ಬಂಡವಾಳರ ಹಿಡಿತದಲ್ಲಿ ದೇಶದ ಆಡಳಿತ; ದಿವಾಕರ್

ವಾಡಿ: ಮಾ.7: ಸ್ವಾತಂತ್ರ್ಯಾನಂತರ ಭಾರತದಲ್ಲಿ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಇತರ ರಾಜಕೀಯ ಪಕ್ಷಗಳು ಸರ್ಕಾರ ನಡೆಸಿದರೂ ದೇಶದ ಬಡವರ ಸಂಕಷ್ಟಗಳು ಬದಲಾಗಲಿಲ್ಲ. ರಾಜಯಂತ್ರ ಬಂಡವಾಳಶಾಹಿಗಳ ಹಿಡಿತಕ್ಕೆ ಜಾರಿದ್ದರಿಂದ ಯಾವೂದೇ ಪಕ್ಷ ಅಧಿಕಾರಕ್ಕೆ ಬಂದರೂ ಶೋಷಣೆಗೆ ಕಡಿವಾಣ ಬೀಳುವುದಿಲ್ಲ ಎಂದು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‍ಯುಸಿಐ) ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕಾಮ್ರೇಡ್ ಎಚ್.ವಿ.ದಿವಾಕರ ಹೇಳಿದರು.

ಪಟ್ಟಣದಲ್ಲಿ ರವಿವಾರ ಏರ್ಪಡಿಸಲಾಗಿದ್ದ ಎಸ್‍ಯುಸಿಐ (ಸಿ) ಪಕ್ಷದ ಸರ್ವ ಸದಸ್ಯರ ಸಭೆಯಲ್ಲಿ ಪ್ರಸಕ್ತ ರಾಜಕೀಯ ಸ್ಥಿತಿಗತಿ ಕುರಿತು ವಿಚಾರ ಮಂಡಿಸಿ ಅವರ ಮಾತನಾಡಿದರು. ಹೆಸರಿಗೆ ಮಾತ್ರ ಒಂದು ರಾಜಕೀಯ ಪಕ್ಷ ಅಧಿಕಾರ ನಡೆಸುತ್ತದೆ. ಆದರೆ ಈ ರಾಜಕೀಯ ಪಕ್ಷಗಳನ್ನು ಬಂಡವಾಳಶಾಹಿಗಳು ನಿಯಂತ್ರಿಸುತ್ತಾರೆ. ಇದೇ ಬಂಡವಾಳಿಗರ ಕೃಪಾಶೀರ್ವಾದದಿಂದಲೇ ಈ ಭ್ರಷ್ಟರು ಅಧಿಕಾರಕ್ಕೆ ಬಂದಿರುತ್ತಾರೆ ಎಂಬ ಕಟುಸತ್ಯವನ್ನು ಜನತೆ ಅರಿಯಬೇಕು. ಬಡವರ ಭವಿಷ್ಯ ಬರೆಯುತ್ತೇವೆ ಎಂದು ಚುನಾವಣೆ ಸಂದರ್ಭದಲ್ಲಿ ಮೊಸಳೆ ಕಣ್ಣೀರು ಸುರಿಸುವ ರಾಜಕಾರಣಿಗಳು, ಅಧಿಕಾರಕ್ಕೆ ಬಂದ ತಕ್ಷಣವೇ ಬಂಡವಾಳಿಗರ ಪರ ಯೋಜನೆಗಳನ್ನು ಜಾರಿಗೊಳಿಸುತ್ತಾರೆ. ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ನಡೆಸುವ ಜನರ ಮೇಲೆಯೇ ಸರ್ಕಾರಗಳು ಪೊಲೀಸ್ ದೌರ್ಜನ್ಯ ನಡೆಸುತ್ತಾರೆ. ಬಡತನ, ನಿರುದ್ಯೋಗ, ಬೆಲೆ ಏರಿಕೆ, ಹಣದುಬ್ಬರ, ಮತ್ತದೇ ಶೋಷಣೆ ಮುಂದು ವರೆಯುತ್ತದೆ ಎಂದರು.

