ಬಂದ ಸಿದ್ದ ಹೋದ ಸಿದ್ದ ಗ್ರಾಮ ವಾಸ್ತವ್ಯ ಅಲ್ಲ: ಅಶೋಕ್

ಹುಬ್ಬಳ್ಳಿ, ಮಾ 20- ಬಂದ ಸಿದ್ಧ ಹೋದ ಸಿದ್ಧ ಎನ್ನುವ ಗ್ರಾಮ ವಾಸ್ತವ್ಯ ಅಲ್ಲ. ಒಂದು ದಿನ ಸಂಪೂರ್ಣವಾಗಿ ಈ ಗ್ರಾಮಸ್ಥರೊಂದಿಗೆ ಕಳೆದು ಅವರ ದುಃಖ ದುಮ್ಮಾನಗಳನ್ನು ಆಲಿಸಲಿದ್ದೇನೆ ಎಂದು ಕಂದಾಯ ಸಚಿವ ಆರ್.‌ಆಶೋಕ್ ತಿಳಿಸಿದ್ದಾರೆ.
ಛಬ್ಬಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಇಂದು ಮಾತನಾಡಿದ ಅವರು, ಗ್ರಾಮೀಣ ಜನರ ಸಂಕಷ್ಟಕ್ಕೆ ಸ್ಪಂದಿಸಲು ಗ್ರಾಮ ವಾಸ್ತವ್ಯ ಕೈಗೊಂಡಿದ್ದೇನೆ. ಜನ ಅಧಿಕಾರಿಗಳ ಬಳಿ ಬರುವ ಪರಿಪಾಠ ಹೋಗಲಾಡಿಸಬೇಕಿದೆ. ಜನರ ಬಳಿಗೆ ಹೋಗಿ ಕೈ ಕಟ್ಟಿ ನಿಂತು ಅಧಿಕಾರಿಗಳು ಕೆಲಸ ಮಾಡಿಕೊಡಲು ಈ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕೊರೋನಾ ಸೊಂಕು ಹೆಚ್ಚಾಗಿರಬಹುದು. ಹಾಗೆಂದು ಗ್ರಾಮ ವಾಸ್ತವ್ಯ ವನ್ನು ಮೊಟಕುಗೊಳಿಸಲು ಆಗೋದಿಲ್ಲ.ಮುಖ್ಯಮಂತ್ರಿಗಳೇ ಈಗಾಗಲೇ ಹೇಳಿದ್ದಾರೆ. ಕೊರೋನಾ ಜೊತೆ ಜೊತೆಯಲ್ಲಿ ನಾವು ಬದುಕುವುದನ್ನು ರೂಢಿಸಿಕೊಳ್ಳಬೇಕಿದೆ. ಆದಷ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಂಡು ಗ್ರಾಮ ವಾಸ್ತವ್ಯ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಮೊದಲನೇ ಗ್ರಾಮ ವಾಸ್ತವ್ಯ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಾಡಿದ್ದೆ. ಎರಡನೆ ಗ್ರಾಮ ವಾಸ್ತವ್ಯವನ್ನು ಮುಂಬೈ ಕರ್ನಾಟಕದಲ್ಲಿ ಮಾಡುತ್ತಿದ್ದೇನೆ. ಮುಂದಿನ ಗ್ರಾಮ ವಾಸ್ತವ್ಯ ಹೈದ್ರಾಬಾದ್ ಕರ್ನಾಟಕದ ಯಾದಗಿರಿ ಜಿಲ್ಲೆಯಲ್ಲಿ ಹಮ್ಮಿಕೊಳ್ಳುವುದಾಗಿ ಸಚಿವ ಅಶೋಕ್ ಹೇಳಿದರು.