ಬಂಡಾಯ ಸ್ಪರ್ಧೆಗೆ ಮೋದಿ-ಶಾಗೆ ಇಷ್ಟವಿರಬಹುದು

(ಸಂಜೆವಾಣಿ ಪ್ರತಿನಿಧಿಯಿಂದ)
ಶಿವಮೊಗ್ಗ,ಮಾ.೩೦:ಲೋಕಸಭಾ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ತಾವು ಕಣಕ್ಕಿಳಿಯವುದು ಪ್ರಧಾನಿ ನರೇಂದ್ರಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಇಷ್ಟವಿರಬಹುದು ಎಂದು ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಷ್ಟವಿಲ್ಲವೆಂದಾದರೆ ತಮ್ಮನ್ನು ಇದುವರೆಗೆ ಪಕ್ಷದಿಂದ ತೆಗೆದು ಹಾಕಿಲ್ಲ ಎಂದರು.
ಮೋದಿ ಮತ್ತು ಅಮಿತ್ ಶಾ ಹೇಳಿದರೆ ತಾವು ಸ್ಪರ್ಧೆಯಿಂದ ಹಿಂದೆ ಸರಿಯಬಹುದು ಎಂದು ಬಿ.ಎಸ್ ಯಡಿಯೂರಪ್ಪ ಭಾವಿಸಿರಬಹುದು ಎಂಬುದಾಗಿ ಹೇಳುತ್ತಿದ್ದಾರೆ.ಅಮಿತ್ ಶಾ ಇನ್ನೂ ದೂರವಾಣಿ ಕರೆ ಮಾಡುವುದಿಲ್ಲ. ಅಪ್ಪ-ಮಕ್ಕಳ ಕೈಯಿಂದ ಪಕ್ಷ ಬಿಡಿಸುವ ಇಚ್ಛೆ ಅವರಿಗಿರಬಹುದು ಎಂದರು.
ಯಡಿಯೂರಪ್ಪರವರು ಟಿಕೆಟ್ ಕೊಡಿಸುವುದಾಗಿ ಮೋಸಮಾಡಿದ್ದಾರೆ. ಇದರಿಂದಾಗಿ ಯಾವ ಮುಖವಿಟ್ಟುಕೊಂಡು ತಮ್ಮ ಬಳಿ ಸಂಧಾನಕ್ಕೆ ಬರುತ್ತಾರೆ. ಕೆಜೆಪಿ ಕಟ್ಟಿದರು. ಕೆಜೆಪಿ ಕಟ್ಟುವುದು ಬೇಡ ಎಂದು ತಾವೇ ಅವರಿಗೆ ಸಲಹೆ ನೀಡಿದ್ದೆ. ಆನಂತರ ತಾವೇ ಅವರನ್ನು ಪಕ್ಷಕ್ಕೆ ವಾಪಸ್ ಕರೆತಂದಿದ್ದೆ.ಶೋಭಾಕರಂದ್ಲಾಜೆ ಅವರಿಗೆ ಗೋ ಬ್ಯಾಕ್ ಶೋಭಾ ಎಂದರೂ ಅವರಿಗೆ ಟಿಕೆಟ್ ಕೊಡಿಸಿದರು ಎಂದು ವಾಗ್ದಾಳಿ ನಡೆಸಿದರು.
ತಮ್ಮನ್ನು ಪಕ್ಷದಿಂದ ತೆಗೆದು ಹಾಕಿದರೆ ಮತ್ತೆ ಬಿಜೆಪಿಗೆ ಹೋಗುತ್ತೇನೆ. ಶಿಕಾರಿಪುರದಲ್ಲಿ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಾಕಷ್ಟು ದುಡ್ಡು ಹರಿಸಿದ್ದಾರೆ. ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಣ ಸುರಿದರೂ ಕೇವಲ ೧೧ ಸಾವಿರ ಮತಗಳಿಂದ ವಿಜಯೇಂದ್ರ ಗೆಲುವು ಸಾಧಿಸಿದ್ದರು. ಈ ಬಾರಿಯೂ ಅತೀ ಹೆಚ್ಚು ಹಣ ಸುರಿಯವ ನಿರೀಕ್ಷೆ ಇದೆ ಎಂದರು.
ಅಖಿಲೇಶ್‌ನಿಂದ ಕರೆ
ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ಯಾಧವ್ ತಮಗೆ ದೂರವಾಣಿ ಕರೆ ಮಾಡಿದ್ದರು. ತಾವು ಈ ಕರೆಯನ್ನು ಸ್ವೀಕರಿಸಿರಲಿಲ್ಲ.ಕರೆ ಮಾಡುವಂತೆ ಮೆಸೇಜ್‌ಹಾಕಿದ್ದರು. ಅದಕ್ಕೂ ತಾವು ಪ್ರತಿಕ್ರಿಯೆ ನೀಡಲಿಲ್ಲ. ತಾವು ಹಿಂದುತ್ವವಾದಿಯಾಗಿದ್ದು, ಎಂದಿಗೂ ಮೋಸ ಮಾಡುವುದಿಲ್ಲ ಎಂದರು.