ಬಂಡೀಪುರಕ್ಕೆ ಮತ್ತೊಂದು ಕಿರೀಟ: ಇಂಡಿಯಾ ಬುಕ್‍ಆಫ್ ರೆಕಾರ್ಡ್ ಗೌರವ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಮೇ.04- ಭಾರತದ ಜನಪ್ರಿಯ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾದ ಬಂಡೀಪುರಕ್ಕೆ ಮತ್ತೊಂದು ಗೌರವ ಸಂದಿದೆ.
ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಇಂಡಿಯಾ ಬುಕ್‍ಆಫ್ ರೆಕಾರ್ಡ್ ಗೌರವ ಸಲ್ಲಿಸಿದೆ. ಹೌದು, ವಿದ್ಯಾರ್ಥಿಗಳಿಗೆ ಕಾಡಿನ ಬಗ್ಗೆ ಅರಿವು, ಅರಣ್ಯದ ಬಗ್ಗೆ ಜಾಗೃತಿ, ಪರಿಸರರಕ್ಷಣೆಯ ಪ್ರಾಮುಖ್ಯತೆ ಬಗ್ಗೆ ತಿಳಿಸಿಕೊಡಲು ಆರಂಭಿಸಿದ್ದ ‘ಯುವಮಿತ್ರ’ ಕಾರ್ಯಕ್ರಮಕ್ಕೆ ಇಂಡಿಯಾ ಬುಕ್‍ಆಫ್ ರೆಕಾರ್ಡ್ ಗೌರವ ಸಲ್ಲಿಸಿದೆ. ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಮಂದಿ ಭಾಗಿಯಾಗಿದ್ದಾರೆ ಎಂದುಇಂಡಿಯಾ ಬುಕ್‍ಆಫ್ ರೆಕಾರ್ಡ್‍ನಲ್ಲಿ ದಾಖಲಾಗಿದ್ದು, ಪ್ರಶಸ್ತಿ ವಿತರಿಸಲಾಗಿದೆ.
ಬಂಡೀಪುರ ‘ಯುವಮಿತ್ರ’ ಕಾರ್ಯಕ್ರಮ ಜಾಗೃತಿಯಲ್ಲಿ 8,000 ಮಂದಿ ಭಾಗಿ: ಬಂಡೀಪುರಯುವ ಮಿತ್ರ ಜಾಗೃತಿ ಕಾರ್ಯಕ್ರಮದಲ್ಲಿ ಒಟ್ಟು 8,410 ಮಂದಿ ಭಾಗಿಯಾಗಿದ್ದಾರೆ. ಸಫಾರಿ ವೀಕ್ಷಿಸಿ, ಕಾನನದ ಬಗ್ಗೆ ಮಾಹಿತಿ ತಿಳಿದುಕೊಳ್ಳುವ ಜೊತೆಗೆ ಅರಣ್ಯ ಸಂರಕ್ಷಣೆಯ ಮಹತ್ವ ಅರಿತಿದ್ದಾರೆ. 8,410 ಮಂದಿಯಲ್ಲಿ 7,019 ವಿದ್ಯಾರ್ಥಿಗಳು, 655 ಶಿಕ್ಷಕರು, 197 ಗ್ರಾಮ ಪಂಚಾಯಿತಿ ಸಿಬ್ಬಂದಿ, ಸದಸ್ಯರು, 395 ಸ್ಥಳೀಯ ರೈತರು ಮತ್ತು 143 ಮಂದಿ ಗಿರಿಜನರಿದ್ದರು. 2023ರ ಮಾ.3ರಿಂದ 2024ರ ಮಾ.8 ರವರೆಗೆ ಒಟ್ಟು 162 ಜಾಗೃತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.
‘ಯುವಮಿತ್ರ’ಕ್ಕೆ ಇಂಡಿಯಾ ಬುಕ್‍ಆಫ್ ರೆಕಾರ್ಡ್ ಗೌರವ: 2023ರಲ್ಲಿ ಅಂದಿನ ಬಂಡೀಪುರ ಸಿಎಫ್‍ಓಆಗಿದ್ದ ಡಾ.ಪಿ.ರಮೇಶ್‍ಕುಮಾರ್ ಅವರಿಂದ ಬಂಡೀಪುರಯುವ ಮಿತ್ರ ಎಂಬ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತ್ತು. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸುವರ್ಣ ಮಹೋತ್ಸವದ ನಿಮಿತ್ತ ಈ ಕಾರ್ಯಕ್ರಮ ರೂಪಿಸಿ ವಿದ್ಯಾರ್ಥಿಗಳಿಗೆ ಉಚಿತ ಸಫಾರಿ ಮಾಡಿಸಿ ಪ್ರಕೃತಿ ಶಿಕ್ಷಣ ನೀಡುವ ಕಾರ್ಯಕ್ರಮ ಇದಾಗಿದೆ.