
ಬೆಂಗಳೂರು,ಏ.೧೮:ಮೇ ೧೦ ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇನ್ನು ೨ ದಿನಗಳಷ್ಟೇ ಬಾಕಿ ಉಳಿದಿದ್ದು, ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಬಂಡಾಯದ ಕಿಚ್ಚು ಇನ್ನೂ ಆರಿಲ್ಲ. ಬಿಜೆಪಿಯ ಮತ್ತು ಕಾಂಗ್ರೆಸ್‌ನ ೩ನೇ ಪಟ್ಟಿ ಬಿಡುಗಡೆಯಾದ ನಂತರ ಬಂಡಾಯ ತೀವ್ರ ಸ್ವರೂಪ ಪಡೆದುಕೊಂಡಿದೆ.
ಬಂಡಾಯ ಸ್ಪರ್ಧಿಗಳು ಪಕ್ಷದ ಅಧಿಕೃತ ಅಭ್ಯರ್ಥಿಯ ಗೆಲುವಿಗೆ ತೊಡರುಗಾಲಾಗುವ ಸಾಧ್ಯತೆಗಳಿದ್ದು, ಬಂಡಾಯ
ಎದ್ದಿರುವವರನ್ನು ಸಮಾಧಾನಗೊಳಿಸುವ ಪ್ರಯತ್ನಗಳು ನಡೆದಿವೆಯಾದರೂ ಎರಡೂ ಪಕ್ಷಗಳಲ್ಲಿ ಬಂಡಾಯ ಇನ್ನೂ ಶಮನವಾಗಿಲ್ಲ.
ಬಿಜೆಪಿ ತನ್ನ ಅಭ್ಯರ್ಥಿಗಳ ೩ನೇ ಪಟ್ಟಿಯನ್ನು ನಿನ್ನೆ ಬಿಡುಗಡೆ ಮಾಡುತ್ತಿದ್ದಂತೆಯೇ ಟಿಕೆಟ್ ಕೈ ತಪ್ಪಿದ ಅಭ್ಯರ್ಥಿಗಳು ಬಂಡಾಯದ ಬಾವುಟ ಹಾರಿಸಿರುವುದು, ಕೊಪ್ಪಳ, ಮೈಸೂರಿನ ಕೃಷ್ಣರಾಜ, ಚಿತ್ತಾಪುರ, ಹಗರಿ ಬೊಮ್ಮನಹಳ್ಳಿಗಳಲ್ಲಿ ಬಂಡಾಯ ಕಾಣಿಸಿಕೊಂಡಿದ್ದು, ಬಿಜೆಪಿ ಟಿಕೆಟ್ ಕೈ ತಪ್ಪಿರುವವರು ಕುತಂತ್ರವಾಗಿ ಸ್ಪರ್ಧೆ ಮಾಡುವ ಸಾಧ್ಯತೆಗಳಿವೆ.ಹಗರಿಬೊಮ್ಮನಹಳ್ಳಿಯಲ್ಲಿ ಟಿಕೆಟ್ ಕೈ ತಪ್ಪಿರುವ ಮಾಜಿ ಶಾಸಕ ನೇಮಿರಾಜ ನಾಯಕ ಇಂದು ಬೆಂಬಲಿಗರ ಸಭೆ ನಡೆಸಿದ್ದು, ಪಕ್ಷೇತರರಾಗಿ ಇಲ್ಲವೇ ಜೆಡಿಎಸ್ ಸೇರಿ ಕಣಕ್ಕಿಳಿಯುವ ಸಾಧ್ಯತೆಗಳಿವೆ.ಕೊಪ್ಪಳದಲ್ಲೂ ಬಿಜೆಪಿಟಿಕೆಟ್ ಕೈತಪ್ಪಿರುವ ಸಿ.ವಿ. ಚಂದ್ರಶೇಖರ್ ಬಂಡಾಯವೆದ್ದಿದ್ದಾರೆ. ಇಲ್ಲಿ ಸಂಸದ ಸಂಗಣ್ಣ ಕರಡಿ ಅವರ ಸೊಸೆಗೆ ಬಿಜೆಪಿ ಟಿಕೆಟ್ ನೀಡಿದೆ. ಮೈಸೂರಿನ ಕೃಷ್ಣರಾಜ ಕ್ಷೇತ್ರದ ಟಿಕೆಟ್ ತಪ್ಪಿರುವ ಹಾಲಿ ಶಾಸಕ ರಾಮ್‌ದಾಸ್ ಸಹ ಅಸಮಾಧಾನಗೊಂಡಿದ್ದು, ಇಂದು ಸಂಜೆ ಅವರು ಬೆಂಬಲಿಗರ ಸಭೆ ಕರೆದು ಚರ್ಚೆ ನಡೆಸಿ ಮುಂದಿನ ನಿರ್ಧಾರ ಪ್ರಕಟಿಸಲಿದ್ದಾರೆ.
