ಬಂಡೆಗೆ ಬೋಟ್ ಡಿಕ್ಕಿ: ಮೀನುಗಾರರ ರಕ್ಷಣೆ

ಉಡುಪಿ, ಆ.೨೫- ಮೀನುಗಾರಿಕಾ ಬೋಟೊಂದು ಸಮುದ್ರದ ಅಬ್ಬರದ ಅಲೆಗಳಿಗೆ ಸಿಲುಕಿ ಬಂಡೆಗೆ ಢಿಕ್ಕಿ ಹೊಡೆದು ನೀರಿನಲ್ಲಿ ಮುಳುಗಿರುವ ಘಟನೆ ನಡೆದಿದೆ.

ಉದ್ಯಾವರ ಮುದ್ದಲಗುಡ್ಡೆಯ ಗಿರೀಶ್ ಸುವರ್ಣ ಮಾಲಕತ್ವದ ಬಾಹು ಬಲಿ ಮೀನುಗಾರಿಕಾ ಬೋಟು, ನಿನ್ನೆ ನಸುಕಿನ ವೇಳೆ ಮಲ್ಪೆ ಬಂದರಿನಿಂದ ಏಳು ಮಂದಿ ಮೀನುಗಾರರೊಂದಿಗೆ ಸಮುದ್ರಕ್ಕೆ ತೆರಳಿತ್ತು. ಬಂದರಿನಿಂದ ಸುಮಾರು ಎರಡು ನಾಟಿಕಲ್ ದೂರದ ಸಮುದ್ರದಲ್ಲಿ ಅಲೆಗಳ ಅಬ್ಬರಕ್ಕೆ ಬೋಟು ನಿಯಂತ್ರಣ ತಪ್ಪಿ ಬಂಡೆಕಲ್ಲಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಬೋಟಿನ ತಳಭಾಗ ಜಖಂ ಆಗಿ ಬೋಟಿನ ಇಂಜಿನ್ ರೂಮ್ ಒಳಗೆ ನೀರು ತುಂಬಿ ಬೋಟು ಮುಳುಗಡೆ ಹಂತದಲ್ಲಿತ್ತು. ಕೂಡಲೇ ಸಮೀಪದಲ್ಲಿದ್ದ ಬೋಟಿನವರು ಬೋಟಿನಲ್ಲಿದ್ದ ಎಲ್ಲ ಮೀನುಗಾರರನ್ನು ರಕ್ಷಿಸಿ, ಬೋಟನ್ನು ಮೇಲಕ್ಕೆ ಎತ್ಕಲು ಪ್ರಯತ್ನಿಸಿದರು. ಆದರೆ ಬೋಟು ಸಂಪೂರ್ಣ ನೀರಿನಲ್ಲಿ ಮುಳುಗಿತ್ತೆನ್ನಲಾಗಿದೆ ಈ ಅವಘಡದಿಂದ ಬೋಟಿನಲ್ಲಿದ್ದ ಬಲೆ, ಮಂಜುಗಡ್ಡೆ, ಡಿಸೇಲ್ ಸೇರಿ ಒಟ್ಟು ೮೦ ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಮಾಲಕ ಗಿರೀಶ್ ಸುವರ್ಣ ಮಲ್ಪೆ ಕರಾವಳಿ ಕಾವಲು ಪಡೆಯ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.