(ಸಂಜೆವಾಣಿ ವಾರ್ತೆ)
ವಿಜಯಪುರ:ಜು.28: “ಆಧ್ಯಾತ್ಮ ಇಲ್ಲದ ವಿದ್ಯೆ ರಾಮನಿಲ್ಲದ ಅಯೋಧ್ಯೆ; ಈ ನಿಟ್ಟಿನಲ್ಲಿ ಆಧ್ಯಾತ್ಮ ರಂಗದ ಯುಗಪುರುಷರಾದ ಶ್ರೀ ಸಂಗನ ಬಸವ ಶಿವಯೋಗಿಗಳ ಇಚ್ಛೆಯಂತೆ ಬೆಳೆದು ನಿಂತ ಸಂಗನ ಬಸವ ವಸತಿ ಶಾಲೆಯು ಮಕ್ಕಳ ಅಂತಃಚೇತನವನ್ನು ಜಾಗೃತಗೊಳಿಸಿ ಮೌಲಿಕ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ವಿಷಯ” ಎಂದು ಪರಮ ಪೂಜ್ಯ ಶ್ರೀ ಡಾ. ಶಿವಲಿಂಗ ಶರಣರು ಪುರಾಣಿಕಮಠ ರವರು ನುಡಿದರು. ಸಂಗನಬಸವ ವಸತಿ ಶಾಲೆ ಮತ್ತು ಎಸ್.ಆರ್.ಪಿ.ಯು ಆವರಣದಲ್ಲಿ ಜರಗಿದ ಸಂಗನಬಸವ ಸ್ವಾಮೀಜಿಯವರ 123 ನೆಯ ಜಯಂತ್ಯುತ್ಸವ & ವಿದ್ಯಾರ್ಥಿ ಪರಿಷತ್ತಿನ ಪದಗ್ರಹಣ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಅವರು ಮಾತನಾಡುತ್ತ ಅವರು “ಶಿಕ್ಷಕರಿಗೆ, ದೇವರಿಗೆ ಸಾವಿಲ್ಲ; ಜಾತಿಯನ್ನು ಮೀರಿ, ತಾನು ಕಲಿತು ವಿದ್ಯಾರ್ಥಿಗಳಿಗೆ ಕಲಿಸುವವರೇ ನಿಜವಾದ ಶಿಕ್ಷಕರು” ಎಂಬ ಶ್ರೀ ಸಂಗನ ಬಸವ ಸಾಮೀಜಿಯವರ ಮಾತನ್ನು ಸ್ಮರಿಸಿಕೊಳ್ಳುತ್ತ, ವಿಭೂತಿಪುರಷ ಶ್ರೀ ಸಂಗನಬಸವರ ಜೀವನದ ಬಹುಮುಖ್ಯ ಘಟನೆಗಳನ್ನು ಪವಾಡಗಳನ್ನು ನೆರೆದ ಜನರೆದುರು ಬಣ್ಣಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸೈನಿಕ ಶಾಲೆಯ ಉಪಪ್ರಾಂಶುಪಾಲರಾದ ಕಮಾಂಡರ್ ಸುರುಚಿ ಗೌರ್ ರವರು ವಿದ್ಯಾರ್ಥಿ ಪರಿಷತ್ತಿನ ಪದಗ್ರಹಣ ಸಮಾರಂಭವನ್ನು ನೆರವೇರಿಸಿಕೊಟ್ಟರು. “ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿಯೂ ಕ್ರಿಯಾಶೀಲವಾಗಿ ಪಾಲ್ಗೊಂಡಾಗಲೇ ಪಠ್ಯದಲ್ಲಿಯೂ ಸಹಜವಾಗಿ ಆಸಕ್ತಿ ಉಂಟಾಗುವುದು; ಎಂದು ಅಭಿಪ್ರಾಯ ವ್ಯಕ್ತಪಡಿಸಿದರಲ್ಲದೇ ಸಂಗನಬಸವ ಅಂತಾರಾಷ್ಟ್ರೀಯ ವಸತಿ ಶಾಲೆ ಮತ್ತು ಕಾಲೇಜಿನ ಶೈಕ್ಷಣಿಕ ಪ್ರಗತಿ ಮತ್ತು ಶಿಸ್ತಿನ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ ಶ್ರೀ ಬಸಯ್ಯ ಎಸ್. ಹಿರೇಮಠ, ಚೇರ್ಮನ್ನರು ಶ್ರೀ ಸಿದ್ಧೇಶ್ವರ ಸಂಸ್ಥೆ ಇವರು “ಸಂಗನಬಸವ ಶಿಕ್ಷಣ ಸಂಸ್ಥೆಗಳು