
ಲಕ್ಷ್ಮೇಶ್ವರ,ಮಾ26: ಮುಂಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಶಿರಹಟ್ಟಿ ಮೀಸಲು ಕ್ಷೇತ್ರಕ್ಕೆ ಸ್ಥಳೀಯ ಬಂಜಾರ ಸಮುದಾಯದ ಅಭ್ಯರ್ಥಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಬೇಕು ಎಂದು ತಾಲ್ಲೂಕಾ ಬಂಜಾರ ಸೇವಾ ಕಲ್ಯಾಣ ಸಂಘದ ಶಿರಹಟ್ಟಿ ತಾಲ್ಲೂಕು ಯುವ ಘಟಕದ ಅಧ್ಯಕ್ಷ ಈರಣ್ಣ ಚವ್ಹಾಣ ಮತ್ತು ಲಕ್ಷ್ಮೇಶ್ವರ ತಾಲ್ಲೂಕು ಘಟಕದ ಅಧ್ಯಕ್ಷ ಸೋಮು ಲಮಾಣಿ ಆಗ್ರಹಿಸಿದರು.
ಈ ಕುರಿತು ಶನಿವಾರ ಪಟ್ಟಣದ ತಾಲ್ಲೂಕಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ಧೇಶಿಸಿ ಅವರು ಮಾತನಾಡಿದರು. ‘ಶಿರಹಟ್ಟಿ ಮೀಸಲು ಕ್ಷೇತ್ರವಾದ ನಂತರ ಒಮ್ಮೆಯೂ ಕಾಂಗ್ರೆಸ್ ಬಂಜಾರ ಸಮುದಾಯದವರಿಗೆ ಟಿಕೆಟ್ ನೀಡಿಲ್ಲ. ಈ ಬಾರಿ ಕ್ಷೇತ್ರದಲ್ಲಿ ಬಂಜಾರ ಸಮುದಾಯಕ್ಕೆ ಸೇರಿದ ಐದು ಜನ ಅಭ್ಯರ್ಥಿಗಳು ಟಕೆಟ್ ಆಕಾಂಕ್ಷಿ ಇದ್ದಾರೆ. ಕಾರಣ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಂಜಾರ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗೆ ಟಿಕೆಟ್ ನೀಡಬೇಕು. ಇಲ್ಲದಿದ್ದರೆ ಸಮುದಾಯದ ಹಿರಿಯರು ತೆಗೆದುಕೊಳ್ಳುವ ನಿರ್ಣಾಯಕ್ಕೆ ಬದ್ಧರಾಗಿ ಇರುತ್ತೇವೆ’ ಎಂದು ಅವರು ತಿಳಿಸಿದರು.
ಹರದಗಟ್ಟಿ ಗ್ರಾಮದ ಗಣೇಶ ನಾಯಕ ಮಾತನಾಡಿ ‘ಬಂಜಾರ ಸಮುದಾಯ ಕಾಂಗ್ರೆಸ್ ಪಕ್ಷದ ಬೆಳೆವಣಿಗೆಯಲ್ಲಿ ತನ್ನದೇ ಆದ ಕೊಡುಗೆ ನೀಡಿದೆ. ಆದರೆ ಪಕ್ಷ ಮಾತ್ರ ಈ ಸಮುದಾಯವನ್ನು ಕಡೆಗಣಿಸುತ್ತಲೇ ಇದೆ. ಈಗ ಮೀಸಲು ಕ್ಷೇತ್ರ ಆಗಿರುವುದರಿಂದ ಬಂಜಾರ ಸಮುದಾಯದವರಿಗೆ ಟಿಕೆಟ್ ನೀಡಲು ವರಿಷ್ಠರಿಗೆ ಅವಕಾಶಗಳು ಇವೆ. ಕಾರಣ ಈ ನಿಟ್ಟಿನಲ್ಲಿ ಪಕ್ಷದ ಮುಖಂಡರು ಚಿಂತನೆ ನಡೆಸಬೇಕು. ಕ್ಷೇತ್ರ ವ್ಯಾಪ್ತಿಯಲ್ಲಿ 32 ತಾಂಡಾಗಳಿದ್ದು ಸುಮಾರು 36-38 ಸಾವಿರ ಲಂಬಾಣಿ ಮತದಾರರಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಸದಾ ಬೆಂಬಲಿಸುತ್ತಾ ಬರುತ್ತಿರುವ ಸಮಾಜದವರು ಈ ಬಾರಿ ಕಾಂಗ್ರೆಸ್ ಪಕ್ಷದ ಟಿಕೇಟ್ ಆಕಾಂಕ್ಷಿಗಳಾಗಿದ್ದಾರೆ. ಈ ಹಿಂದೆ ಮೂರು ಬಾರಿ ಮುಂಡರಗಿ ಭಾಗದವರಿಗೆ ಪಕ್ಷ ಅವಕಾಶ ನೀಡಿದ್ದು, ಈ ಬಾರಿ ಲಕ್ಷ್ಮೇಶ್ವರ ಭಾಗದವರಿಗೆ ಅವಕಾಶ ಒದಗಿಸಲು ಬೇಡಿಕೆ ಮಂಡಿಸುತ್ತಿದ್ದೇವೆ. ಸಮಾಜದ ಯಾರಿಗೆ ಟಿಕೇಟ್ ನೀಡಿದರೂ ಸಹ ಒಗ್ಗೂಡಿ ಕೆಲಸ ಮಾಡುತ್ತೇವೆ. ಪಕ್ಷ ಸಮಾಜದ ಮನವಿಗೆ ಸ್ಪಂದಿಸುವ ಭರವಸೆ ಇದ್ದು, ಟಿಕೇಟ್ ನೀಡದೆ ಇದ್ದರೆ ಜಿಲ್ಲಾ ಅಧ್ಯಕ್ಷರ ಸಮ್ಮುಖದಲ್ಲಿ ಪದಾಧಿಕಾರಿಗಳು ಸೇರಿ ಒಮ್ಮತದ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಈ ವೇಳೆ ಸೋಮಣ್ಣ ಲಮಾಣಿ, ಅರ್ಜುನ ಕಾರಭಾರಿ, ಶೇಖಪ್ಪ ಲಮಾಣಿ, ಮಾನಪ್ಪ ಲಮಾಣಿ, ಮಹೇಶ ಲಮಾಣಿ, ಗಣೇಶ ಆದರಳ್ಳಿ, ಖೇಮಪ್ಪ ಲಮಾಣಿ, ಸಂತೋಷ ಲಮಾಣಿ, ಕೇಶಪ್ಪ ಲಮಾಣಿ, ಕಾಳಪ್ಪ ಲಮಾಣಿ, ದೀಪಕ ನಾಯಕ್ ಸೇರಿ ಅನೇಕರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.