ಬಂಗಾಳ ಮುಖ್ಯ ಕಾರ್ಯದರ್ಶಿಯನ್ನು ಮರಳಿ ಕರೆಸಿಕೊಂಡ ಕೇಂದ್ರ ಸರ್ಕಾರ

ಕೋಲ್ಕತ್ತಾ, ಮೇ ೨೯- ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರೊಂದಿಗೆ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿದ್ದ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಆಲಾಪನ್‌ ಬಂದೋಪಾಧ್ಯಾಯರನ್ನು, ಭೇಟಿಯ ಗಂಟೆಗಳ ಅಂತರದಲ್ಲಿ ಮರಳಿ ದಿಲ್ಲಿಗೆ ಕರೆಸಿಕೊಂಡಿದೆ ಎಂದು ತಿಳಿದು ಬಂದಿದೆ.

ರಾಜ್ಯದ ಮನವಿಯ ಮೇರೆಗೆ ಬಂದೋಪಾಧ್ಯಾಯರ ಕಾರ್ಯಾವಧಿಯನ್ನು ಮೂರು ತಿಂಗಳುಗಳ ಕಾಲ ವಿಸ್ತರಿಸಲಾಗಿತ್ತು ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಪಶ್ಚಿಮ ಬಂಗಾಳದಿಂದ ಹಿಂದೆ ಕರೆಸಿಕೊಂಡ ಸರಕಾರವು ಅವರನ್ನು ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯಕ್ಕೆ ನೇಮಿಸಲಾಗಿದೆ. ಹೊಸದಿಲ್ಲಿಯಲ್ಲಿರುವ ಡಿಒಪಿಟಿ ಕಚೇರಿಗೆ ಹಾಜರಾಗುವಂತೆ ಅವರಿಗೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ. ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿದ್ದ ಅವರ ಅಧಿಕಾರಾವಧಿ ಮೇ 24ಕ್ಕೆ ಕೊನೆಗೊಂಡಿದ್ದು, ಮೂರು ತಿಂಗಳ ವಿಸ್ತರಣೆ ಅವಧಿಯನ್ನು ಕೋರಲಾಗಿತ್ತು. ವಿಸ್ತರಣೆಯ ನಾಲ್ಕನೇ ದಿನವೇ ಕೇಂದ್ರ ಸರಕಾರವು ಅವರನ್ನು ಮರಳಿ ಕರೆಸಿಕೊಂಡಿದ್ದು ಸದ್ಯ ಸುದ್ದಿಯಾಗಿದೆ. ನಿನ್ನೆ ಯಾಸ್‌ ಚಂಡಮಾರುತದಿಂದಾದ ಹಾನಿ ಕುರಿತಾದಂತೆ ಪ್ರಧಾನಿ ಮೋದಿಗೆ ಸಿಎಂ ಮಮತಾ ಬ್ಯಾನರ್ಜಿ ಆಲಾಪನ್‌ ಬಂದೋಪಾಧ್ಯಾಯರೊಂದಿಗೆ ತೆರಳಿ ವರದಿ ಸಲ್ಲಿಸಿದ್ದರು. ಆದರೆ ಪುನರ್‌ ಪರಿಶೀಲನಾ ಸಭೆಗೆ ಅವರು ಹಾಜರಾಗಿರಲಿಲ್ಲ. ಇದು ಕೇಂದ್ರ ಸರಕಾರಕ್ಕೆ ಕಸಿವಿಸಿ ಉಂಟು ಮಾಡಿತ್ತು. ಬಂದೋಪಾಧ್ಯಾಯ ಮಮತಾ ಬ್ಯಾನರ್ಜಿಯ ಆಪ್ತರೂ ಆಗಿದ್ದರು ಎಂದು ವರದಿ ಉಲ್ಲೇಖಿಸಿದೆ.