ಬಂಗ್ಲೆ ಹರಾಜು ಪ್ರತಿಕ್ರಿಯೆಗೆ ಸನ್ನಿ ನಕಾರ

ಮುಂಬೈ,ಆ,೨೨- ಮುಂಬೈನ ಜುಹು ಪ್ರದೇಶದಲ್ಲಿರುವ ಸನ್ನಿ ಬಂಗ್ಲೆಯನ್ನು ಹರಾಜು ಹಾಕಲು ಮುಂದಾಗಿರುವ ಬ್ಯಾಂಕ್ ಆಫ್ ಬರೋಡಾ ಕ್ರಮದ ಬಗ್ಗೆ ಪ್ರತಿಕ್ರಿಯಿಸಲು ಬಾಲಿವುಡ್ ನಟ ಹಾಗು ಸಂಸದ ಸನ್ನಿ ಡಿಯೋಲ್ ನಿರಾಕರಿಸಿದ್ದಾರೆ.

ಬಂಗ್ಲೆ ವೈಯಕ್ತಿಕ ವಿಷಯವಾಗಿರುವ ಹಿನ್ನೆಲೆಯಲ್ಲಿ ಈ ಕುರಿತು ತಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಬ್ಯಾಂಕ್ ಆಫ್ ಬರೋಡಾದಿಂದ ೫೬ ಕೋಟಿ ರೂಪಾಯಿ ಸಾಲ ಮಾಡಿದ್ದು ಅದನ್ನು ಮರು ಪಾವತಿ ಮಾಡದ ಹಿನ್ನೆಲೆಯಲ್ಲಿ ಬಂಗ್ಲೆಯನ್ನು ಹರಾಜು ಹಾಕಲು ಬ್ಯಾಂಕ್ ನೋಟೀಸ್ ನೀಡಿ ಅದನ್ನು ಹಿಂಪಡೆದಿತ್ತು.

ಈ ಕುರಿತು ಹೇಳಿಕೆ ನೀಡಲು ಬಯಸಲುವುದಿಲ್ಲ ಇದು ನನ್ನ ವೈಯಕ್ತಿಕ ವಿಷಯ. ಮೈನ್ ಕುಚ್ ಭಿ ಬೋಲುಂಗಾ, ಲಾಗ್ ಗಲತ್ ಮತ್ಲಾಬ್ ನಿಕಲೇಂಗೆ” ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ ಬ್ಯಾಂಕ್ ಆಫ್ ಬರೋಡಾ ಮುಂಬೈನಲ್ಲಿರುವ ನಟ ಮತ್ತು ಸಂಸದ ಸನ್ನಿ ಡಿಯೋಲ್ ಅವರ ಆಸ್ತಿಯ ಹರಾಜು ನೋಟಿಸ್ ಅನ್ನು ಏಕೆ ಹಿಂತೆಗೆದುಕೊಂಡಿತು ಎನ್ನುವುದಕ್ಕೆ ಎರಡು ಪ್ರಮುಖ “ತಾಂತ್ರಿಕ” ಕಾರಣ ಉಲ್ಲೇಖಿಸಿದೆ.

“ಮೊದಲನೆಯದಾಗಿ, ಒಟ್ಟು ಬಾಕಿಗಳು ಮರುಪಡೆಯಬೇಕಾದ ಬಾಕಿಗಳ ನಿಖರ ಪ್ರಮಾಣ ನಿರ್ದಿಷ್ಟಪಡಿಸಿಲ್ಲ. ಎರಡನೆಯದಾಗಿ, ಭದ್ರತಾ ಆಸಕ್ತಿ ನಿಯಮಗಳು ೨೦೦೨ ರ ನಿಯಮ ೮(೬) ರ ಪ್ರಕಾರ ಆಸ್ತಿಯ ಸಾಂಕೇತಿಕ ಸ್ವಾಧೀನ ಆಧರಿಸಿ ಮಾರಾಟದ ಸೂಚನೆ ನೀಡಲಾಗಿದೆ ಎಂದು ಬ್ಯಾಂಕ್ ಸ್ಪಷ್ಟ ಪಡಿಸಿದೆ.

ಈ ತಿಂಗಳ ೧ ರಂದು ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರಿಗೆ ಭೌತಿಕ ಸ್ವಾಧೀನಕ್ಕಾಗಿ ಅರ್ಜಿ ಸಲ್ಲಿಸಲಾಗಿದೆ, ಅನುಮತಿಗಾಗಿ ಬಾಕಿ ಉಳಿದಿದೆ” ಎಂದು ಬ್ಯಾಂಕ್ ಆಫ್ ಬರೋಡಾ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.