ಬಂಜಾರಾ ಸಮಾಜದ ಎಲ್ಲ ಮಕ್ಕಳು ಸುಶಿಕ್ಷಿತರಾಗಲಿ: ಸಚಿವ ಪ್ರಭು ಚವ್ಹಾಣ್

(ಸಂಜೆವಾಣಿ ವಾರ್ತೆ)
ಬೀದರ: ನ.7:ಬಂಜಾರಾ ಸಮಾಜವು ಸಾಕಷ್ಟು ಹಿಂದುಳಿದಿದ್ದು, ಸಮಾಜದ ಜನತೆ ತಮ್ಮ ಮಕ್ಕಳನ್ನು ಶುಶಿಕ್ಷಿತರಾಗಿಸಲು ಮೊದಲ ಆದ್ಯತೆ ನೀಡಬೇಕು ಎಂದು ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು.ಬಿ ಚವ್ಹಾಣ್ ಅವರು ತಿಳಿಸಿದರು.
ಔರಾದ ಪಟ್ಟಣದ ಹೊರವಲಯದಲ್ಲಿ ನ.6ರಂದು ಬಂಜಾರಾ ಕ್ರಾಂತಿ ದಳದ ವತಿಯಿಂದ ಆಯೋಜಿಸಲಾದ ಬಂಜಾರಾ ಸಮಾಜದ ಬೃಹತ್ ಸಮಾವೇಶ, ಮಾತಾ ಜಗದಂಬಾ ಹಾಗೂ ಸಂತ ಶ್ರೀ ಸೇವಾಲಾಲ ಮಹಾರಾಜರ ದೇವಸ್ಥಾನದ ಭೂಮಿ ಪೂಜೆ ನೆರವೇರಿಸಿ ಸಚಿವರು ಮಾತನಾಡಿದರು.
ದೇಶವು ಸಾಕಷ್ಟು ಪ್ರಗತಿ ಸಾಧಿಸುತ್ತಿದೆ. ಅದಕ್ಕೆ ಅನುಗುಣವಾಗಿ ಬಂಜಾರಾ ಸಮಾಜದಲ್ಲಿಯೂ ಬದಲಾವಣೆ ಕಾಣಬೇಕು. ಸಮಾಜದ ಎಲ್ಲ ಮಕ್ಕಳು ಶಿಕ್ಷಣವಂತರಾಗಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಯುವ ಜನತೆಯು ದುಶ್ಚಟಗಳಿಗೆ ಬಲಿಯಾಗದೇ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದರು.
ಬಂಜಾರಾ ಸಮಾಜದ ಕಲೆ, ಸಂಸ್ಕøತಿ ಹಾಗೂ ಪರಂಪರೆಯು ವಿಶಿಷ್ಟವಾದ್ದು, ಅತ್ಯಂತ ಆಕರ್ಷಣೀಯವಾಗಿದೆ. ಈ ಕಲೆ ಮತ್ತು ಸಂಸ್ಕøತಿಯನ್ನು ಉಳಿಸಿ ಬೆಳೆಸಬೇಕಿದೆ. ಬಂಜಾರಾ ಸಮಾಜದ ಜನತೆಯನ್ನು ತಿದ್ದಿ ತೀಡಿ ಉತ್ತಮ ಬದುಕು ರೂಪಿಸಲು ಪ್ರಯತ್ನಿಸಿದ್ದ ಹಾಗೂ ಬಂಜಾರಾ ಸಮಾಜದ ಏಳಿಗೆಗೆ ಶ್ರಮಿಸಿದ್ದ ಸಂತ ಶ್ರೀ ಸೇವಾಲಾಲ ಮಹಾರಾಜರು ಹಾಗೂ ಪೂಜ್ಯ ರಾಮರಾವ ಮಹಾರಾಜರ ಆರಾಧನೆ ಪ್ರತಿ ಮನೆಯಲ್ಲಿ ನಡೆಯಬೇಕು ಎಂದು ತಿಳಿಸಿದರು.
ನಾನು ಜನ ಸೇವಕ. ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು ನನ್ನ ಆದ್ಯ ಕರ್ತವ್ಯವಾಗಿದೆ. ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಸ್ಪಂದಿಸುತ್ತೇನೆ ಎಂದು ಸಚಿವರು ಸಮಾಜದ ಬಾಂಧವರಿಗೆ ಭರವಸೆ ನೀಡಿದರು. ಸಮಾವೇಶದಲ್ಲಿ ಬಂಜಾರಾ ಸಮಾಜ ಹಾಗೂ ಜನರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಚಿಂತನ-ಮಂಥನ ನಡೆಯಿತು. ಸಮಾಜದ ಮುಖಂಡರು ಸಲಹೆ ಸೂಚನೆಗಳನ್ನು ನೀಡಿದರು.
ಸಮಾಜದ ಮುಖಂಡರಾದ ಬಸವರಾಜ ಪವಾರ ಮಾತನಾಡಿ, ಬಂಜಾರಾ ಸಮಾಜದ ಪರಂಪರೆಯಲ್ಲಿ ಗೋಪೂಜೆಗೆ ಹೆಚ್ಚಿನ ಆದ್ಯತೆ ಇದೆ. ಸಂತ ಶ್ರೀ ಸೇವಾಲಾಲ ಮಹಾರಾಜರ ಆಶಯದಂತೆ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿರುವುದು ಅತ್ಯಂತ ಹೆಮ್ಮಯ ವಿಷಯ. ಅತ್ಯಂತ ಹಿಂದುಳಿದಿರುವ ತಾಂಡಾಗಳನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ತಿಳಿಸಿದರು. ಸೇವಾ ನಗರದ ಪೂಜ್ಯ ಗೋವಿಂದರಾವ ಮಹಾರಾಜ, ಚಿಮ್ಮೆಗಾಂವ್‍ನ ಪೂಜ್ಯ ವಿನಾಯಕ ಮಹಾರಾಜ, ಬಂಜಾರಾ ಕ್ರಾಂತಿ ದಳದ ಮಹಾರಾಷ್ಟ್ರ ರಾಜ್ಯಾಧ್ಯಕ್ಷ ದೇವಿದಾಸ ರಾಠೋಡ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರದೀಪ ಪವಾರ, ಸುಜಿತ ರಾಠೋಡ, ಪ್ರತೀಕ ಚವ್ಹಾಣ್, ದಿಲೀಪ ಚವ್ಹಾಣ ಸೇರಿದಂತೆ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಗಮನ ಸೆಳೆದ ಮೆರವಣಿಗೆ: ಔರಾದ್ ಎಪಿಎಂಸಿ ಆವಣದಿಂದ ಸಮಾವೇಶದ ಮುಖ್ಯ ವೇದಿಕೆಯವರೆಗೆ ಅಲಂಕೃತ ಸಾರೋಟಿನಲ್ಲಿ ಸಚಿವ ಪ್ರಭು ಚವ್ಹಾಣ್ ದಂಪತಿಯ ಭವ್ಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯದ್ದಕ್ಕೂ ಸಂಪ್ರದಾಯಿಕ ವೇಷ ಭೂಷಣಗಳನ್ನು ಧರಿಸಿದ ಮಹಿಳೆಯರ ಬಂಜಾರಾ ನೃತ್ಯ, ಯುವಕರ ಜಯಘೋಷಗಳು, ಬ್ಯಾಂಡ್‍ಗಳು ಎಲ್ಲರ ಗಮನ ಸೆಳೆದವು.