ಬಂಡವಾಳಶಾಹಿಗಳಿಂದ ಹಳ್ಳಿಗಳು ನಾಶ: ಮುಜಾಫರ್ ಅಸ್ಸಾದಿ

ಮೈಸೂರು: ಮಾ.02:- ಜಾಗತೀಕರಣ ನೀತಿಗಳಿಂದಾಗಿ ಹಳ್ಳಿಗಳನ್ನು ನಾಶ ಮಾಡಿ ಬಂಡವಾಳಶಾಹಿಗಳು ತಮ್ಮ ಮಾರುಕಟ್ಟೆಗಳನ್ನಾಗಿ ಮಾರ್ಪಾಡಾಗೊಳಿಸುವ ಮೂಲಕ ಮಾಲೀಕರಾಗಿದ್ದ ಜನರೇ ಕಾರ್ಮಿಕರಾಗಿ ನಿರ್ಗತಿಕರಾಗುವ ಸ್ಥಿತಿಗೆ ಬರುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿ ಪೆÇ್ರ.ಮುಜಾಫರ್ ಅಸ್ಸಾದಿ ಕಳವಳ ವ್ಯಕ್ತಪಡಿಸಿದರು.
ಮಾನಸ ಗಂಗೋತ್ರಿಯ ರಾಜ್ಯಶಾಸ್ತ್ರ ವಿಭಾಗ, ಸಾರ್ವಜನಿಕ ಆಡಳಿತ ವಿಭಾಗ ಹಾಗೂ ಕ್ರಿಸ್ತು ಜಯಂತಿ ಕಾಲೇಜಿನ ಸಹಯೋಗದೊಂದಿಗೆ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಜಾಗತೀಕರಣದ ದೃಷ್ಟಿಕೋನಗಳು ಹಾಗೂ ಕಾರ್ಯಸೂಚಿಗಳು ಎಂಬ ಉಪನ್ಯಾಸ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರಿಗೆ ಪ್ರಪಂಚದ ವಿವಿಧ ದೇಶಗಳ ಬೃಹತ್ ಬಂಡವಾಳಶಾಹಿಗಳು ಬಂದಾಗಲೆಲ್ಲ ಇಲ್ಲಿನ ಅನೇಕ ಹಳ್ಳಿಗಳನ್ನು ಅವರು ಮಾರುಕಟ್ಟೆಯನ್ನಾಗಿ ಬದಲಿಸುತ್ತಾರೆ. ಅಲ್ಲಿ ಭೂಮಿ ಕಳೆದುಕೊಂಡ ರೈತರು ಕೂಲಿ ಕಾರ್ಮಿಕರಾಗಿ ಮತ್ತೆ ಅಲ್ಲೇ ನಿರ್ಗತಿಕರಾಗುತಿದ್ದಾರೆ. ಭೂ ಮಾಲೀಕನಾಗಿ ಅನ್ನ ನೀಡುವವರಾಗಿದ್ದವರು ಇಂದು ಒಂದೊತ್ತಿನ ಊಟಕ್ಕೆ ದುಡಿಯುವ ಕಾರ್ಮಿಕರಾಗಿ ಬದಲಾಗುತ್ತಿದ್ದಾರೆ. ಇಂದು ಜಾಗತೀಕರಣ ಇಂತಹ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂದು ಹೇಳಿದರು.
ಪ್ರಸ್ತುತ ಮಾರುಕಟ್ಟೆ ಎಂಬುದು ಹಲವು ಆಯಾಮಗಳನ್ನು ಪಡೆದುಕೊಂಡಿದೆ. ಜೊಮೋಟೊ, ಊಬರ್ ಸೇರಿದಂತೆ ಆಪ್ ಆಧಾರಿತ ಸಂಸ್ಥೆಗಳು ಮಾರುಕಟ್ಟೆ ಪ್ರವೇಶಿಸಿವೆ. ಇದರಿಂದಾಗಿ ಸ್ಥಿರ ಮಾರುಕಟ್ಟೆ ಎಂಬುದೇ ಇಲ್ಲವಾಗಿದೆ. ದಿನೆ ದಿನೆ ಪ್ರಪಂಚ ಚಲನಶೀಲ ಮಾರುಕಟ್ಟೆಗೆ ತನ್ನನ್ನು ತೆರೆದುಕೊಳ್ಳುತ್ತಿದೆ. ಅಲ್ಲದೆ ಜಾಗತಿಕ ಮಾರುಕಟ್ಟೆಯಲ್ಲಿ ಬಂಡವಾಳ ಸ್ಥಿರವಾಗಿ ಉಳಿಯಲು ಸಾಧ್ಯವಿಲ್ಲ ಎಂಬುದಕ್ಕೆ ಅದಾನಿ ಸಮೂಹವೇ ಉದಾಹರಣೆ ಎಂದು ಹೇಳಿದರು.
ಭಾರತದಲ್ಲಿ ಕೃಷಿ, ಸಾರಿಗೆ, ಶಿಕ್ಷಣ, ಗ್ಯಾಸ್ ಹೀಗೆ ಪ್ರತಿಯೊಂದಕ್ಕೂ ಸಹಾಯಧನ ವ್ಯವಸ್ಥೆ ಇರುವ ಕಾರಣ ಜಾಗತೀಕರಣದಿಂದ ಹೆಚ್ಚು ಅಪಾಯವಾಗುತ್ತಿಲ್ಲ. ಖಾಸಗಿ ಮತ್ತು ಸಾರ್ವಜನಿಕ ವಲಯದ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಖಾಸಗಿಯವರು ಯಾವಾಗಲೂ ಜಾಗತಿಕ ದೃಷ್ಟಿಕೋನ ಇಟ್ಟುಕೊಂಡು ವ್ಯವಹರಿಸುತ್ತಾರೆಯೇ ಹೊರತು ಸ್ಥಳೀಯರ ಬಗ್ಗೆ ಚಿಂತಿಸುವುದಿಲ್ಲ. ಎಲ್ಲವೂ ಜಾಗತೀಕರಣವಾದರೆ ಅದರಿಂದ ಆಗುವ ಅನಾನುಕೂಲಗಳು ಅಷ್ಟಿಷ್ಟಲ್ಲ. ಹೀಗಾಗಿ ನಮ್ಮ ತನವನ್ನೂ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥ ಪೆÇ್ರ.ಕೃಷ್ಣ ಹೊಂಬಾಳೆ, ಸಹಾಯ ಪ್ರಾಧ್ಯಾಪಕ ದೀಕ್ಷಿತ್ ಕುಮಾರ್, ಪೆÇ್ರ.ಜಿ.ಟಿ.ರಾಮಚಂದ್ರಪ್ಪ, ಡಾ.ಚಂದ್ರಿಕಾ, ಕ್ರಿಸ್ತು ಜಯಂತಿ ಕಾಲೇಜಿನ ಸಂಯೋಜಕಿ ಡಾ.ಕಾವೇರಿ ಸ್ವಾಮಿ, ಡಾ.ಸೋಮಶೇಖರ್, ಪ್ರವೀಣ್ ಮೆಲ್ಲಹಳ್ಳಿ, ಹನುಮನಾಯಕ್ ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.