ಬಂಗಾರದ ಅಂಗಾರ ಪ್ರಶಸ್ತಿಗೆ ಪಾರಂಪರಿಕ ವೈದ್ಯ ಡಾ. ಹನಮಂತ್ ಮಳಲಿ ಆಯ್ಕೆ

ಕಲಬುರಗಿ:ಫೆ.13: ಜಿಲ್ಲೆಯ ಅಫಜಲಪುರ ತಾಲ್ಲೂಕಿನ ನೀಲೂರಿನಲ್ಲಿ ಶ್ರೀ ಬಂಗಾರ ಜಡೆ ನೀಲಕಂಠೇಶ್ವರ್ ಜಾತ್ರಾ ಮಹೋತ್ಸವವು ಫೆಬ್ರವರಿ 14ರಿಂದ 24ರವರೆಗೆ ಜರುಗಲಿದೆ. ಈ ಬಾರಿ ಪಾರಂಪರಿಕ ವೈದ್ಯ ಡಾ. ಹನಮಂತ್ ವೈದ್ಯ ಅವರಿಗೆ ಬಂಗಾರದ ಅಂಗಾರ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶ್ರೀ ಬಂಗಾರ ಜಡೆ ನೀಲಕಂಠೇಶ್ವರ್ ಗೋಣಿ ರುದ್ರೇಶ್ವರ್ ಮಠ ಧರ್ಮಾಧಿಕಾರಿ ಶರಣಯ್ಯಸ್ವಾಮಿಗಳು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ನಿತ್ಯ ಮಠದಲ್ಲಿ ಪೂಜೆ, ರುದ್ರಾಭಿಷೇಕ, ಚಂಡಿಕಾ ಹೋಮ, ಹವನಗಳು ನೆರವೇರಲಿವೆ. ಮಹಾದಾಸೋಹಿ ಕಲಬುರ್ಗಿ ಶ್ರೀ ಶರಣಬಸವೇಶ್ವರರ ಮಹಾಪುರಾಣ ನಿತ್ಯ ರಾತ್ರಿ 8 ಗಂಟೆಗೆ ಹಾಗೂ ಧರ್ಮಸಭೆ ಜರುಗಲಿದೆ ಎಂದರು.
ಬಡದಾಳ್ ತೇರಿನಮಠದ ಡಾ. ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು ಸಾನಿಧ್ಯ ವಹಿಸುವರು. ಶ್ರೀನಿವಾಸ್ ಸರಡಗಿಯ ಸದ್ಧರ್ಮ ಶಿರೋಮಣಿ ಡಾ. ಅಪ್ಪಾರಾವ್ ದೇವಿಮುತ್ಯಾ ಅವರ ಮಾರ್ಗದರ್ಶನದಲ್ಲಿ ಜಾತ್ರೆ ನೆರವೇರಲಿದೆ. ಮುದ್ದೇಬಿಹಾಳ್‍ದ ಸಿದ್ದಯ್ಯ ಸ್ವಾಮಿಗಳು, ಮಲಘಾಣದ ಕರ್ಣಯ್ಯ ಸ್ವಾಮಿಗಳು, ಅಫಜಲಪುರದ ಸಿದ್ದಯ್ಯ ಸ್ವಾಮಿ ಹಿರೇಮಠ್, ಮಾದನಹಿಪ್ಪರಗಾದ ಸೋಮನಾಥ್ ಸ್ವಾಮೀಜಿ, ನಿಂಬಾಳ್‍ದ ವಿರುಪಾಕ್ಷಯ್ಯಸ್ವಾಮಿ ಮಠ್ ಅವರು ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸುವರು ಎಂದು ಅವರು ಹೇಳಿದರು.
ಫೆಬ್ರವರಿ 14ರಂದು ಮಹಾಪುರಾಣವನ್ನು ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್, ಗಣ್ಯರಾದ ಮಹಾಂತಪ್ಪ ಹಾಳಮಳ್ಳಿ, ಶಂಕರ್ ಮೇತ್ರೆ, ತಿಪ್ಪಣ್ಣಪ್ಪ ಕಮಕನೂರ್ ಮುಂತಾದವರು ಉದ್ಘಾಟಿಸುವರು. ಪ್ರಥಮ ಬಾರಿಗೆ ಶ್ರೀಮಠದಿಂದ ಬಂಗಾರದ ಅಂಗಾರ ಪ್ರಶಸ್ತಿಯನ್ನು ನೀಡಲಿದ್ದು, ಪಾರಂಪರಿಕ ವೈದ್ಯ ಡಾ. ಹನಮಂತ್ ಮಳಲಿ ಅವರಿಗೆ ಈ ಬಾರಿ ಫೆಬ್ರವರಿ 23ರಂದು ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅವರು ಹೇಳಿದರು.
ಹನ್ನ ಒಂದು ದಿನ ಪರ್ಯಂತರ ಕಾರ್ಯಕ್ರಮಗಳಲ್ಲಿ ನಾಡಿನ ಹರಗುರು ಚರಮೂರ್ತಿಗಳು ಮತ್ತು ನಾಡಿನ ವಿದ್ವಾಂಸರು, ರಾಜಕೀಯ ಗಣ್ಯರು ಆಗಮಿಸುವರು. ಫೆಬ್ರವರಿ 24ರಂದು ಬೆಳಿಗ್ಗೆ ಹತ್ತು ಗಂಟೆಗೆ ಶ್ರೀಮಠದಲ್ಲಿ ಡಾ. ಹನಮಂತ್ ಮಳಲಿ ಅವರಿಂದ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 3 ಗಂಟೆಗೆ ಶ್ರೀ ಬಂಗಾರ ಜಡೆ ನೀಲಕಂಠೇಶ್ವರ್ ದಿವ್ಯ ಮೂರ್ತಿಯು ನೀಲೂರ್ ಗ್ರಾಮದ ರಾಜಬೀದಿಯಲ್ಲಿ ಪಲ್ಲಕ್ಕಿ ಉತ್ಸವ, ನಂತರ 8 ಗಂಟೆಗೆ ಧರ್ಮಸಭೆ ಜರುಗಲಿದೆ. ಬಡದಾಳ್, ಹೊನ್ನಕಿರಣಗಿ, ಆಲಮೇಲ್, ಸೇಡಂ ಮುಂತಾದ ಸ್ವಾಮೀಜಿಗಳು, ಶಾಸಕ ಎಂ.ವೈ. ಪಾಟೀಲ್ ಮುಂತಾದ ಗಣ್ಯರು ಧರ್ಮಸಭೆಯಲ್ಲಿ ಪಾಲ್ಗೊಳ್ಳುವರು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಭಗವಂತರಾವ್ ಕಾಮಜಿ, ಸಂಗಮನಾಥ್ ಹೂಗಾರ್, ನಾಗಲಿಂಗಯ್ಯ ಮಠಪತಿ, ಶರಣಗೌಡ ಪಾಟೀಲ್, ಸಾಯಬಣ್ಣಾ ಹೂಗಾರ್ ಮುಂತಾದವರು ಉಪಸ್ಥಿತರಿದ್ದರು.