ದೇಶದ ಜನತೆ ಚುನಾವಣೆಗಳ ಮೇಲೆ ಇನ್ನೂ ನಂಬಿಕೆಯಿಟ್ಟಿದ್ದಾರೆ. ಆದರೆ ಇಂದಿನ ಬಹುತೇಕ ರಾಜಕೀಯ ಪಕ್ಷಗಳು ಚುನಾವಣೆಗಳನ್ನೇ ಹೈಜಾಕ್ ಮಾಡುವಷ್ಟು ನೀತಿಗೆಟ್ಟಿದ್ದಾರೆ. ಹಣ, ಹೆಂಡ, ಗಿಫ್ಟ್‍ಗಳನ್ನು ಹಂಚಿ ಮತಗಳನ್ನು ಖರೀದಿಸುತ್ತಾರೆ. ಜಾತಿ, ಧರ್ಮ, ಭಾಷೆಗಳ ಹೆಸರಿನಲ್ಲಿ ಜನರ ಐಕ್ಯತೆ ಒಡೆಯಲು ಇವರು ಕಿಂಚಿತ್ತೂ ಹೇಸುವುದಿಲ್ಲ. ಅಧಿಕಾರದ ಲಾಲಸೆಗೆ ಶಾಸಕರ ಕುದುರೆ ವ್ಯಾಪಾರ ನಡೆಸಿದ ಅನೈತಿಕ ರಾಜಕಾರಣವನ್ನೂ ಈ ದೇಶದ ಜನತೆ ಕಂಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗಗಳು ಜನರ ಜನರ ನಂಬಿಕೆ ಉಳಿಸಿಕೊಳ್ಳುವಲ್ಲಿ ವಿಫಲವಾಗಿವೆ. ಪರಿಣಾಮ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಬಡವರ ಭವಿಷ್ಯ ಬದಲಾಗುವುದಿಲ್ಲ ಎಂಬುದು ಖಚಿತವಾಗಿದೆ. ಮಾಕ್ರ್ಸ್‍ವಾದ ಹಾಗೂ ಲೆನಿನ್‍ವಾದದ ಮೂಲಕ ಭಾರತದಲ್ಲಿ ಸಾಮಾಜಿಕ ಕ್ರಾಂತಿ ನೆರವೇರಿಸಿ ರಾಜಯಂತ್ರವನ್ನೇ ಬದಲಿಸಬೇಕು ಎಂದು ವಿವರಿಸಿದರು.

ಎಸ್‍ಯುಸಿಐ (ಸಿ) ನಗರ ಸಮಿತಿ ಕಾರ್ಯದರ್ಶಿ ವೀರಭದ್ರಪ್ಪ ಆರ್.ಕೆ ಅಧ್ಯಕ್ಷತೆ ವಹಿಸಿದ್ದರು. ಎಐಡಿಎಸ್‍ಒ ಅಧ್ಯಕ್ಷ ವೆಂಕಟೇಶ ದೇವದುರ್ಗ, ಎಐಡಿವೈಒ ಅಧ್ಯಕ್ಷ ಗೌತಮ ಪರ್ತೂರಕರ, ಎಐಕೆಕೆಎಂಎಸ್ ತಾಲೂಕು ಉಪಾಧ್ಯಕ್ಷ ಗುಂಡಣ್ಣ ಎಂ.ಕೆ, ಎಐಯುಟಿಯುಸಿ ಜಿಲ್ಲಾ ಮುಖಂಡ ಶರಣು ಹೇರೂರ, ಮುಖಂಡರಾದ ಮಲ್ಲಣ್ಣ ದಂಡಬಾ, ಶಿವಲಿಂಗ ಹಳ್ಳಿಕರ, ವಿಠ್ಠಲ ರಾಠೋಡ, ದತ್ತು ಹುಡೇಕರ, ಶಿವುಕುಮಾರ ಅಂದೋಲಾ, ಸಿದ್ದಾರ್ಥ ಪಾಲ್ಗೊಂಡಿದ್ದರು.