ಬಂಜಾರಾ ಭವನಕ್ಕೆ 2.50 ಕೋಟಿ ರೂ. ಬಿಡುಗಡೆ:ಪಿ.ರಾಜೀವ

ಕಲಬುರಗಿ,ನ.10:ಕಲಬುರಗಿ ನಗರದಲ್ಲಿ ನಿರ್ಮಾಣ ಹಂತದಲ್ಲಿಯೇ ನೆನಗುದ್ದಿಗೆ ಬಿದ್ದಿರುವ ಬಂಜಾರಾ ಭವನದ ಉಳಿದ ಕಾಮಗಾರಿಗೆ ಸರ್ಕಾರ 2.50 ಕೋಟಿ ರೂ. ಬಿಡುಗಡೆ ಮಾಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ ಹೇಳಿದರು.
ಗುರುವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಅನುದಾನದಲ್ಲಿ ಉಳಿದ ಕಾಮಗಾರಿ ಪೂರ್ಣಗೊಳಿಸಿ 6 ತಿಂಗಳಲ್ಲಿ ಸಾರ್ವಜನಿಕರಿಗೆ ಭವನ ಅರ್ಪಿಸಲಾಗುವುದು ಎಂದರು.
ನವೆಂಬರ್ ಮಾಸಾಂತ್ಯಕ್ಕೆ ಯಾದಗಿರಿಯಲ್ಲಿ ಕಲಬುರಗಿ-ಯಾದಗಿರಿ ಜಿಲ್ಲೆಗಳ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಬೃಹತ್ ಸಮಾವೇಶ ಆಯೋಜಿಸಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಈಗಾಗಲೆ 352 ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಗುರುತಿಸಿದ್ದು, ಈ ಪೈಕಿ 216 ತಂಡಾಗಳ ಸುಮಾರು 30 ಸಾವಿರ ಜನರಿಗೆ ಯಾದಗಿರಿಯಲ್ಲಿ ಹಕ್ಕು ಪತ್ರ ನೀಡಲಾಗುತ್ತಿದೆ. ಜೊತೆಗೆ ಯಾದಗಿರಿ ಜಿಲ್ಲೆಯ 140 ತಾಂಡಾಗಳ ನಿವಾಸಿಗಳಿಗೆ ಇಲ್ಲಿ ಹಕ್ಕು ಪತ್ರದ ಭಾಗ್ಯ ದೊರೆಯಲಿದೆ ಎಂದರು.
ಯಾದಗಿರಿ ಸಮಾವೇಶದಲ್ಲಿ ಫಲಾನುಭವಿಗಳು ಒಳಗೊಂಡಂತೆ ಒಟ್ಟಾರೆ 1.20 ಲಕ್ಷ ಜನ ಸೇರಲಿದ್ದು, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ. ದೇಶದೆಲ್ಲೆಡೆ ಎಲ್ಲಿಯೂ ಈ ರೀತಿ ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ನೀಡಿಲ್ಲ. ಹೀಗಾಗಿ ಇದು ಗಿನ್ನಿಸ್ ದಾಖಲೆಯಾಗಲಿದ್ದು, ಗಿನ್ನೀಸ್ ತಂಡಕ್ಕೂ ಅಂದು ಆಹ್ವಾನ ನೀಡಲಾಗುತ್ತದೆ ಎಂದ ಅವರು, ಮುಂದಿನ ದಿನಗಳಲ್ಲಿ ಇದೇ ರೀತಿಯ ಸಮಾವೇಶ ವಿಜಯಪುರ, ಶಿವಮೊಗ್ಗ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಆಯೋಜಿಸಲಾಗುವುದು ಎಂದರು.
ಕಲಬುರಗಿ ಜಿಲ್ಲೆಯ 352 ತಾಂಡಾಗಳ ಪೈಕಿ 89 ಸರ್ಕಾರಿ, 199 ಖಾಸಗಿ ಜಮೀನಿನಲ್ಲಿದ್ದು, ಉಳಿದ 65 ತಾಂಡಾಗಳು ಸರ್ಕಾರ ಮತ್ತು ಖಾಸಗಿ ಜಂಟಿ ಜಮೀನಿನಲ್ಲಿವೆ. ಖಾಸಗಿ ಜಮೀನಿನಲ್ಲಿನ ನಿವಾಸಿಗಳಿಗೆ ಹಕ್ಕು ಪತ್ರ ನೀಡಿದ ನಂತರ ಕಾಯ್ದೆಯನ್ವಯ ಜಮೀನಿನ ಮಾಲೀಕರಿಗೆ ಪರಿಹಾರ ನೀಡಲಾಗುವುದು ಎಂದರು.
ಜಿಲ್ಲೆಯ ಅರಣ್ಯ ಪ್ರದೇಶದಲ್ಲಿರುವ ನಿವಾಸಿಗಳಿಗೆ ಹಕ್ಕು ಪತ್ರ ನೀಡಲು ಕೆಲವು ತಾಂತ್ರಿಕ ಸಮಸ್ಯೆಗಳಿವೆ. ಅರಣ್ಯ ಹಕ್ಕು ಸಮಿತಿಗೆ 27 ಸಾಕ್ಷ್ಯಗಳ ಪೈಕಿ ಯಾವುದಾರರು ಒಂದು ನೀಡಬೇಕಾಗುತ್ತದೆ. ಹೀಗಾಗಿ ದಾಖಲೆಗಳನ್ನು ಕಲೆ ಹಾಕುವ ಕೆಲಸ ನಡೆದಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಪಿ.ರಾಜೀವ ಉತ್ತರಿಸಿದರು.

ಕಲಬುರಗಿ ಜಿಲ್ಲೆ ಮಾದರಿ: ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಕಾರ್ಯ ಕಡಿಮೆ ಸಮಯದಲ್ಲಿ ಮುಗಿಸಿದ ಕಲಬುರಗಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಕಾರ್ಯವನ್ನು ಕೊಂಡಾಡಿದ ಪಿ.ರಾಜೀವ ಅವರು, ಕಲಬುರಗಿ ಇತರೆ ಜಿಲ್ಲೆಗೆ ಮಾದರಿಯಾಗಿದೆ. ಇದನ್ನು ರಾಜ್ಯದ ಉಳಿದ 29 ಜಿಲ್ಲೆಗಳಲ್ಲಿ ಅನುಷ್ಠಾನಕ್ಕೆ ತರಲು ಯಶವಂತ ವಿ. ಗುರುಕರ್ ಅವರನ್ನೇ ನೋಡಲ್ ಅಧಿಕಾರಿಯನ್ನಾಗಿಸಲು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳುವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲಬುರಗಿ-ಯಾದಗಿರಿ ಡಿ.ಸಿ.ಸಿ. ಬ್ಯಾಂಕಿನ ಅಧ್ಯಕ್ಷರು ಮತ್ತು ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಚಿಂಚೋಳಿ ಶಾಸಕ ಡಾ.ಅವಿನಾಶ ಜಾಧವ, ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚಂದ್ರ್ಯಾ ನಾಯಕ್ ಇದ್ದರು.