ಬಂಡಾಯ ಶಮನಕ್ಕೆ ಬಿಜೆಪಿ ನಾಯಕರು ಹರಸಾಹಸ ನಡೆಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಿರಿಯ ನಾಯಕರು ಟಿಕೆಟ್ ಕೈತಪ್ಪಿರವವರ ಜತೆ ಸಂಧಾನ ನಡೆಸಿ ಅವರ ಮನವೊಲಿಸುವ ಕೆಲಸ ನಡೆಸಿದ್ದಾರೆ.
ಕಾಂಗ್ರೆಸ್‌ನಲ್ಲೂ ಆರದ ಬಂಡಾಯ
ಕಾಂಗ್ರೆಸ್ ಪಕ್ಷದಲ್ಲೂ ಬಂಡಾಯದ ಕಿಚ್ಚು ಜೋರಾಗಿಯೇ ಇದ್ದು, ಬೆಂಗಳೂರು, ಮೈಸೂರು, ಶಿವಮೊಗ್ಗ, ದಾವಣಗೆರೆ, ಬಾಗಲಕೋಟೆ ಜಿಲ್ಲೆಯ ಹಲವು ಕ್ಷೇತ್ರಗಳಲ್ಲಿ ಬಂಡಾಯ ಕಾಣಿಸಿಕೊಂಡಿದೆ. ಬೆಂಗಳೂರಿನ ಪುಲಿಕೇಶಿ ನಗರದ ಟಿಕೆಟ್ ಕೈತಪ್ಪಿರುವ ಅಖಂಡ ಶ್ರೀನಿವಾಸಮೂರ್ತಿ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ.
ಹರಪ್ಪನಹಳ್ಳಿಯಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿದ್ದ ಮಾಜಿ ಉಪಮುಖ್ಯಮಂತ್ರಿ ದಿ. ಎಂ.ಪಿ. ಪ್ರಕಾಶ್‌ರವರ ಪುತ್ರಿಯರಾದ ಎಂ.ಪಿ. ಲತಾ, ಎಂ.ಪಿ. ವೀಣಾ ಕಣಕ್ಕಿಳಿಯುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಕೊಟ್ರೇಶ್‌ರವರಿಗೆ ಸಡ್ಡು ಹೊಡೆದಿದ್ದಾರೆ.
ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಬಂಡೆದಿದ್ದಾರೆ.
ಬಳ್ಳಾರಿ ನಗರದಲ್ಲಿ ಮಾಜಿ ಶಾಸಕ ಅನಿಲ್‌ಲಾಡ್ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಕಾಂಗ್ರೆಸ್ ನಾಯಕರು ಬಂಡಾಯ ಶಮನಕ್ಕೆ ಕಸರತ್ತು ನಡೆಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದಿರುವ ಬಗ್ಗೆ ಮಾತುಕತೆ ನಡೆಸಿ ಅವರ ಮುನಿಸು ಶಮನ ಮಾಡುವ ಪ್ರಯತ್ನ ನಡೆಸಿದ್ದಾರೆ.
ಬಂಡಾಯ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿಯದೇ ಪಕ್ಷೇತರರಾಗಿ ಚುನಾವಣಾ ಅಖಾಡದಲ್ಲಿ ಉಳಿದರೆ ಅದು ಪಕ್ಷದ ಅಧಿಕೃತ ಅಭ್ಯರ್ಥಿಗಳ ಗೆಲುವಿಗೆ ಮಾರಕವಾಗುವುದು ನಿಶ್ಚಿತ.
ಕಾಂಗ್ರೆಸ್ ಅಭ್ಯರ್ಥಿಗಳ ಅಂತಿಮ ಪಟ್ಟಿ ಇಂದು
ಮೇ ೧೦ ರಂದು ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ೪ನೇ ಪಟ್ಟಿ ಇಂದು ಬಿಡುಗಡೆಯಾಗಲಿದೆ. ಕಾಂಗ್ರೆಸ್ ೨೦೯ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿದ್ದು, ಬಾಕಿ ಇರುವ ೧೫ ಕ್ಷೇತ್ರಗಳಿಗೆ ಇಂದು ಅಭ್ಯರ್ಥಿಗಳನ್ನ ಪ್ರಕಟಿಸಲಿದೆ.
