ಬಂಡಾಯ @ 44

ಕಲಬುರಗಿ:ಮಾ:12:ಇಂದು ನಗರದ ಕನ್ನಡ ಭವನದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ವತಿಯಿಂದ ಬಂಡಾಯ @ 44 ರ ಸಂಬ್ರಮದ ಪ್ರಯುಕ್ತ “ಬಂಡಾಯ ಸಾಹಿತ್ಯದ ಹಾದಿ” ವಿಚಾರಗೋಷ್ಠಿ ಮತ್ತು ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಂವಿಧಾನದ ಪೂರ್ವ ಪೀಠಿಕೆ ಓದುವ ಮೂಲಕ ಚಾಲನೆ ನೀಡಲಾಯಿತು. ಬಂಡಾಯ ಸಾಹಿತ್ಯ ಹಾದಿ ಕುರಿತು ವಿಚಾರ ಮಂಡಸಿದ ಡಾ. ಅರುಣ ಜೋಳದಕೂಡ್ಲಗಿ ಅವರು ಮಾತನಾಡುತ್ತ, ಜನ ವಿರೋಧಿ ಪ್ರಭುತ್ವವನ್ನು ವಿರೋಧಿಸಿ, ಜನರ ನೋವಿಗೆ ಮಿಡಿವ ಪ್ರಾಣಮಿತ್ರವಾಗಿ ಮಾತಾಡುವ ಸ್ವಾತಂತ್ರö್ಯ ಮತ್ತು ಮನುಷ್ಯನಿಗೆ ಬದುಕುವ ಹಕ್ಕಿದೆ ಎಂಬುದನ್ನು ಬಂಡಾಯ ಸಾಹಿತ್ಯ ಸಂಘಟನೆ ೧೯೭೯ ರಲ್ಲಿ ತನ್ನ ಸಾಹಿತ್ಯ ಚಳವಳಿಯ ಮೂಲಕ ಪ್ರಾರಂಭ ಮಾಡಿತು. ಬರಹ ಮತ್ತು ಭಾಷಣಗಳ ಮೂಲಕ ಪ್ರಜಾಪ್ರಭುತ್ವದಲ್ಲಿ ಪ್ರಶ್ನಸಲು ಕಲಿಸಿದ್ದು ಬಂಡಾಯ ಸಾಹಿತ್ಯ. ಹಕ್ಕೋತ್ತಾಯಕ್ಕಾಗಿ ಒಬ್ಬ ಸಾಹಿತಿ ಸಂದರ್ಭಕ್ಕೆ ತಕ್ಕಂತೆ ಪ್ರತಿಕ್ರಿಯಿಸಬೇಕು, ಸಮಾಜದ ಆಗುಹೋಗುಗಳಲ್ಲಿ ಜನರ ದನಿಯಾಗಿ ವಾಚಕರ ವಾಣಿಯಂತೆ ಸದಾ ಜನಸ್ಪಂದನೆಯಲ್ಲಿರಬೇಕು ಎಂಬುದು ಬಂಡಾಯ ನಡೆದು ಬಂದ ಹಾದಿ. ಇಡೀ ಬಂಡಾಯ ಸಾಹಿತ್ಯದಲ್ಲಿ ಬಾಬಾಸಾಹೇಬ ಡಾ. ಬಿ.ಆರ್. ಅಂಬೇಡ್ಕರ್ ಅವರು ಚಿಂತನೆಗಳು ಸದಾ ಮುಖಾಮುಖಿಯಾಗುತ್ತಲೇ ಇವೆ. ಪ್ರಸ್ತುತದಲ್ಲಿ ಸಮಕಾಲಿನ ಬಂಡಾಯ ಸಾಹಿತ್ಯದ ಕುರಿತು ಹೇಳುವುದಾರೆ ಪ್ರಧಾನವಾಗಿ ಈ ಹೊತ್ತು ನಾವು ನೋಡುವುದಾದರೆ ಇದು ಅನುವಾದಗಳ ಕಾಲ ಅನ್ನಬಹುದು, ಅತಿ ಹೆಚ್ಚು ಅನುವಾದ ಪುಸ್ತಕಗಳು ಬರುತ್ತಿವೆ ಮತ್ತು ಹೆಚ್ಚು ಮರುಮುದ್ರಣಗಳಾಗುತ್ತಿವೆ. ಕನ್ನಡ ಸಾಹಿತ್ಯದ ಒಳಗೆ ಅನುವಾದವಾದ ಪುಸ್ತಕಗಳ ಮೂಲಕ ಬಂಡಾಯವು ಪ್ರತಿರೋಧದ ಧ್ವನಿಯಾಗಿ ಬರುತ್ತಿದೆ ಎಂದು ಮಾತನಾಡಿದರು.