ಸಮೂಹ ಹುಟ್ಟಿ ಬೆಳೆಯಲು ಪ್ರೇರಕ ಶಕ್ತಿಯಾಗಿದ್ದ ಶ್ರೀ ಬಂಥನಾಳ ಶಿವಯೋಗಿಗಳು, ಇಡೀ ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ದಿವ್ಯಪುರಷ; ಅವರು ಶಿಕ್ಷಣ ಕ್ಷೇತ್ರದಲ್ಲಿ ಧ್ರುವತಾರೆ ಇದ್ದಂತೆ” ಎಂದು ಅಭಿಪ್ರಾಯಪಟ್ಟರು. ಅಲ್ಲದೆ ಸಂಗನಬಸವ ಶಿಕ್ಷಣ ಸಂಸ್ಥೆಗಳ ಸ್ಥಾಪಕರಾದ ಶ್ರೀ ಬಸನಗೌಡ ಪಾಟೀಲ ಯತ್ನಾಳ್ ಇವರನ್ನು ಶ್ಲಾಘಿಸಿದರು. “ಸಂಗನಬಸವ ಶಿಕ್ಷಣ ಸಂಸ್ಥೆ ವರ್ಷದಿಂದ ವರ್ಷಕ್ಕೆ ಪ್ರಗತಿ ಸಾಧಿಸುತ್ತಿದ್ದು ಈ ವರ್ಷದಿಂದ ಪಿ.ಯು ಕಾಲೇಜಿನಲ್ಲಿ ರಾಜ್ಯದ ಹೆಮ್ಮೆಯ ಆಕಾಶ್ ಅಕಾಡೆಮಿಯ ಸಹಯೋಗದೊಂದಿಗೆ ನೀಟ್, ಸಿ.ಇ.ಟಿ., ಜೆ.ಇ.ಇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುವುದು” ಎಂದು ನುಡಿದರು. ಇದೇ ಸಂದರ್ಭದಲ್ಲಿ ಶಾಲೆಯ ನಿಯತಕಾಲಿಕೆ `ಎಸ್. ಐ. ಆರ್ ಎಸ್. ಬ್ಲೊಸಮ್’ ಅನ್ನು ಬಿಡುಗಡೆಗೊಳಿಸಲಾಯಿತು.
ಕಾಲೇಜಿನ ಉಪನ್ಯಾಸಕಿಯಾದ ಕುಮಾರಿ ಪೂಜಾ ಪಾಟೀಲ್, ಕುಮಾರಿ ಮೋಹಿ ಜೈನ್, ಕುಮಾರ ರೂಪೇಶ್ ಕಾಪ್ಸೆ, ಕುಮಾರ್ ವೆಂಕಟೇಶ್, ಹಾಗು ಕುಮಾರಿ ಪ್ರಜ್ಞಾ ಮೇತ್ರಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾಲೇಜಿನ ನಿರ್ದೇಶಕ ಪ್ರಾಂಶುಪಾಲರಾದ ಶ್ರೀ ಹೇಮಂತ ಕೃಷ್ಣ ಇವರು ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಶಾಲೆಯ ಪ್ರಾಚಾರ್ಯರಾದ ಶ್ರೀಮತಿ ಶರ್ಮಿಳಾ ಹೇಮಂತ್‍ರವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾಲೇಜಿನ ಉಪಪ್ರಾಚಾರ್ಯರಾದ ಶ್ರೀ ವೀರೇಶ್ ಪಿ. ಇವರು ವಂದನಾರ್ಪಣೆಗೈದರು. ಸಮಾರಂಭದ ಅಂಗವಾಗಿ ವಿದ್ಯಾರ್ಥಿಗಳಿಂದ ವಿವಿಧ ಪ್ರಕಾರದ ಮನೋರಂಜನಾ ಕಾರ್ಯಕ್ರಮಗಳು ಜರಗಿದವು.
ಈ ಸಮಾರಂಭದಲ್ಲಿ ಶ್ರೀ ಸಿದ್ದೇಶ್ವರ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಹಾಗೂ ಎಲ್ಲಾ ವಿದ್ಯಾರ್ಥಿಗಳ ಪಾಲಕರು, ಬೋಧಕ & ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ನೋಡಿ ಆನಂದಿಸಿ ಅಭಿನಂದಿಸಿದರು.