ಬಾಕಿ ಇರುವ ೧೫ ಕ್ಷೇತ್ರಗಳಲ್ಲಿ ಟಿಕೆಟ್‌ಗೆ ಭಾರಿ ಪೈಪೋಟಿ ಇದ್ದು, ಬಂಡಾಯ ಸ್ಪರ್ಧೆಗೆ ಅವಕಾಶವಾಗದಂತೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲು ಕಾಂಗ್ರೆಸ್ ಪಕ್ಷ ಎಲ್ಲ ರೀತಿಯ ಎಚ್ಚರಿಕೆಯಿಂದ ಹೆಜ್ಜೆ ಇಟ್ಟಿದೆ ಎಂದು ಹೇಳಲಾಗಿದೆ.

ನಟ ಸುದೀಪ್ ಚುನಾವಣಾ ಕಣಕ್ಕೆ
ಈ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಘೋಷಿಸಿ ಬಿಜೆಪಿ ಪರ ಪ್ರಚಾರ ನಡೆಸುವುದಾಗಿ ಹೇಳಿರುವ ನಟ ಸುದೀಪ್‌ರವರನ್ನು ಚುನಾವಣಾ ಕಣಕ್ಕೆ ಕರೆತರಲು ಬಿಜೆಪಿ ನಾಯಕರು ಎಲ್ಲ ಪ್ರಯತ್ನ ನಡೆಸಿದ್ದು, ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ನಟ ಸುದೀಪ್‌ರವರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.
ನಟ ಸುದೀಪ್‌ರವರನ್ನು ಶಿವಮೊಗ್ಗ ಇಲ್ಲವೆ ರಾಯಚೂರಿನ ಮಾನ್ವಿ ಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದು, ಈ ಸಂಬಂಧ ಸುದೀಪ್‌ರವರ ಜತೆ ಕೆಲ ಹಿರಿಯ ನಾಯಕರು ಮಾತನಾಡಿದ್ದಾರೆ ಎನ್ನಲಾಗಿದೆ.ನಟ ಸುದೀಪ್ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಹೇಳುವ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವುದಾಗಿ ಈ ಹಿಂದೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರಾದರೂ ಅವರ ನಿರ್ಧಾರವನ್ನು ಬದಲಿಸುವ ಪ್ರಯತ್ನವನ್ನು ಬಿಜೆಪಿ ನಾಯಕರು ನಡೆಸಿದ್ದಾರೆ.ಚುನಾವಣೆಯಲ್ಲಿ ಸ್ಪರ್ಧಿಸಿ ಎಂದು ಬಿಜೆಪಿ ನಾಯಕರು ನಟ ಸುದೀಪ್‌ರವರಿಗೆ ದುಂಬಾಲು ಬಿದ್ದಿದ್ದಾರೆ. ನಟ ಸುದೀಪ್‌ರವರ ಸ್ಪರ್ಧೆಯಿಂದ ಬಿಜೆಪಿ ಹಲವು ಕ್ಷೇತ್ರಗಳಲ್ಲಿ ಹೆಚ್ಚಿನ ಮತ ಸೆಳೆಯಲು ಸಾಧ್ಯ ಎಂಬ ಲೆಕ್ಕಾಚಾರದ ಹಿನ್ನೆಲೆಯಲ್ಲಿ ನಟ ಸುದೀಪ್‌ರವರನ್ನು ಚುನಾವಣಾ ಕಣಕ್ಕಿಳಿಸಲು ಬಿಜೆಪಿ ನಾಯಕರು ಸರ್ವ ಪ್ರಯತ್ನ ನಡೆಸಿರುವುದು ಗುಟ್ಟೇನಲ್ಲ.ಬಿಜೆಪಿ ೨೨೨ ಕ್ಷೇತ್ರಗಳ ಪೈಕಿ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಮಾನ್ವಿ ಹಾಗೂ ಶಿವಮೊಗ್ಗ ನಗರದ ಟಿಕೆಟ್‌ನ್ನು ಇನ್ನು ಯಾರಿಗೂ ಅಂತಿಮಗೊಳಿಸಿಲ್ಲ. ಈ ಎರಡೂ ಕ್ಷೇತ್ರಗಳ ಪೈಕಿ ಯಾವುದಾದರು ಒಂದು ಕ್ಷೇತ್ರಕ್ಕೆ ನಿಲ್ಲಿ ಎಂದು ನಟ ಸುದೀಪ್‌ರವರನ್ನು ಬಿಜೆಪಿ ನಾಯಕರು ಕೋರಿದ್ದಾರೆ. ಆದರೆ ನಟ ಸುದೀಪ್ ಇನ್ನು ಯಾವ ತೀರ್ಮಾನ ಮಾಡಿಲ್ಲ ಎನ್ನಲಾಗಿದೆ.