ವಿಚಾರ ಮಂಡಿಸಿದ ಇನ್ನೊರ್ವ ಅತಿಥಿಗಳಾದ ಕಿರಣ ಗಾಜನೂರ ಅವರು ಮಾತನಾಡುತ್ತ ಒಂದು ಕಡೆ ಜಾತ್ರೆ ನಡೆಯುತ್ತಿದೆ ಇನ್ನೊಂದು ಕಡೆ ಬಸವ ಉತ್ಸವ ನಡೆಯುತ್ತಿದೆ ಅದರ ಮಧ್ಯದಲ್ಲಿ ನಾವು ಬಂಡಾಯದ ಚರ್ಚೆ ಮಾಡುತ್ತಿದ್ದೇವೆ ನಿಜವಾಗಲೂ ಬಂಡಾಯ ೪೪ ವರ್ಷದ ಪಯಣ ಹೀಗೆ ನಡೆದುಬಂದಿದೆ. ಕೆ.ಬಿ ಸಿದ್ದಯ್ಯನವರು ಹೇಳಿದಂತೆ ಓ ಅಕ್ಷರವೇ ಕೊನೆಗೂ ನಾನು ನಿನ್ನನ್ನು ಮುಟ್ಟಿಬಿಟ್ಟೆ ಎನ್ನುವ ಮಾತು ಅಕ್ಷರ ವಂಚಿತ ಸಮುದಾಯವು ಬಂಡಾಯದ ದಾರಿಯಲ್ಲಿ ನಡೆದು ಬಂದ ದಾರಿ ತೋರಿಸುತ್ತದೆ ಎಂದು ಮಾತನಾಡಿದರು.

ಕಾರ್ಯಕ್ರಮದಲ್ಲಿ ಕವಿಗೋಷ್ಠಿಯ ಆಶಯವನ್ನು ಸಂಗನಗೌಡ ಹಿರೆಗೌಡ ಮಾತನಾಡಿದರು, ಜಯದೇವಿ ಗಾಯಕವಾಡ, ಬಸಣ್ಣ ಸಿಂಗೆ, ಅಧ್ಯಕ್ಷ ಸ್ಥಾನ ವಹಿಸಿಕೊಂಡು ಡಾ. ರಾಜಶೇಖರ ಮಾಂಗ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ರಾಹುಲ್ ಕಟ್ಟಿ, ಸಂಜು ಜಗ್ಲಿ, ಭುವನೇಶ್ವರಿ, ವಿಜಯಲಕ್ಷಿö್ಮ, ಪರ್ವಿನ್ ಸುಲ್ತಾನಾ, ಆನಂದ ಲಕ್ಕೂರ, ಪ್ರಮೋದ ಪಾಂಚಾಳ, ಭವಾನಿಪ್ರಸಾದ್, ರಮೇಶ ಗೋನಾಳ, ಹಣಮಂತರಾವ್ ಘಂಟೆಕರ್, ಕರಿಲಿಂಗ್ ನಾಟೇಕರ್, ಧರ್ಮಣ್ಣ ಧನ್ನಿ, ಮಲ್ಲಿನಾಥ ತಳವಾರ, ಮರೆಪ್ಪ ಮೇತ್ರಿ, ರಾಜೇಂದ್ರ ಝಳಕಿ, ಶಿವಯ್ಯ ಮಠಪತಿ, ಬಾಬು ಜಾದವ, ವಿಶ್ವನಾಥ ಭಕರೆ, ರಾಜಶೇಖರ ಗಡಿಗಣ, ಕವಿತಾ ಚಿಂಚೋಳಿ ಕವಿತೆಯನ್ನು ವಾಚನ ಮಾಡಿದರು.

ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಡಿ.ಎಮ್ ನದಾಫ್, ಡಾ.ಶ್ರೀಮಂತ ಹೊಳ್ಕರ್, ಕರಣಿಕ ವಾಡಿ, ದಿಲೀಪ್ ಸಾಗರ್, ಬಂಡಾಯ ಸಾಹಿತ್ಯ ಸಂಘಟನೆ ಸಂಚಾಲಕರಾದ ಅಶ್ವಿನಿ ಮದನಕರ್ ಇದ್ದರು.