ಬಂಡೀಪುರಕ್ಕೆ ಗ್ರೀನ್ ಟ್ಯಾಕ್ಸ್‍ನಿಂದ 4.5 ಕೋಟಿ ಆದಾಯ!

ಸಂಜೆವಾಣಿ ವಾರ್ತೆ
ಚಾಮರಾಜನಗರ,ಫೆ.20:- ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯದಲ್ಲಿ ಗ್ರೀನ್ ಟ್ಯಾಕ್ಸ್ (ಹಸಿರು ತೆರಿಗೆ) ಮೂಲಕ ಕಳೆದ 10 ತಿಂಗಳಿಂದ 4.5 ಕೋಟಿ ಸಂಗ್ರಹವಾಗಿದೆ. ಇದರಿಂದ ಅರಣ್ಯ ಇಲಾಖೆಗೆ ಹೆಚ್ಚು ಆದಾಯ ದೊರಕಿದೆ.
ಕಳೆದ ಏಪ್ರಿಲ್‍ನಲ್ಲಿ ಗ್ರೀನ್ ಟ್ಯಾಕ್ಸ್ ಪ್ರಾರಂಭಿಸಿ ಬಂಡೀಪುರ ಅಭಯಾರಣ್ಯದ ಮೂಲಕ ತಮಿಳುನಾಡು ಹಾಗೂ ಕೇರಳಕ್ಕೆ ತೆರಳುವ ಕಾರು, ಲಾರಿ ಸೇರಿದಂತೆ ಎಲ್ಲಾ ವಾಹನಗಳ ಮೇಲೆ 20 ರೂ. ಟ್ಯಾಕ್ಸ್ ಸಂಗ್ರಹ ಆರಂಭಿಸಲಾಗಿತ್ತು. ಇದೀಗ ಹತ್ತು ತಿಂಗಳ ಅಂತರದಲ್ಲಿ ಗ್ರೀನ್ ಟ್ಯಾಕ್ಸ್‍ನಿಂದ 4.5 ಕೋಟಿರೂ ಸಂಗ್ರಹವಾಗಿದ್ದು ಭರಪೂರ ಆದಾಯವೇ ಬಂದಿದೆ.
ಕೆಕ್ಕನಹಳ್ಳ, ಮೇಲು ಕಾಮನಹಳ್ಳಿ, ಮದ್ದೂರು ಹಾಗೂ ಮೂಲಹೊಳೆ ಚೆಕ್ ಪೆÇೀಸ್ಟ್ ಮೂಲಕ ಸಂಚರಿಸುವ ವಾಹನಗಳಲ್ಲಿ ಗ್ರೀನ್‍ಟ್ಯಾಕ್ಸ್ ಸಂಗ್ರಹ ಮಾಡಲಾಗುತ್ತಿದೆ. ಜೊತೆಗೆ ಈ ಮಾರ್ಗದಲ್ಲಿ ಸಂಚರಿಸುವ ಪ್ರತಿಯೊಬ್ಬ ವಾಹನ ಸವಾರರಿಗೂ ಪರಿಸರದ ಜಾಗೃತಿ ಮತ್ತು ಪ್ಲಾಸ್ಟಿಕ್ ನಿμÉೀಧದ ಕುರಿತು ಅರಿವು ಮೂಡಿಸಲಾಗುತ್ತಿದೆ. ಕರ್ನಾಟಕದಿಂದ ಕೇರಳ ಹಾಗೂ ತಮಿಳುನಾಡಿಗೆ ಸಂಚರಿಸುವ ವಾಹನಗಳನ್ನು ತಪಾಸಣೆ ನಡೆಸಿ ಪ್ಲಾಸ್ಟಿಕ್ ವಸ್ತು ಹಾಗೂ ನೀರಿನ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಜೊತೆಗೆ ಅಭಯಾರಣ್ಯದ ಮಧ್ಯದಲ್ಲಿ ಪ್ರಾಣಿಗಳನ್ನು ಕಂಡಕೂಡಲೆ ವಾಹನ ನಿಲ್ಲಿಸದಂತೆ ತಿಳಿ ಹೇಳಲಾಗುತ್ತಿದೆ.
ಸ್ಥಳೀಯ ವಾಹನಗಳಿಗೆ ರಿಯಾಯಿತಿ: ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ ಸ್ಥಳೀಯ ನೋಂದಣಿ ವಾಹನಗಳಿಗೆ ರಿಯಾಯಿತಿ ನೀಡಲಾಗಿದ್ದು, ಹೊರಜಿಲ್ಲೆ ಹಾಗೂ ಅಂತರ ರಾಜ್ಯ ವಾಹನಗಳಿಂದ ಮಾತ್ರ ಸುಂಕ ವಸೂಲಿ ಮಾಡಲಾಗುತ್ತಿದೆ. ಇದು ಸ್ಥಳೀಯರ ಸಂಚಾರಕ್ಕೆ ಹೆಚ್ಚು ಅನುಕೂಲವಾಗಿದೆ.
ಗ್ರೀನ್‍ಟ್ಯಾಕ್ಸ್ ಮೂಲಕ ವಸೂಲಿ ಮಾಡುವ ಹಣವನ್ನು ಅರಣ್ಯ ಇಲಾಖೆಯ ಸುಮಾರು 500ಕ್ಕೂ ಹೆಚ್ಚು ಮುಂಚೂಣಿ ಸಿಬ್ಬಂದಿಗಳ ವೇತನಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಈ ಮೂಲಕ ರಾಜ್ಯ ಸರ್ಕಾರದಿಂದ ಸಿಬ್ಬಂದಿಯ ವೇತನಕ್ಕೆ ಕಾಯಬೇಕಾದ ಅವಶ್ಯಕತೆ ಇಲ್ಲ ಎಂದು ಸಿಎಫ್ ರಮೇಶ್‍ಕುಮಾರ್ ತಿಳಿಸಿದ್ದಾರೆ.