುವ ನೇಕಾರರಿಗೆ ಸರ್ಕಾರಕ್ಕೆ ಪ್ರಶ್ನಿಸುವ ಹಕ್ಕು ಇಲ್ಲವೇ ಎಂದರು.