
ಕಲಬುರಗಿ.ಮಾ.17: ಬಂಜಾರಾ ಸಮಾಜಕ್ಕೆ ಇತ್ತೀಚೆಗೆ ಸೇಡಂ ತಾಲ್ಲೂಕಿನ ಮಳಖೇಡ್ ಗ್ರಾಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ ಕೊಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದರು. ಅದೇ ರೀತಿಯಲ್ಲಿ ಕೋಲಿ ಸಮಾಜದ ಪರ್ಯಾಯ ಪದಗಳನ್ನು ಎಸ್‍ಟಿಗೆ ಸೇರಿಸಿ, ಆ ಸಮುದಾಯದವರಿಗೂ ಸಹ ಸಮಾವೇಶದ ಮೂಲಕ ಪ್ರಮಾಣಪತ್ರಗಳನ್ನು ಕೊಡಬೇಕು ಎಂದು ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ತಿಪ್ಪಣ್ಣಪ್ಪ ಕಮಕನೂರ್ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಬಿಜೆಪಿ ನಾಯಕರು ಚುನಾವಣೆಗೆ ಮುನ್ನ ಕೋಲಿ ಸಮಾಜದ ಪರ್ಯಾಯ ಪದಗಳನ್ನು ಎಸ್‍ಟಿಗೆ ಸೇರಿಸುವುದಾಗಿ ಭರವಸೆ ನೀಡಿದ್ದರು. ಅದೇ ರೀತಿ ಇತ್ತೀಚೆಗೆ ತಳವಾರ್ ಹಾಗೂ ಪರಿವಾರ್ ಸಮುದಾಯದವರಿಗೆ ಎಸ್‍ಟಿ ಪ್ರಮಾಣಪತ್ರ ಕೊಡಲಾಗುತ್ತಿದೆ. ಇದರಿಂದ ಬೀದರ್, ಕಲಬುರ್ಗಿ, ಹಾವೇರಿ, ಬಾಗಲಕೋಟೆ, ವಿಜಯಪುರ, ಗದಗ ಸೇರಿದಂತೆ ಉತ್ತರ ಕರ್ನಾಟಕದ ಸಮುದಾಯದವರಿಗೆ ಅನುಕೂಲ ಆಗುತ್ತಿದೆ. ಅಲ್ಲದೇ ಬೀದರ್ ಜಿಲ್ಲೆಯಲ್ಲಿಯೂ ಸಹ ಟೋಕರಿ ಕೋಲಿ ಸಮಾಜದವರು ಎಸ್‍ಟಿ ಪ್ರಮಾಣಪತ್ರ ಪಡೆಯುತ್ತಿದ್ದಾರೆ. ಕೋಲಿ ಸಮಾಜದ ಉಳಿದ ಪರ್ಯಾಯ ಪದಗಳನ್ನು ಸಹ ಎಸ್‍ಟಿಗೆ ಸೇರಿಸಿದರೆ ಬಿಜೆಪಿ ಕೊಟ್ಟ ಭರವಸೆ ಈಡೇರಿದಂತೆ ಆಗುತ್ತದೆ ಎಂದರು.
