ಬಂಡವಾಳ ಹೂಡಿಕೆ ಉದ್ಯೋಗ ಸೃಷ್ಟಿ

ಬೆಂಗಳೂರು,ನ.೨- ಇನ್ವೆಸ್ಟ್ ಕರ್ನಾಟಕ ಸಮಾವೇಶದ ಮೂಲಕ ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಹಾಗೂ ಹೂಡಿಕೆ ವಿಫುಲ ಅವಕಾಶ ದೊರೆಯಲಿದೆ ಎಂದು ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿಂದು ಆರಂಭವಾದ ಇನ್ವೆಸ್ಟ್ ಕರ್ನಾಟಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಅವರು, ಕನ್ನಡ ರಾಜ್ಯೋತ್ಸವದ ನಂತರ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆದಿದೆ. ಕೈಗಾರಿಕಾ ಬೆಳವಣಿಗೆ ದೇಶದ ಪ್ರಗತಿಗೆ ಮುನ್ನುಡಿ, ಈ ಹಿಂದೆಯೇ ಮೈಸೂರು ಒಡೆಯರ್ ರಾಜಮನೆತನ, ಹಲವು ಕೈಗಾರಿಕೆಗಳನ್ನು ಸ್ಥಾಪಿಸಿ ಕೈಗಾರಿಕೆಗೆ ಒತ್ತು ನೀಡಿದ್ದರು. ಸರ್ ಎಂ. ವಿಶ್ವೇಶ್ವರಯ್ಯರವರು ದೇಶದಲ್ಲಿ ಕೈಗಾರಿಕೆಗಳ ಬೆಳವಣಿಗೆಯಾಗದಿದ್ದರೆ ದೇಶ ಅವನತಿಯಾಗುತ್ತದೆ ಎಂದರು. ಕೈಗಾರಿಕೆಗಳು ಉದ್ಯೋಗ ಸೃಷ್ಟಿಯಲ್ಲಿ ಪ್ರಮುಖಪಾತ್ರ ವಹಿಸಿವೆ ಎಂದರು.
ಇನ್ವೆಸ್ಟ್ ಕರ್ನಾಟಕದ ಮೂಲಕ ಉದ್ಯೋಗ ಸೃಷ್ಟಿಯಾಗಿ ಬಂಡವಾಳ ಹರಿದು ಬರಲಿದೆ. ಇದು ನನ್ನ ೩ನೇ ಗ್ಲೋಬಲ್ ಇನ್ವೆಸ್ಟರ್ ಮೀಟ್ ಹಿಂದೆ ೨೦೧೦-೧೨ರಲ್ಲಿ ನಾನು ಕೈಗಾರಿಕಾ ಸಚಿವನಾಗಿದ್ದಾಗ ಹೂಡಿಕೆದಾರರ ಸಮಾವೇಶ ನಡೆಸಿದ್ದೆ ಎಂದರು.
ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಹೂಡಿಕೆದಾರರಿಗೆ ಉತ್ತೇಜನ ನೀಡುವಂತಹ ಉದ್ಯಮಿ ಸ್ನೇಹಿ ನೀತಿಗಳನ್ನು ರೂಪಿಸಿದ್ದಾರೆ. ಉದ್ಯಮಿಗಳ ಅನುಕೂಲಕ್ಕಾಗಿ ಭೂಕಂದಾಯ ಕಾಯ್ದೆಗಳಿಗೂ ತಿದ್ದುಪಡಿಗಳನ್ನು ಮಾಡಲಾಗಿದೆ ಎಂದರು.
ಬೆಂಗಳೂರು ತಂತ್ರಜ್ಞಾನ ನಗರವಾಗಿ ಹೊರ ಹೊಮ್ಮಿದೆ. ರಾಜ್ಯ ಹಲವು ಕ್ಷೇತ್ರಗಳಲ್ಲಿ ನಂ. ೧ ಆಗಿದೆ. ಹೂಡಿಕೆಗೆ ಉತ್ತಮ ಅವಕಾಶಗಳನ್ನು ನಿರ್ಮಿಸಿದೆ. ಸರ್ಕಾರಗಳು ಬದಲಾದರೂ ಉದ್ಯಮಿ ಸ್ನೇಹಿ ನೀತಿಗಳು ಮುಂದುವರೆಸುವುದು ಕರ್ನಾಟಕದ ಹೆಗ್ಗಳಿಕೆ ಎಂದರು.
ಕರ್ನಾಟಕ ರಾಜ್ಯ ಬೆಂಗಳೂರು ಹೊರತುಪಡಿಸಿ, ಬೇರೆ ನಗರಗಳಲ್ಲೂ ಕೈಗಾರಿಕಾ ಬೆಳವಣಿಗೆಗೆ ಅಗತ್ಯವಾದ ಕ್ರಮಗಳನ್ನು ಕೈಗೊಂಡಿದೆ. ಅದರಂತೆ ಈ ಸಮಾವೇಶದಲ್ಲಿ ಹೂಡಿಕೆಯಾಗುವ ಬಹುಪಾಲ ಂಡವಾಳ ಬೆಂಗಳೂರು ಬಿಟ್ಟು ರಾಜ್ಯದ ಬೇರೆ ನಗರಗಳಲ್ಲೂ ಉದ್ಯಮ ಸ್ಥಾಪನೆಗೆ ನೆರವಾಗಲಿದೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು.