ಬಂದ್ ಆದ ಬಂಕ್ ಗ್ರಾಹಕರ ಪರದಾಟ,  ಕೇಂದ್ರ ಮಂತ್ರಿಗೆ ದೂರು ಕೊಡಲು ಮುಂದಾದ ಸಾರ್ವಜನಿಕರು


ಸಂಜೆವಾಣಿ ವಾರ್ತೆ
ಕುಕನೂರು, ಜೂ.08:  ಕುಕನೂರು ಪಟ್ಟಣದ ಕೊಪ್ಪಳ ರಸ್ತೆಯಲ್ಲಿರುವ ಹೊಸಮನಿ ಪೆಟ್ರೋಲ್ ಬಂಕ್ ನ ಅಸಮರ್ಪಕ ನಿರ್ವಹಣೆಯಿಂದ ಗ್ರಾಹಕರು  ಪರದಾಡುವಂತಾಗಿದೆ.
ಕಳೆದ ಒಂದು ವಾರದಿಂದ ತಾಂತ್ರಿಕ ಕಾರಣ ದಿಂದ  ಹೊಸಮನಿ ಪೆಟ್ರೋಲ್ ಬಂಕ್ ಬಂದ್ ಆಗಿದ್ದು ಗ್ರಾಹಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಬಂಕ್ ಮಾಲೀಕರ ನಿಷ್ಕಾಳಜಿ, ಅಸಮರ್ಪಕ ನಿರ್ವಹಣೆಗೆ ಗ್ರಾಹಕರು ರೋಷಿ ಹೋಗಿದ್ದು ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮತ್ತು ಕೇಂದ್ರ ಪೆಟ್ರೋಲಿಯಂ ಸಚಿವರಿಗೆ ಪತ್ರ ಬರೆಯಲು ನಾಗರಿಕರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ತಾಲೂಕು ಕೇಂದ್ರವಾಗಿರುವ ಕುಕನೂರು ಪಟ್ಟಣ ವಾಣಿಜ್ಯ ಪಟ್ಟಣವಾಗಿ ಬೆಳೆಯುತ್ತಿದೆ, ಪಕ್ಕದ ಹತ್ತಾರು ಹಳ್ಳಿಗಳ ಗ್ರಾಹಕರು ಕುಕನೂರು ಪಟ್ಟಣಕ್ಕೆ ಪೆಟ್ರೋಲ್, ಡೀಸೆಲ್ ತುಂಬಿಸಿಕೊಳ್ಳಲು ಬರುತ್ತಾರೆ, ಕುಕನೂರು ಪಟ್ಟಣದಲ್ಲಿ ಸದ್ಯ ಎರಡು ಪೆಟ್ರೋಲ್ ಬಂಕ್ ಕಾರ್ಯ ನಿರ್ವಹಿಸುತ್ತಿವೆ, ಯಲಬುರ್ಗಾ ರಸ್ತೆಯಲ್ಲಿ, ಮತ್ತು ಕೊಪ್ಪಳ ರಸ್ತೆಯ ಬಂಕ್.
ಕೊಪ್ಪಳ ರಸ್ತೆಯಲ್ಲಿರುವ ಹೊಸಮನಿ ಪೆಟ್ರೋಲ್ ಬಂಕ್ ನಿಂದ ಗ್ರಾಹಕರಿಗೆ ಯಾವಾಗಲೂ ಕಿರಿಕಿರಿ ತಪ್ಪಿದ್ದಲ್ಲ, ಪಟ್ಟಣದ ಹೃದಯ ಭಾಗದಲ್ಲಿರುವುದರಿಂದ ಬಹುತೇಕ ಗ್ರಾಹಕರು ಪೆಟ್ರೋಲ್, ಡಿಸೇಲ್ ತುಂಬಿಸಿಕೊಳ್ಳಲು ಇಲ್ಲಿಗೇ ಬರುತ್ತಾರೆ, ಆದರೆ ಎರಡು ಮೂರು ತಿಂಗಳಿಗೆ ಒಂದು ಸಲವಾದರೂ ಬಂಕ್ ಕಾರ್ಯನಿರ್ವಹಿಸದೆ ವಾರಗಟ್ಟಲೆ ಬಂದ್ ಆಗಿರುತ್ತದೆ. ಅಲ್ಲದೇ ಸಿಬಂದಿಗಳ ಮಿತಿ ಇಲ್ಲದ ವರ್ತನೆಗೆ ಗ್ರಾಹಕರು ರೋಷಿ ಹೋಗುವಂತಾಗಿದೆ, ಆದರೂ ಕೂಡಾ ವಿಧಿ ಇಲ್ಲದೇ ಗ್ರಾಹಕರು ಪೆಟ್ರೋಲ್, ಡಿಸೇಲ್ ತುಂಬಿಸಿಕೊಂಡು ಹೋಗುತ್ತಾರೆ.
ಕಳೆದ ಮಳೆಗಾಲದಲ್ಲಿ ಹೆಚ್ಚು ಕಡಿಮೆ ಒಂದು ತಿಂಗಳು ಕಾಲ ಪೆಟ್ರೋಲ್ ಬಂಕ್ ಬಂದ್ ಆಗಿತ್ತು, ಬಂಕ್ ಇರುವುದು ಸಾರ್ವಜನಿಕರ ಅನುಕೂಲಕ್ಕಾಗಿಯೋ ಇಲ್ಲಾ ವ್ಯವಹಾರಕ್ಕಾಗಿಯೋ ಎಂದು ಸಾರ್ವಜನಿಕರು ಯೋಚಿಸುವಂತೆ ಮಾಡಿತ್ತು. ಕಳೆದ ಮೂರು ತಿಂಗಳ ಹಿಂದೆ ರಿಪೇರಿ ನೆಪ ದಲ್ಲೀ ಹಲವು ತಿಂಗಳು ಬಂದಾಗಿತ್ತು.
ಪೆಟ್ರೋಲ್ ಬಂಕ್ ನ ಅಸಮರ್ಪಕ ನಿರ್ವಹಣೆ ಬಗ್ಗೆ ಕೊಪ್ಪಳ ಜಿಲ್ಲಾಧಿಕಾರಿ ಮತ್ತು ಕೇಂದ್ರ ಮಂತ್ರಿಗಳಿಗೆ ಸಾರ್ವಜನಿಕರು ದೂರು ಕೊಡಲು ಮುಂದಾಗಿದ್ದು ಬಂಕ್ ಮಾಲಕರು, ವ್ಯವಸ್ಥಾಪಕರು ಕೂಡಲೇ ಎಚ್ಚತ್ತುಕೊಂಡು ಸಮಸ್ಯೆಯನ್ನು ಬಗೆ ಹರಿಸಬೇಕು ಇಲ್ಲವೇ ಇದರ ಲೈಸೆನ್ಸ ಅನ್ನು ರದ್ದು ಪಡಿಸಿ ಬೇರೆ ಯವರಿಗೆ ಷರತ್ತಿನ ಮೆರೆಗೆ ವಹಿಸಬೇಕೆಂದು ನೊಂದ ನೂರಾರು  ಗ್ರಾಹಕರ ಒತ್ತಾಸೆ ಆಗಿದೆ.