ಫ್ಲ್ಯಾಟ್ ಬಾಡಿಗೆ ಪಡೆಯುವ ನೆಪದಲ್ಲಿ 20.22 ಲಕ್ಷ ರೂ.ಪಂಗನಾಮ

ಕಲಬುರಗಿ,ಜು.27-ಫ್ಲ್ಯಾಟ್ ಬಾಡಿಗೆ ಪಡೆಯುವ ನೆಪದಲ್ಲಿ ವ್ಯಕ್ತಿಯೊಬ್ಬರಿಗೆ ಅನಾಮಿಕ ವ್ಯಕ್ತಿಗಳಿಬ್ಬರು 20,22,224 ರೂಪಾಯಿ ಪಂಗನಾಮ ಹಾಕಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಐವಾನ್-ಇ-ಶಾಹಿ ಬಡಾವಣೆಯ ಅಬ್ದುಲ್ ಖದೀರ್ ಪಟೇಲ್ ಎಂಬುವವರೆ ಮೋಸ ಹೋಗಿದ್ದು, ಅವರು ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಅಬ್ದುಲ್ ಖದೀರ್ ಪಟೇಲ್ ಅವರು 22 ವರ್ಷ ಸೌದಿ ಅರೆಬಿಯಾದಲ್ಲಿ ಮೆಕ್ಯಾನಿಕ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನಂತರ 20 ಲಕ್ಷ ರೂ.ಹಣ ಪಡೆದು ಕಲಬುರಗಿಗೆ ಆಗಮಿಸಿ ಕುಟುಂಬದವರೊಂದಿಗೆ ನೆಲೆಸಿದ್ದರು. ನಗರದ ಹಳೆ ಜೇವರ್ಗಿ ರಸ್ತೆಯಲ್ಲಿರುವ ಮೂರು ಅಂತಸ್ತಿನ ಕಟ್ಟಡದಲ್ಲಿ ಫ್ಲ್ಯಾಟ್ ಖರೀದಿಸಿದ್ದರು. ಈ ಫ್ಲ್ಯಾಟ್ ಮೂರು ತಿಂಗಳಿಂದ ಖಾಲಿ ಇದ್ದುದ್ದರಿಂದ ಅವರ ಪುತ್ರ ಅಬ್ದುಲ್ ಮಲ್ಲಿಕ್ ಓಎಲ್‍ಎಕ್ಸ್‍ನಲ್ಲಿ ಫ್ಲ್ಯಾಟ್ ಬಾಡಿಗೆ 12,500, ಮುಂಗಡ 50 ಸಾವಿರ ರೂ.ಎಂದು ಜಾಹೀರಾತು ಹಾಕಿದ್ದರು. ಇದನ್ನು ಗಮನಿಸಿ ವ್ಯಕ್ತಿಯೊಬ್ಬ ಪಟೇಲ್ ಅವರ ಪುತ್ರನಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ. ಈ ವಿಷಯವನ್ನು ಅಬ್ದುಲ್ ಮಲ್ಲಿಕ್ ತಮ್ಮ ತಂದೆಯ ಗಮನಕ್ಕೆ ತಂದಿದ್ದಾರೆ. ಆಗ ವ್ಯಕ್ತಿಯೊಬ್ಬ ಅಬ್ದುಲ್ ಖದೀರ್ ಪಟೇಲ್ ಅವರ ಮೊಬೈಲ್‍ಗೆ ಕರೆ ಮಾಡಿ ಹಿಂದಿ ಭಾಷೆಯಲ್ಲಿ ಮಾತನಾಡುತ್ತ “ತಾನು ಸಂದೀಪ್ ರಾವತ್ ಇಂಡಿಯನ್ ಆರ್ಮಿ ಆಫಿಸರ್ ಆಗಿದ್ದು, ಕಲಬುರಗಿಗೆ ಪೋಸ್ಟಿಂಗ್ ಆಗಿದ್ದು, ಫ್ಲ್ಯಾಟ್ ಬೇಕಾಗಿದೆ. ಓಎಲ್‍ಎಕ್ಸ್‍ನಲ್ಲಿ ನೀವು ಹಾಕಿರುವ ಫ್ಲ್ಯಾಟ್ ನಮಗೆ ಇಷ್ಟವಾಗಿದೆ”ಎಂದಿದ್ದಾನೆ. ಸ್ವಲ್ಪ ಸಯಮದ ನಂತರ ಜೋರಾಸಿಂಗ್ ಎಂಬಾತ ಕರೆ ಮಾಡಿ ಸಂದೀಪ್ ರಾವತ್ ಅವರು ಇಂಡಿಯನ್ ಆರ್ಮಿ ಆಫಿಸರ್ ಆಗಿದ್ದು, ಅವರಿಗೆ ಫ್ಲ್ಯಾಟ್ ಅವಶ್ಯಕತೆ ಇದೆ. ನಾನು ಇಂಡಿಯನ್ ಆರ್ಮಿಯಲ್ಲಿ ಫೈನಾನ್ಸ್ ಮ್ಯಾನೇಜರ್ ಆಗಿದ್ದೇನೆ ಎಂದು ಹೇಳಿ ಅಬ್ದುಲ್ ಖದೀರ್ ಪಟೇಲ್ ಅವರ ವಾಟ್ಸಪ್ ನಂಬರ್‍ಗೆ ದಾಖಲೆಗಳನ್ನು ಕಳುಹಿಸಿ ನಂಬಿಸಿದ್ದಾನೆ. ನಂತರ ನಿಮ್ಮ ಬ್ಯಾಂಕ್ ಖಾತೆಯಿಂದ ನಮ್ಮ ಬ್ಯಾಂಕ್ ಖಾತೆಗೆ ಒಂದು ರೂಪಾಯಿ ಹಾಕಿ ಅಟೋಮ್ಯಾಟಿಕ್ ಆಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮೆ ಯಾಗುತ್ತದೆ ಎಂದು ನಂಬಿಸಿದ್ದಾನೆ. ಆಗ ಅಬ್ದುಲ್ ಖದೀರ್ ಪಟೇಲ್ ಅವರು ಜೋರಾಸಿಂಗ್ ಎಂಬಾತ ತಿಳಿಸಿದ ಬ್ಯಾಂಕ್ ಖಾತೆಗೆ ಒಂದು ರೂಪಾಯಿ ಹಾಕಿದ್ದಾರೆ. ನಂತರ ಅವರ ಖಾತೆಗೆ ಒಂದು ರೂಪಾಯಿ ಜಮೆಯಾದುದ್ದರಿಂದ ವಿಶ್ವಾಸ ಬಂದು ಜೋರಾಸಿಂಗ್ ಹೇಳಿದ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ 20,22,224 ರೂ.ಹಾಕಿದ್ದಾರೆ. ಇನ್ನೂ ಹೆಚ್ಚಿನ ಹಣ ಹಾಕುವಂತೆ ಒತ್ತಾಯಿಸಿದಾಗ ಇವರಿಗೆ ಸಂಶಯ ಬಂದು ತಾವು ಹಾಕಿದ ಹಣ ಮರಳಿ ಹಾಕುವಂತೆ ಕೇಳಿದ್ದಾರೆ. ಆಗ ಆ ವ್ಯಕ್ತಿ ಹಣ ಮರಳಿ ಹಾಕದೇ ಹೋದಾಗ ಮೋಸ ಹೋಗಿರುವುದು ಅರಿವಾಗಿದೆ. ಇಂಡಿಯನ್ ಆರ್ಮಿ ಆಫೀಸರ್ ಮತ್ತು ಇಂಡಿಯನ್ ಆರ್ಮಿ ಫೈನಾನ್ಸ್ ಮ್ಯಾನೇಜರ್ ಎಂದು ಹೇಳಿ ಮೋಸ್ ಮಾಡಿರುವ ಇಬ್ಬರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ದೂರಿನಲ್ಲಿ ಕೋರಿದ್ದಾರೆ.