ಬಿಜೆಪಿ ಸರ್ಕಾರವು ಎಸ್‍ಸಿ, ಎಸ್ಟಿ ಮೀಸಲಾತಿಯನ್ನು ಅವರು ಕೇಳದೇ ಇದ್ದರೂ ಹೆಚ್ಚಿಸಿದೆ. ಅದೇ ರೀತಿ ತಾಂಡಾ ನಿವಾಸಿಗಳಿಗೂ ಸಹ ಹಕ್ಕುಪತ್ರ ಕೊಡಲಾಗಿದೆ. ಈ ಹಿಂದೆ ದಿ. ಡಿ. ದೇವರಾಜ್ ಅರಸು ಅವಧಿಯಲ್ಲಿ ಭೋವಿ ಮತ್ತು ಬಂಜಾರಾ ಸಮುದಾಯಗಳನ್ನು ಎಸ್‍ಸಿಗೆ ಸೇರಿಸಲಾಗಿದೆ. ಆದಾಗ್ಯೂ, ಕೋಲಿ ಸಮಾಜದ ಪರ್ಯಾಯ ಪದಗಳನ್ನು ಎಸ್‍ಟಿಗೆ ಸೇರಿಸುವ ಕುರಿತು ಆಗಿನಿಂದ ಇರುವ ಬೇಡಿಕೆಯೂ ಸಹ ಈಗಲೂ ಸಹ ಮುಂದುವರೆದಿದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡರು ಪ್ರಧಾನಿಯಾಗಿದ್ದಾಗ ಮಾಜಿ ಮುಖ್ಯ ಸಚೇತಕ ದಿ. ವಿಠಲ್ ಹೇರೂರ್ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಯಿತು. ಈಗಲೂ ಸಹ ಲಚ್ಚಪ್ಪ ಜಮಾದಾರ್ ಅವರ ನೇತೃತ್ವದಲ್ಲಿ ಅರೆಬೆತ್ತಲೆ ಹೋರಾಟವೂ ಸಹ ಆಗಿದೆ. ಸ್ವತ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ದೇವಲ್ ಗಾಣಗಾಪುರದಲ್ಲಿ ದಿ. ವಿಠಲ್ ಹೇರೂರ್ ಅವರ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಭರವಸೆ ನೀಡಿದ್ದು, ಕೂಡಲೇ ಈಡೇರಿಸಬೇಕು ಎಂದು ಅವರು ಒತ್ತಾಯಿಸಿದರು.,
ಹತ್ತು ಟಿಕೆಟ್: ಇನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಲಿ ಸಮಾಜಕ್ಕೆ ಒಟ್ಟು ಹತ್ತು ಟಿಕೆಟ್‍ಗಳನ್ನು ಎಲ್ಲ ರಾಜಕೀಯ ಪಕ್ಷಗಳು ಮೀಸಲಿಡಬೇಕು ಎಂದು ತಿಪ್ಪಣ್ಣಪ್ಪ ಕಮಕನೂರ್ ಅವರು ಒತ್ತಾಯಿಸಿದರು.
ಈಗ ಡಾ. ಮಲ್ಲಿಕಾರ್ಜುನ್ ಖರ್ಗೆಯವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಅವರಿಗೆ ಕರ್ನಾಟಕದ, ಅದರಲ್ಲಿಯೂ ಕೋಲಿ ಸಮಾಜದವರ ಕುರಿತು ಗೊತ್ತು. ಸ್ವತ: ಖರ್ಗೆಯವರು ಕೋಲಿ ಸಮಾಜದವರೇ ನಿರ್ಣಾಯಕ ಪಾತ್ರ ವಹಿಸುವ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ಕ್ಷೇತ್ರದಲ್ಲಿ 8 ಬಾರಿ ಆಯ್ಕೆಯಾಗಿದ್ದಾರೆ. ಹಾಗಾಗಿ ಆ ಕ್ಷೇತ್ರದಲ್ಲಿ ಕೋಲಿ ಸಮಾಜದವರಿಗೆ ಟಿಕೆಟ್ ಕೊಡಬೇಕು. ಅದೇ ರೀತಿ ಬಸವಕಲ್ಯಾಣ, ದಕ್ಷಿಣ ಕನ್ನಡ, ದೇವರಹಿಪ್ಪರಗಿ, ಸಿಂದಗಿ ಸೇರಿದಂತೆ ಒಟ್ಟು ಹತ್ತು ಟಿಕೆಟ್‍ಗಳನ್ನು ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಕೊಡಲು ಕೋರಲಾಗಿದೆ. ಯಾವುದೇ ರಾಜಕೀಯ ಪಕ್ಷಗಳು ಹತ್ತು ಟಿಕೆಟ್‍ಗಳನ್ನು ಕೋಲಿ ಸಮಾಜಕ್ಕೆ ಕೊಡದೇ ಹೋದಲ್ಲಿ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕರ್ನಾಟಕ ರಾಜ್ಯ ಕೋಲಿ ಕಬ್ಬಲಿಗ ಎಸ್‍ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾರ್ ಅವರು ಮಾತನಾಡಿ, ಬಿಜೆಪಿ ಸರ್ಕಾರವು ಕೇವಲ ಚುನಾವಣೆಯಲ್ಲಿ ಕೋಲಿ ಸಮಾಜದ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದು ಕೊಟ್ಟ ಭರವಸೆಯಂತೆ ಕೋಲಿ ಸಮಾಜದ ಪರ್ಯಾಯ ಪದಗಳನ್ನು ಎಸ್‍ಟಿಗೆ ಸೇರಿಸದೇ ಮೋಸ ಮಾಡಿದೆ. ಹಲವಾರು ಬಾರಿ ವಿವಿಧ ಹಂತಗಳಲ್ಲಿ ಹೋರಾಟ ಮಾಡಿದರೂ ಸಹ ಇನ್ನೂವರೆಗೂ ಬೇಡಿಕೆ ಈಡೇರಿಸಿಲ್ಲ. ಆದ್ದರಿಂದ ಇದೇ ಮಾರ್ಚ್ 20ರಂದು ಸೋಮವಾರದಂದು ನಗರದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದ ಮೂಲಕ ಬೃಹತ್ ರ್ಯಾಲಿ ಪ್ರಾರಂಭಿಸಿ, ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿ ಹಾಗೂ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿ, ನಂತರ ಜಗತ್ ವೃತ್ತದಲ್ಲಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದರು.
ಶ್ರೀಮತಿ ಮಾಲಾ ಬಿ. ನಾರಾಯಣರಾವ್ ಅವರು ಮಾತನಾಡಿ, ಕೋಲಿ ಸಮಾಜವನ್ನು ಎಸ್‍ಟಿ ಸೇರಿಸಬೇಕು ಎನ್ನುವ ಬೇಡಿಕೆಯನ್ನು ಬಿಜೆಪಿ ಸರ್ಕಾರವು ನಿರ್ಲಕ್ಷಿಸಿದೆ. ಈ ಹಿಂದೆ ದಿ. ವಿಠಲ್ ಹೇರೂರ್ ಅವರ ಮಾದರಿಯಲ್ಲಿಯೇ ಲಚ್ಚಪ್ಪ ಜಮಾದಾರ್ ಅವರು ಸಹ ಚಳುವಳಿಯನ್ನು ಆರಂಭಿಸಿದ್ದಾರೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ರ್ಯಾಲಿಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಕೋರಿದರು.
ಕಾಂಗ್ರೆಸ್ ಹಿರಿಯ ಮುಖಂಡ ರಾಜಗೋಪಾಲರೆಡ್ಡಿ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಭೀಮಣ್ಣ ಸಾಲಿ ಅವರು ಮಾತನಾಡಿ, ಬಸವಕಲ್ಯಾಣ ಕ್ಷೇತ್ರದಲ್ಲಿ ಶ್ರೀಮತಿ ಮಾಲಾ ಬಿ. ನಾರಾಯಣರಾವ್ ಅವರಿಗೆ ಟಿಕೆಟ್ ಕೊಡಬೇಕು. ಅದೇ ರೀತಿ ಕರ್ನಾಟಕದ ಹತ್ತು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಕೋಲಿ ಸಮಾಜದವರಿಗೆ ಟಿಕೆಟ್ ಕೊಡಬೇಕು ಎಂದು ಪಕ್ಷದ ವರಿಷ್ಠರಲ್ಲಿ ಮನವಿ ಮಾಡಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ರಾಮಲಿಂಗ ನಾಟೀಕಾರ್, ಮಲ್ಲಿಕಾರ್ಜುನ್ ಗುಡಬಾ, ಪಿಂಟು ಜಮಾದಾರ್, ಶಿವು ಧಣಿ, ಭೀಮಶಾ ಖನ್ನಾ ಮುಂತಾದವರು ಉಪಸ್ಥಿತರಿದ್ದರು.