ಬಂದ್ ಕಟ್ಟೆಚರ ವಹಿಸಲು ಪಂತ್‌ಸೂಚನೆ

ಬೆಂಗಳೂರು,ಸೆ.೨೫- ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಸೆ.೨೭ರಂದು ಕರೆ ನೀಡಿರುವ ಭಾರತ್ ಬಂದ್ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿ ಸುವ್ಯವಸ್ಥೆಗೆ ತೊಂದರೆಯಾಗದಂತೆ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಎಲ್ಲಾ ಡಿಸಿಪಿಗಳಿಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಸೂಚಿಸಿದ್ದಾರೆ.
ಬಂದ್ ವೇಳೆ ನಗರಕ್ಕೆ ಹೊರಗಿನಿಂದ ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಸೂಕ್ತ ಭದ್ರತೆ ಕೈಗೊಂಡು ಯಾವುದೇ ರೀತಿ ಗೊಂದಲಗಳು, ಗಲಾಟೆಗಳಿಗೆ ಅವಕಾಶ ಕೊಡದೇ ಗಸ್ತು ಹೆಚ್ಚಿಸಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ ಭದ್ರತೆಯ ಮೇಲೆ ಹದ್ದಿನ ಕಣ್ಣಿಡುವಂತೆ ಅವರು ಡಿಸಿಪಿಗಳಿಗೆ ಸೂಚನೆ ನೀಡಿದ್ದಾರೆ.
ಬಂದ್ ಹಿನ್ನೆಲೆಯಲ್ಲಿ ರೈತಪರ ಪರ ಸಂಘಟನೆ ಸೇರಿದಂತೆ ಯಾವುದೇ ಸಂಘ- ಸಂಸ್ಥೆಗಳು ಪ್ರತಿಭಟನೆ ನಡೆಸಲು ಅನುಮತಿ ಕೇಳಿಲ್ಲ. ಒಂದು ವೇಳೆ ಅರ್ಜಿ ಬಂದರೂ ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ತರಗುಪೇಟೆಯ ಪಟಾಕಿ ಗೋದಾಮಿನಲ್ಲಿ ಸ್ಫೋಟ ಪ್ರಕರಣ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯ ಎಲ್ಲ ಪಟಾಕಿ ಅಂಗಡಿಗಳು ಹಾಗೂ ಗೋದಾಮುಗಳಿಗೆ ಭೇಟಿ ನೀಡಿ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಡಿಸಿಪಿಗಳಿಗೆ ನಡೆಸಿದ ಸಭೆಯಲ್ಲಿ ಸೂಚಿಸಿದ್ದಾರೆ.
ಇದೇ ವೇಳೆ ಪಟಾಕಿ ಗೋದಾಮಿನಲ್ಲಿ ಎರಡು ದಿನಗಳ ಹಿಂದೆ ಸಂಭವಿಸಿದ್ದ ಸ್ಫೋಟದ ವಿಷಯ ಡಿಸಿಪಿಗಳ ಸಭೆಯಲ್ಲಿ ಪ್ರಸ್ತಾಪವಾಗಿದೆ. ಪ್ರತಿ ಠಾಣಾ ವ್ಯಾಪ್ತಿಯಲ್ಲಿರುವ ಪಟಾಕಿಗಳ ಅಂಗಡಿಗಳು ಹಾಗೂ ಗೋದಾಮುಗಳನ್ನು ಕೂಡಲೇ ತಪಾಸಣೆ ನಡೆಸಬೇಕು.
ಪಟಾಕಿ ವ್ಯಾಪಾರಿಗಳು ಸುರಕ್ಷತಾ ನಿಯಮಗಳು ಹಾಗೂ ಪರವಾನಿಗೆ ಪಡೆದಿರುವ ಬಗ್ಗೆ ಪರಿಶೀಲಿಸಬೇಕು. ಏನಾದರೂ ಕಾನೂನು ಬಾಹಿರವಾಗಿ ಗೋದಾಮು ತೆರೆದಿದ್ದರೆ ಕ್ರಮ ಜರುಗಿಸಬೇಕು ಎಂದು ಆಯುಕ್ತರು ಹೇಳಿದ್ದಾರೆ.
ಅಲ್ಲದೆ, ಪಟಾಕಿ ಗೋದಾಮುಗಳ ಪರಿಶೀಲನೆ ಬಳಿಕ ವರದಿಯನ್ನು ಕಚೇರಿಗೆ ಕಳುಹಿಸಬೇಕು. ಇನ್ನೊಂದು ವಾರದಲ್ಲಿ ಎಲ್ಲ ಪಟಾಕಿಗಳ ಅಂಗಡಿಗಳ ತಪಾಸಣೆ ಮುಗಿಯಬೇಕು. ಮುಂದೆ ನ್ಯೂ ತರಗುಪೇಟೆ ರೀತಿಯ ಘಟನೆ ಮರುಕಳಿಸಿದರೆ ಸಂಬಂಧಪಟ್ಟ ಅಧಿಕಾರಿಗಳು ಹೊಣೆ ಹೊರಬೇಕಾಗುತ್ತದೆ ಎಂದು ಸಭೆಯಲ್ಲಿ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.